ಲಾಕ್ ಡೌನ್ ಉಲ್ಲಂಘಿಸಿ ಆದಿಉಡುಪಿ ಹೆಲಿಪ್ಯಾಡ್ ನಲ್ಲಿ ಆಡುತ್ತಿದ್ದ ಯೋಧರನ್ನು ಸರ್ಕಲ್ ಇನ್ಸ್ ಸ್ಪೆಕ್ಟರ್ ತರಾಟೆಗೆ ತೆಗೆದುಕೊಂಡ ವಿಡಿಯೋ ವೈರಲ್ 

ಉಡುಪಿ: ಲಾಕ್ ಡೌನ್ ನಿಯಮ ಉಲ್ಲಂಘಿಸಿ ಆದಿಉಡುಪಿ ಹೆಲಿಪ್ಯಾಡ್ ನಲ್ಲಿ ಆಟವಾಡುತ್ತಿದ್ದ ಯೋಧರನ್ನು ಉಡುಪಿ ನಗರ ಠಾಣೆಯ ಸರ್ಕಲ್ ಇನ್ಸ್ ಸ್ಪೆಕ್ಟರ್ ತರಾಟೆಗೆ ತೆಗದುಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೋ ದೇಶದಲ್ಲಿ ಲಾಕ್ ಡೌನ್ ಘೋಷಣೆಯಾದ ಸಂದರ್ಭದ್ದು ಎನ್ನಲಾಗಿದ್ದು, ಒಂದು ತಿಂಗಳ ಬಳಿಕ ವೈರಲ್ ಆಗಿದೆ.
ಹೆಲಿಪ್ಯಾಡ್ ನಲ್ಲಿ ಆಟವಾಡುತ್ತಿದ್ದ ಯೋಧರನ್ನು ಒಳಹೋಗುವಂತೆ ಇನ್ಸ್ ಸ್ಪೆಕ್ಟರ್ ಸೂಚಿಸುತ್ತಾರೆ. ಈ ವೇಳೆ ಇನ್ಸ್ ಸ್ಪೆಕ್ಟರ್ ಮತ್ತು ಯೋಧನ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ಅದರ ವಿವರ ಈ ಕೆಳಗಿದೆ.
‘ನೀವು ಹೊರಗೆ ಬಂದು ಆಟವಾಡಬೇಡಿ. ದಯವಿಟ್ಟು ಒಳಗೆ ಹೋಗಿ. ಆರ್ಮಿಯವರು ಹೊರದೇಶದಲ್ಲಿಲ್ಲ, ನೀವು ಕೂಡ ಭಾರತದಲ್ಲಿ ಇರುವುದು. ನಿಮಗೂ ಎಲ್ಲ ಕಾನೂನುಗಳು ಅನ್ವಯ ಆಗುತ್ತದೆ ಎಂದು ಇನ್ಸ್ ಸ್ಪೆಕ್ಟರ್ ದಬಾಯಿಸುತ್ತಾರೆ.
ಇದಕ್ಕೆ ಯೋಧ, ನಾವು ಆರ್ಮಿಯವರು ನಾವು ಎಸ್ಪಿಯ ಜತೆ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ ಹೇಳುತ್ತಾರೆ.
ಇದರಿಂದ ಕೆರಳಿದ ಇನ್ಸ್ ಸ್ಪೆಕ್ಟರ್, ನೀವು ಎಸ್ಪಿ ಅಥವಾ ಇನ್ಯಾವುದೇ ಅಧಿಕಾರಿ ಜೊತೆ ಮಾತನಾಡಿ. ಅದು ನನಗೆ ಸಂಬಂಧ ಪಡಲ್ಲ. ಆದ್ರೆ ನೀವು ದಯವಿಟ್ಟು ಹೊರಗಡೆ ಬರಬೇಡಿ, ನೀವು ಒಳಗಡೆ ಹೋಗಿ ಎಂದು ಸೂಚಿಸುತ್ತಾರೆ.
‘ನಾವು ಹೊರಗೆ ಹೋಗಿಲ್ಲ, ಹೆಲಿಪ್ಯಾಡ್ ನ ಆವರಣದೊಳಗೆ ಇದ್ದೇವೆ. ಇಲ್ಲಿ ನಾವು ದೈಹಿಕ ಕ್ಷಮತೆಯನ್ನು ಕಾಪಾಡಲು ಕೆಲವೊಂದು ವ್ಯಾಯಾಮ ಚಟುವಟಿಕೆ ಮಾಡುತ್ತಿದ್ದೇವೆ ಎಂದು ಯೋಧ ಉತ್ತರಿಸುತ್ತಾನೆ.
ಇದರಿಂದ ಸಿಟ್ಟಿಗೆದ್ದ ಇನ್ ಸ್ಪೆಕ್ಟರ್, ದೈಹಿಕ ಕಸರತ್ತುಗಳನ್ನು ನೀವು ನಿಮ್ಮ ಕ್ಯಾಂಪ್ ಹೌಸ್ ನ ಒಳಗೆ ಮಾಡಿ, ಹೊರಗೆ ಬರಬೇಡಿ. ಇದು ಸರ್ಕಾರದ ಆದೇಶ. ಅದನ್ನು ಪಾಲಿಸಿ. ನನ್ನ ಬಳಿ ವಾದ ಮಾಡಬೇಡಿ ಎಂದು ಯೋಧರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ.
ಇದಕ್ಕೆ ಯೋಧ, ನಾವು ನಿಮ್ಮ ಹತ್ತಿರ ವಾದ ಮಾಡಲ್ಲ, ನಾವು ಎಸ್ಪಿ ಜೊತೆ ಮಾತನಾಡುತ್ತೇವೆ ಎನ್ನುತ್ತಾರೆ.
ನೀವು ಎಸ್ಪಿ ಜೊತೆ ಮಾತನಾಡಿ. ಕಾನೂನು ಎಲ್ಲರಿಗೂ ಒಂದೇ ಎಂದು ಇನ್ಸ್ ಸ್ಪೆಕ್ಟರ್ ಪುನರ್ ಉಚ್ಚರಿಸುತ್ತಾರೆ.