ಉಡುಪಿ: ಕೋಲ್ಕೊತ್ತಾದ ಡಾ ಬಿ.ಸಿ ರಾಯ್ ಅವರ ಜನ್ಮ ದಿನದ ಅಂಗವಾಗಿ ಆಚರಿಸುವ ವೈದ್ಯರ ದಿನಾಚರಣೆಯ ಪ್ರಯುಕ್ತ ಉಡುಪಿಯ ಆದರ್ಶ ಆಸ್ಪತ್ರೆ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ವೈದರಿಗೆ ಸನ್ಮಾನ ಕಾರ್ಯಕ್ರಮ ಮತ್ತು ಬೃಹತ್ ಉಚಿತ ವೈದ್ಯಕೀಯ ತಪಾಸಣಾ ಶಿಬಿರವು ಆದಿತ್ಯವಾರ ಜೂನ್ 3 ರಂದು ಬೆಳಿಗ್ಗೆ 10.00 ಗಂಟೆಗೆ ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ, ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳು ನಮ್ಮ ಜೀವನದಲ್ಲಿ ಬಹಳ ಪ್ರಾಮುಖ್ಯತೆಯನ್ನು ವಹಿಸುತ್ತಾರೆ. ಕೊರೋನಾ ಸಂಕಷ್ಟ ಕಾಲದಲ್ಲಿ ಇದು ಸ್ಪಷ್ಟವಾಯಿತು. ಕೊರೋನಾದಂತಹ ಕಾಲದಲ್ಲೂ ಉಡುಪಿ ಜಿಲ್ಲೆಯ ಎಲ್ಲ ಆಸ್ಪತ್ರೆಗಳು ಒಳ್ಳೆಯ ಸೇವೆ ನೀಡಿವೆ. ಅದರಲ್ಲೂ ಆದರ್ಶ ಆಸ್ಪತ್ರೆಯು ಸರಕಾರದ ಜೊತೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಿದೆ. ಪ್ರತಿ ವರ್ಷವೂ ಹಳ್ಳಿಗಾಡಿನ ವೈದ್ಯರ ಸೇವೆಯನ್ನು ಗುರುತಿಸಿ ಆಸ್ಪತ್ರೆಯ ವತಿಯಿಂದ ಅವರನ್ನು ಸನ್ಮಾನಿಸಿ ಗೌರವಿಸುವುದು ಅಭಿನಂದನೀಯ ಕಾರ್ಯ. ಇದರ ಜೊತೆಗೆ ಉಚಿತ ವೈದ್ಯಕೀಯ ತಪಾಸಣೆಗಳನ್ನು ಕೈಗೊಂಡು ಸಾರ್ವಜನಿಕರಿಗೂ ಒಳ್ಳೆಯ ಸೇವೆ ನೀಡುತ್ತಿದೆ. ಜಿಲ್ಲೆಯ ಕಾರ್ಮಿಕ ಬಂಧುಗಳಿಗೂ ಉಚಿತ ವೈದ್ಯಕೀಯ ಸೇವೆ ನೀಡಿ ಸಮಾಜ ಸೇವೆ ಮಾಡಿರುವ ಆದರ್ಶ ಆಸ್ಪತ್ರೆ ನಿಜವಾಗಿಯೂ ಒಂದು ಆದರ್ಶ. ಆಸ್ಪತ್ರೆ ಕೈಗೊಳ್ಳುತ್ತಿರುವ ಎಲ್ಲಾ ಕಾರ್ಯಗಳೂ ಶ್ಲಾಘನೀಯ ಎಂದ ಅವರು ಜಿಲ್ಲೆಯಲ್ಲಿ 100% ಕೋವಿಡ್ ಲಸಿಕೀಕರಣಕ್ಕೆ ಶ್ರಮಿಸಿದ ಎಲ್ಲ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳನ್ನು ಅಭಿನಂದಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ್ ಉಡುಪ ಮಾತನಾಡಿ, ಬಡಜನರ ಸೇವೆ ಮಾಡುವ ಆದರ್ಶ ಆಸ್ಪತ್ರೆಯು ಮಿನುಗುವ ನಕ್ಷತ್ರ, ಬಡವರ ಪಾಲಿನ ಸೌಭಾಗ್ಯ ಸಂಜೀವಿನಿ. ಇದಕ್ಕೆ ಡಾ. ಚಂದ್ರಶೇಖರ್ ರವರ ಆದರ್ಶ ವ್ಯಕ್ತಿತ್ವವೇ ಕಾರಣ ಎಂದು ಹೇಳಿದರು.
