ಇ-ಜನ್ಮ ತಂತ್ರಾಂಶದಲ್ಲಿ ಜನನ- ಮರಣ ದಾಖಲಾತಿ ಡಿಜಿಟಲೀಕರಣಕ್ಕೆ ಮಾರ್ಚ್ ವರೆಗೆ ಗಡು: ವೀಣಾ ಬಿ.ಎನ್

ಉಡುಪಿ: 2015 ರಿಂದ ಇ-ಜನ್ಮ ತಂತ್ರಾಂಶದಲ್ಲಿ ಜನನ- ಮರಣ ದಾಖಲಾಗುತ್ತಿದ್ದು, ಅದಕ್ಕಿಂತ ಹಿಂದಿನ ದಾಖಲೆಗಳನ್ನು ಸಹ ತಂತ್ರಾಂಶದಲ್ಲಿ ಕೇಂದ್ರೀಕರಿಸಲು ಪ್ರಸ್ತುತ ಕ್ರಮವಹಿಸಲಾಗುತ್ತಿದೆ. ಈ ಡಿಜಿಟಲೀಕರಣ ಕಾರ್ಯವನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ತಿಳಿಸಿದ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ , ಜನನ- ಮರಣ ದಾಖಲೆಗಳನ್ನು ತಂತ್ರಾಂಶದಲ್ಲಿ ದಾಖಲಿಸುವ ಸಂದರ್ಭದಲ್ಲಿ ಮಾಹಿತಿಗಳನ್ನು ಪೂರ್ಣವಾಗಿ ಪರಿಶೀಲಿಸಿ, ನಿಖರವಾದ ಮಾಹಿತಿ ಅಳವಡಿಸುವುದರೊಂದಿಗೆ ತಿದ್ದುಪಡಿಗಳನ್ನು ಸಾಧ್ಯವಾದಷ್ಟು ಕಡಿಮೆಗೊಳಿಸುವಂತೆ ಸೂಚಿಸಿದರು.

ಅವರು ಶುಕ್ರವಾರ ಅಪರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜನನ ಮರಣ ನೋಂದಣಿ ಕುರಿತ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇ-ಜನ್ಮ ತಂತ್ರಾಂಶದಲ್ಲಿ ಜನನ ಮತ್ತು ಮರಣ ಘಟನೆಗಳ ನೋಂದಣಿ ಮಾಡುವುದು ಕಡ್ಡಾಯವಾಗಿದ್ದು, ಘಟನೆಗಳನ್ನು ದಾಖಲಿಸಿ, ನೋಂದಣಾಧಿಕಾರಿಗಳು ಡಿಜಿಟಲ್ ಕೀ ಮೂಲಕ ನೋಂದಣಿಯನ್ನು ಅಂಗೀಕರಿಸಲಾಗುತ್ತಿದ್ದು, ಈ ಕುರಿತ ಪ್ರಗತಿಯನ್ನು ಅಪರ ಜಿಲ್ಲಾಧಿಕಾರಿಗಳು ಪರಿಶೀಲಿಸಿದರು.

ಸಭೆಯಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ರಾಧಾಕೃಷ್ಣ ಅಡಿಗ ಹಾಗೂ ವಿವಿಧ ಇಲಾಖೆಯ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.