ಉಡುಪಿ: ರಾಜ್ಯದ ಕರಾವಳಿ ಕಾವಲು ಪಡೆಗೆ ಮಲ್ಪೆಯ ಕರಾವಳಿ ಭದ್ರತಾ ತರಬೇತಿ ಸಂಸ್ಥೆಯಲ್ಲಿ ನೀಡಿರುವ ತರಬೇತಿಯ ಕಾರ್ಯ ವಿಧಾನಗಳನ್ನು ದೈನಂದಿನ ಕರ್ತವ್ಯದಲ್ಲಿ ಸಮರ್ಪಕವಾಗಿ ಅಳವಡಿಸಿಕೊಳ್ಳುವ ಮೂಲಕ ರಾಜ್ಯದ ಕರಾವಳಿ ತೀರವನ್ನು ಸುರಕ್ಷಿತವಾಗಿಡಲು ಸಾಧ್ಯವಾಗಲಿದೆ ಎಂದು ಮಂಗಳೂರು ವಿಭಗದ ಕೋಸ್ಟ್ ಗಾರ್ಡ್ ಡಿಐಜಿ ಕಮಾಂಡರ್ ಪಿ.ಕೆ.ಮಿಶ್ರಾ ಹೇಳಿದರು.
ಅವರು ಶನಿವಾರ ಮಲ್ಪೆಯ ಕರಾವಳಿ ಕಾವಲು ಪೊಲೀಸ್ ಕಚೇರಿಯಲ್ಲಿ ನಡೆದ ಕರಾವಳಿ ಭದ್ರತಾ ತರಬೇತಿ ಸಂಸ್ಥೆಯ ಮೊದಲ ತಂಡದ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸಮುದ್ರದಲ್ಲಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಸೂಕ್ತ ರೀತಿಯ ಸಂವಹನ ಹಾಗೂ ಕಾರ್ಯಚರಣೆ ಕುರಿತ ಸ್ಪಷ್ಟ ಮಾಹಿತಿಗಳು ಎಲ್ಲಾ ಸಿಬ್ಬಂದಿಗಳಿಗೂ ಇರಬೇಕು. ಕೌಶಲ್ಯದಿಂದ ಕೂಡಿದ ಕಾರ್ಯವಿಧಾನವನ್ನು ಅಳವಡಿಸಿಕೊಂಡು ಕರ್ತವ್ಯದ ಸಂದರ್ಭದಲ್ಲಿ ಎದುರಾಗುವ ಎಲ್ಲಾ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಬೇಕು. ಸಿಬ್ಬಂದಿಗಳಿಗೆ ಇನ್ನೂ ಹೆಚ್ಚಿನ ತರಬೇತಿಯ ಅಗತ್ಯವಿದಲ್ಲಿ ಕೋಸ್ಟ್ ಗಾರ್ಡ್ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್. ಮಾತನಾಡಿ, ಕರಾವಳಿ ಭದ್ರತಾ ತರಬೇತಿ ಸಂಸ್ಥೆಯಲ್ಲಿ ಪೊಲೀಸ್ ಸಿಬ್ಬಂದಿಗೆ ಮಾತ್ರವಲ್ಲದೇ ಜಿಲ್ಲೆ ಹಾಗೂ ರಾಜ್ಯದ ಕಂದಾಯ ಮತ್ತು ಗ್ರಾಮೀಣಾಭಿವೃದ್ದಿ ಇಲಾಖೆಯ ಸಿಬ್ಬಂದಿಗಳಿಗೂ ಅಗತ್ಯವಿರುವ ತರಬೇತಿ ನೀಡುವುದರಿಂದ ರಾಜ್ಯದಲ್ಲಿ ಪ್ರಾಕೃತಿಕ ವಿಕೋಪ ಸಂದರ್ಭಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಲಿದೆ ಅಲ್ಲದೇ ಸಾರ್ವಜನಿಕರಿಗೂ ಸಹ ಸರ್ಟಿಫಿಕೇಟ್ ಕೋರ್ಸ್ಗಳ ತರಬೇತಿ ನೀಡುವ ಮೂಲಕ ಈ ತರಬೇತಿ ಸಂಸ್ಥೆಯಲ್ಲಿ ನಿರಂತರವಾಗಿ ಕಾರ್ಯಕ್ರಮಗಳನ್ನು ಆಯೋಜಿಸಬಹುದಾಗಿದೆ ಎಂದರು.
ನಕ್ಸಲ್ ನಿಗ್ರಹ ಪಡೆಯ ಎಸ್ಪಿ ನಿಕ್ಕಂ ಪ್ರಕಾಶ್ ಅಮೃತ್ ಉಪಸ್ಥಿತರಿದ್ದರು.
ಮಲ್ಪೆಯ ಕರಾವಳಿ ಭದ್ರತಾ ತರಬೇತಿ ಸಂಸ್ಥೆಯಲ್ಲಿ ಫೆಬ್ರವರಿ 13 ರಿಂದ 25 ರ ವರೆಗೆ ನಡೆದ ಪ್ರಥಮ ತಂಡದ ಈ ತರಬೇತಿ ಕಾರ್ಯಕ್ರಮದಲ್ಲಿ ರಾಜ್ಯದ ಕರಾವಳಿ ಕಾವಲು ಪೊಲೀಸ್ನ 25 ಸಿಬ್ಬಂದಿಗಳು ಭಾಗವಹಿಸಿದ್ದು, ಇವರಿಗೆ ಸಮುದ್ರದಲ್ಲಿ ಈಜು ತರಬೇತಿ, ಅಪಾಯಕ್ಕೆ ಸಿಲುಕಿದವರ ರಕ್ಷಣೆ, ಅಗ್ನಿ ಅವಘಡಗಳಿಂದ ರಕ್ಷಣೆ, ಸಮುದ್ರದಲ್ಲಿ ಸಂಪರ್ಕ ವ್ಯವಸ್ಥೆಗಳ ಬಳಕೆ, ಬೋಟ್ ಗಳ ಕಾರ್ಯವಿಧಾನ, ಡ್ರೋಣ್ ಬಳಕೆ, ಅಗತ್ಯ ಕಾಯಿದೆಗಳು ಸೇರಿದಂತೆ ರಕ್ಷಣಾ ಕಾರ್ಯಚರಣೆಗೆ ಅತ್ಯಗತ್ಯ ತರಬೇತಿಯನ್ನು ನೀಡಲಾಗಿದೆ.
ತರಬೇತಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಸಿಬ್ಬಂದಿಗಳಿಗೆ ಬಹುಮಾನ ವಿತರಿಸಲಾಯಿತು.
ಕರಾವಳಿ ಕಾವಲು ಪೊಲೀಸ್ನ ಎಸ್ಪಿ ಹಾಗೂ ಕರಾವಳಿ ಭದ್ರತಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಅಬ್ದುಲ್ ಅಹದ್ ಸ್ವಾಗತಿಸಿದರು. ಕರಾವಳಿ ಕಾವಲು ಪೊಲೀಸ್ ನ ಇನ್ಸ್ಪೆಕ್ಟರ್ ಶಂಕರ್ ನಿರೂಪಿಸಿದರು. ಇನ್ಸ್ಪೆಕ್ಟರ್ ಪ್ರಮೋದ್ ವಂದಿಸಿದರು.