ಮಧುರೈ (ತಮಿಳುನಾಡು): ಭಾರತದ ಮಹತ್ವಾಕಾಂಕ್ಷೆಯ ಆದಿತ್ಯ ಎಲ್ 1 ಯೋಜನೆ ಕುರಿತು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರು ಮಾಹಿತಿ ಹಂಚಿಕೊಂಡಿದ್ದು, ಜನವರಿ ತಿಂಗಳ ಮಧ್ಯದಲ್ಲಿ ಆದಿತ್ಯ ಎಲ್ 1 ನೌಕೆಯು ಲಾಂಗ್ರೇಜ್ ಪಾಯಿಂಟ್ನ್ನು ತಲುಪಲಿದೆ ಎಂದು ಹೇಳಿದ್ದಾರೆ.ಇದಕ್ಕೂ ಮುನ್ನ ಇಸ್ರೋ, ನೌಕೆಯು ನಿಗದಿತ ಪಥದಲ್ಲಿ ಸಂಚರಿಸುವಂತೆ ಮಾಡುವ ಪಥ ಸರಿಪಡಿಸುವಿಕೆ ಕಾರ್ಯವು ಯಶಸ್ವಿಯಾಗಿದೆ ಎಂದು ಹೇಳಿತ್ತು. ಜನವರಿ ತಿಂಗಳ ಮಧ್ಯದಲ್ಲಿ ಆದಿತ್ಯ ಎಲ್ 1 ನೌಕೆಯು ಲಾಂಗ್ರೇಜ್ ಪಾಯಿಂಟ್ನ್ನು ತಲುಪಲಿದೆ ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಮಾಹಿತಿ ನೀಡಿದ್ದಾರೆ.
ಭಾರತವು ಈಗಾಗಲೇ ಚಂದ್ರಯಾನ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ. ಇದರ ಬೆನ್ನಲ್ಲೇ ಭಾರತದ ಮೊದಲ ಸೂರ್ಯಯಾನವನ್ನು ಇಸ್ರೋ ವಿಜ್ಞಾನಿಗಳು ಕೈಗೊಂಡಿದ್ದಾರೆ. ಕಳೆದ ಸೆಪ್ಟೆಂಬರ್ 2ರಂದು ಆಂಧ್ರಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಆದಿತ್ಯ ಎಲ್ 1 ನೌಕೆಯನ್ನು ಇಸ್ರೋ ವಿಜ್ಞಾನಿಗಳು ಉಡಾವಣೆ ಮಾಡಿದ್ದರು. ಈ ನೌಕೆಯು 7 ವಿವಿಧ ಪೇಲೋಡ್ಗಳನ್ನು ಹೊತ್ತೊಯ್ದಿದ್ದು, ಸೂರ್ಯನ ವಿಸ್ತೃತ ಅಧ್ಯಯನ ನಡೆಸಲಿದೆ. 7 ಪೇಲೋಡ್ಗಳಲ್ಲಿ 4 ಸೂರ್ಯನ ಕಿರಣಗಳ ಬಗ್ಗೆ ಅಧ್ಯಯನ ನಡೆಸಲಿದ್ದು, ಇತರ 3 ಪೇಲೋಡ್ಗಳು ಸೂರ್ಯ ಮೇಲ್ಮೈ ಬಗ್ಗೆ ಅಧ್ಯಯನ ನಡೆಸಲಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಇಸ್ರೋ ಅಧ್ಯಕ್ಷ ಸೋಮನಾಥ್ ಅವರು, ಭೂಮಿಯಿಂದ ಈಗಾಗಲೇ ಎಲ್1 ಪಾಯಿಂಟ್ ಕಡೆಗೆ ಚಲಿಸುತ್ತಿರುವ ಆದಿತ್ಯ ಎಲ್ 1 ನೌಕೆ ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ನೌಕೆಯು ಎಲ್ 1 ಪಾಯಿಂಟ್ ತಲುಪಲು ಸುಮಾರು 110 ದಿನಗಳನ್ನು ತೆಗೆದುಕೊಳ್ಳುತ್ತದೆ. ಆದ್ದರಿಂದ ಜನವರಿ ತಿಂಗಳ ಮಧ್ಯ ಭಾಗದಲ್ಲಿ ನೌಕೆಯು ಎಲ್ 1 ಪಾಯಿಂಟ್ ತಲುಪುತ್ತದೆ. ಬಳಿಕ ನೌಕೆಯನ್ನು ಲಾಂಗ್ರೇಜ್ ಪಾಯಿಂಟ್ಗೆ ಸೇರಿಸುವ ಕೆಲಸವನ್ನು ಮಾಡಲಾಗುತ್ತದೆ. ಈ ಪ್ರಕ್ರಿಯೆಯನ್ನು ಹಾಲೋ ಆರ್ಬಿಟ್ ಎಂದು ಕರೆಯುತ್ತೇವೆ. ಇದು ದೊಡ್ಡ ಆರ್ಬಿಟ್ ಆಗಿದೆ ಎಂದು ತಿಳಿಸಿದರು.