ಆದರ್ಶ ಆಸ್ಪತ್ರೆಯ ನರರೋಗ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಪ್ರೋ. ಎ ರಾಜ ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳನ್ನು ಸ್ವಾಗತಿಸಿದ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಜಿ.ಎಸ್ ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿ, ಬದಲಾದ ಸನ್ನಿವೇಶದಲ್ಲಿ ವೈದ್ಯರ ಮತ್ತು ರೋಗಿಗಳ ಮಧ್ಯದ ಬಾಂಧವ್ಯವು ಶಿಥಿಲಗೊಳ್ಳುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ನಗರದ ವೈದ್ಯರು ಸೌಕರ್ಯಗಳೊಂದಿಗೆ ಸೇವೆ ನೀಡುತ್ತಾರೆ ಆದರೆ ಹಳ್ಳಿಗಾಡಿನ ವೈದ್ಯರು ಸವಾಲುಗಳನ್ನು ಎದುರಿಸಿ ರೋಗಿಗಳ ಶುಶ್ರೂಷೆ ಮಾಡುತ್ತಾರೆ. ಆ ಕಾರಣದಿಂದ ರಾಷ್ಟ್ರೀಯ ವೈದ್ಯರ ದಿನಾಚರಣೆಯಂದು ಹಳ್ಳಿಗಾಡಿನ ವೈದ್ಯರನ್ನು ಸನ್ಮಾನಿಸಿ ಗೌರವಿಸುವ ಕಾರ್ಯವನ್ನು ಆಸ್ಪತ್ರೆಯ ವತಿಯಿಂದ ಪ್ರತಿವರ್ಷವೂ ಮಾಡಲಾಗುತ್ತಿದೆ ಎಂದರು.
ವೈದ್ಯರ ದಿನಾಚರಣೆಯ ಪ್ರಯುಕ್ತ ಮಣಿಪುರ ಪ್ರಾಥಮಿಕ ಆರೋಗ್ಯ ಕೆಂದ್ರದ ಡಾ. ಅಂಜಲಿ ವಾಗ್ಲೆ, ಬಸ್ರೂರು ಪ್ರಾಥಮಿಕ ಕೇಂದ್ರದ ಡಾ.ವಿದ್ಯಾ , ಹಟ್ಟಿಯಂಗಡಿ ಪ್ರಾಥಮಿಕ ಕೇಂದ್ರದ ಡಾ. ರಂಗನಾಥ್ ವೈ.ಪಿ, ಕಟಪಾಡಿ ಸರಸ್ವತಿ ಕ್ಲಿನಿಕ್ ನ ಡಾ.ಎ ರವೀಂದ್ರನಾಥ್ ಶೆಟ್ಟಿ, ಸಾಲ್ಮರದ ಹೆಗ್ಡೆ ಕ್ಲಿನಿಕ್ ನ ಡಾ.ಪ್ರಶಾಂತ್ ಹೆಗ್ಡೆ ಮತ್ತು ಕಟಪಾಡಿಯ ಕೃಷ್ಣ ಕ್ಲಿನಿಕ್ ನ ಡಾ. ಶ್ರೀಷ ರಾವ್ ಕೊರಡ್ಕಲ್ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಬಳಿಕ ಉಚಿತ ವೈದ್ಯಕೀಯ ತಪಾಸಣಾ ಶಿಬಿರವು ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ನಡೆಯಿತು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಜಿಲ್ಲಾ ಸರ್ಜನ್ ಡಾ. ಮಧುಸೂಧನ್ ನಾಯಕ್, ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ವಿಮಲಾ ಚಂದ್ರಶೇಖರ್, ಆಸ್ಪತ್ರೆಯ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು ಮತ್ತು ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶ್ರೀಮತಿ ಶಶಿಲೇಖಾ ಎಂ ಶೆಟ್ಟಿ ಪ್ರಾರ್ಥಿಸಿದರು, ಡಯಟೀಷಿಯನ್ ಶ್ರೀಮತಿ ಅನುಶ್ರೀ ನಿರೂಪಿಸಿದರು.