ಪರೀಕ್ಷಾರ್ಥ ಗಗನಯಾನಕ್ಕೆ ಸಜ್ಜು : ಇದರ ಜೊತೆಗೆ ಇಸ್ರೋ ವಿಜ್ಞಾನಿಗಳು ಮಹತ್ವದ ಗಗನಯಾನ ಯೋಜನೆಯನ್ನು ಹಮ್ಮಿಕೊಂಡಿದ್ದಾರೆ. ಈ ಯೋಜನೆಯ ಪರೀಕ್ಷಾ ವಾಹನ ಉಡಾವಣೆ ಅಕ್ಟೋಬರ್ 21ರಂದು ನಡೆಯಲಿದೆ.ಈ ಎಲ್ 1 ಪಾಯಿಂಟ್ ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿ.ಮೀ. ದೂರದಲ್ಲಿದ್ದು, ಈ ದೂರವನ್ನು ಕ್ರಮಿಸಲು ನೌಕೆಗೆ ಸುಮಾರು 4 ತಿಂಗಳು ಬೇಕಾಗುತ್ತದೆ. ಈ ಭೂಮಿ ಮತ್ತು ಎಲ್ 1 ಪಾಯಿಂಟ್ನ ಅಂತರವು, ಸೂರ್ಯ ಮತ್ತು ಭೂಮಿ ನಡುವಿನ ಶೇ.1ರಷ್ಟಾಗಿದೆ.
ಇಸ್ರೋ ಮಾಹಿತಿ ಪ್ರಕಾರ ಗಗನಯಾನ ಯೋಜನೆ ಮೂಲಕ ಮೂರು ಜನ ಸಿಬ್ಬಂದಿಯನ್ನು ಮೂರು ದಿನಗಳ ಕಾರ್ಯಾಚರಣೆಗಾಗಿ 400 ಕಿಲೋ ಮೀಟರ್ ಭೂಮಿಯಿಂದ ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿ ಮೂವರು ಸಿಬ್ಬಂದಿಯನ್ನು ಸುರಕ್ಷಿತವಾಗಿ ಭೂಮಿಗೆ ಕರೆತರುವ ಮಹತ್ವದ ಯೋಜನೆ ಇದಾಗಿದೆ.ಈ ನೌಕೆಯನ್ನು ಪರೀಕ್ಷಾರ್ಥ ಉಡಾವಣೆ ನಡೆಸಲಾಗುವುದು. ಇದರಲ್ಲಿ ‘ಸಿಬ್ಬಂದಿ ತಪ್ಪಿಕೊಳ್ಳುವ ವ್ಯವಸ್ಥೆ’ ಮುಖ್ಯವಾಗುತ್ತದೆ. ಒಂದು ವೇಳೆ ರಾಕೆಟ್ ಉಡಾವಣೆಗೊಳ್ಳದಿದ್ದಲ್ಲಿ, ಗಗನಯಾನ ಸಿಬ್ಬಂದಿಗಳನ್ನು ರಕ್ಷಣೆ ಮಾಡುವ ದೃಷ್ಟಿಯಿಂದ ಅವರನ್ನು 2 ಕಿ.ಮೀ. ದೂರದವರೆಗೆ ಸಾಗಿಸುವುದು ಮುಖ್ಯವಾಗುತ್ತದೆ. ಈ ಸಂಬಂಧ ಪರೀಕ್ಷಾರ್ಥ ಉಡಾವಣೆ ನಡೆಯಲಿದೆ. ಜನವರಿ ತಿಂಗಳಲ್ಲಿ ನಾಲ್ಕೈದು ನೌಕೆಗಳ ಉಡಾವಣೆ ನಡೆಯಲಿದೆ ಎಂದು ಇಸ್ರೋ ಮುಖ್ಯಸ್ಥ ಸೋಮನಾಥ್ ಹೇಳಿದ್ದಾರೆ.