ನಟ ಶ್ರೀನಗರ ಕಿಟ್ಟಿ ಹಾಗೂ ಮೋಹಕ ತಾರೆ ರಮ್ಯಾರ ಕೆಮಿಸ್ಟ್ರಿ ಸಿನಿಪ್ರೇಮಿಗಳನ್ನು ವಿಶೇಷವಾಗಿ ಆಕರ್ಷಿಸಿತ್ತು. ಸಿನಿಮಾದ ಹಾಡುಗಳು, ಸಂಭಾಷಣೆಗಳು ಬಹಳ ಹಿಟ್ ಆಗಿದ್ದವು. ಚಿತ್ರೀಕರಣ ಮಾಡಿದ್ದ ವಿಧಾನವೂ ಕನ್ನಡಿಗರಿಗೆ ಹಿಡಿಸಿತ್ತು. ಇದೀಗ ಸುಮಾರು 12 ವರ್ಷಗಳ ಬಳಿಕ ‘ಸಂಜು ವೆಡ್ಸ್ ಗೀತಾ ಪಾರ್ಟ್ 2’ ತಯಾರಿಗೆ ಸಿದ್ಧತೆ ನಡೆಯುತ್ತಿದೆ.2011ರಲ್ಲಿ ತೆರೆಕಂಡು ಬ್ಲಾಕ್ ಬಸ್ಟರ್ ಹಿಟ್ ಆದ ಸಿನಿಮಾ ‘ಸಂಜು ವೆಡ್ಸ್ ಗೀತಾ’. ಒಂದು ದಶಕ ಕಳೆದರೂ ಇಂದಿಗೂ ಚಿತ್ರದ ಕ್ರೇಜ್ ಕಡಿಮೆಯಾಗಿಲ್ಲ.’ಸಂಜು ವೆಡ್ಸ್ ಗೀತಾ’ ಪಾರ್ಟ್ 2 ಘೋಷಣೆಯಾಗಿದೆ. ನಾಯಕಿಯಾಗಿ ಮೋಹಕ ತಾರೆ ರಮ್ಯಾ ಇರ್ತಾರಾ ಅನ್ನೋದೇ ಅಭಿಮಾನಿಗಳನ್ನು ಕಾಡುತ್ತಿರುವ ಪ್ರಶ್ನೆ.
ಫಸ್ಟ್ ಲುಕ್ನಲ್ಲೇನಿದೆ?: ಶ್ರೀನಗರ ಕಿಟ್ಟಿ ‘ಸಂಜು ವೆಡ್ಸ್ ಗೀತಾ ಪಾರ್ಟ್ 2’ ಇದರ ಬಿಗ್ ಅಪ್ಡೇಟ್ ನೀಡಿದ್ದಾರೆ. ಒಂದೇ ಪೋಸ್ಟರ್ನಲ್ಲಿ ಎಲ್ಲ ವಿಷಯಗಳನ್ನು ತಿಳಿಸಿದ್ದಾರೆ. ನೋಟ್ ಬುಕ್ನ ಹಾಳೆಯಲ್ಲಿ ಶ್ರೀನಗರ ಕಿಟ್ಟಿ ಫೋಟೋವನ್ನು ಚಿತ್ರಿಸಲಾಗಿದೆ. ದಾಡಿ ಬಿಟ್ಟುಕೊಂಡು, ಹಣೆಗೆ ಗಾಯ ಮಾಡಿಕೊಂಡಿರುವ ಲುಕ್ನಲ್ಲಿ ನಟ ಕಾಣಿಸಿಕೊಂಡಿದ್ದಾರೆ. ಪಕ್ಕದಲ್ಲೇ ಒಂದು ಹುಡುಗಿ ನಡೆದುಕೊಂಡು ಹೋಗುತ್ತಿರುವಂತೆ ತೋರಿಸಲಾಗಿದೆ. ಅವಳನ್ನೇ ಕಿಟ್ಟಿ ನೋಡುತ್ತಿರುವಂತೆ ಬಿಂಬಿಸಲಾಗಿದೆ. ಆದರೆ ಆ ಹೀರೋಯಿನ್ ಯಾರು ಅನ್ನೋದು ಮಾತ್ರ ರಿವೀಲ್ ಆಗಿಲ್ಲ.ಶ್ರೀನಗರ ಕಿಟ್ಟಿ ನಿನ್ನೆಯಷ್ಟೇ ತಮ್ಮ 46ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ತಮ್ಮ ಅಭಿಮಾನಿಗಳಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ. ಸಂಜು ವೆಡ್ಸ್ ಗೀತಾ ಪಾರ್ಟ್ 2 ಫಸ್ಟ್ ಲುಕ್ ಹಂಚಿಕೊಂಡಿದ್ದಾರೆ. ನವೆಂಬರ್ನಿಂದ ಅಂದರೆ ಚಳಿಗಾಲ ಪ್ರಾರಂಭವಾಗುತ್ತಿದ್ದಂತೆ ಸಿನಿಮಾ ಶೂಟಿಂಗ್ ಕೂಡ ಪ್ರಾರಂಭವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಸಂಜು ವೆಡ್ಸ್ ಗೀತಾ’ದಲ್ಲಿ ಕಿಟ್ಟಿಗೆ ರಮ್ಯಾ ನಾಯಕಿಯಾಗಿದ್ದರು. ಪಾರ್ಟ್ 2ನಲ್ಲೂ ರಮ್ಯಾ ಅವರೇ ನಟಿಸಲಿದ್ದಾರಾ? ಅನ್ನೋದು ಸದ್ಯದ ಪ್ರಶ್ನೆ. ಈ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಅಭಿಮಾನಿಗಳಿಗೆ ಮಾತ್ರ ಮೋಹಕ ತಾರೆಯೇ ನಾಯಕಿಯಾಗಬೇಕು ಅನ್ನೋದು ಆಸೆ. ಈ ಬಗ್ಗೆ ನಿರ್ದೇಶಕರು ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ಆದರೆ ಪೋಸ್ಟರ್ನಲ್ಲಿ ‘ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಪ್ರೆಸೆಂಟ್ಸ್’ ಅನ್ನೋ ಹೆಸರನ್ನು ಕೂಡ ಸೇರಿಸಲಾಗಿದೆ. ಹಾಗಾಗಿ ರಮ್ಯಾ ಕೂಡ ಈ ಸಿನಿಮಾದಲ್ಲಿ ಇರ್ತಾರಾ? ಅನ್ನೋ ಕುತೂಹಲ ಮೂಡಿದೆ.
ಸಿನಿಮಾ ಕಾಸ್ಟಿಂಗ್ ವಿಚಾರವಾಗಿ ಯಾವುದೇ ಮಾಹಿತಿಯನ್ನು ಸದ್ಯ ಚಿತ್ರತಂಡ ಹಂಚಿಕೊಂಡಿಲ್ಲ. ಇನ್ನೂ ಈ ಸಿನಿಮಾದಲ್ಲಿ ಮ್ಯೂಸಿಕ್ ಪ್ರಮುಖ ಪಾತ್ರ ವಹಿಸಲಿದೆ. ಏಕೆಂದರೆ 12 ವರ್ಷಗಳ ಹಿಂದೆ ಬಿಡುಗಡೆಯಾದ ‘ಸಂಜು ವೆಡ್ಸ್ ಗೀತಾ’ ಸಿನಿಮಾದ ‘ಗಗನವೇ ಬಾಗಿ’, ‘ಸಂಜು ಮತ್ತು ಗೀತಾ’ ಹಾಡುಗಳನ್ನು ಇಂದಿಗೂ ಜನ ಗುನುಗುತ್ತಿದ್ದಾರೆ. ಹೀಗಾಗಿ ಪಾರ್ಟ್ 2ನಲ್ಲೂ ಇಂತಹದ್ದೇ ಉತ್ತಮ ಹಾಡುಗಳು ಬರಬಹುದೇ? ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಇದು ಚಿತ್ರತಂಡಕ್ಕೆ ನಿಜಕ್ಕೂ ಸವಾಲು ಅಂತಲೇ ಹೇಳಬಹುದು. ಒಟ್ಟಾರೆಯಾಗಿ ದಶಕಗಳ ಹಿಂದೆ ಸೂಪರ್ ಹಿಟ್ ಆಗಿದ್ದ ‘ಸಂಜು ವೆಡ್ಸ್ ಗೀತಾ’ ಇದರ ಪಾರ್ಟ್ 2 ಬರುತ್ತಿರುವುದು ಸಿನಿ ಪ್ರೇಕ್ಷಕರಿಗೆ ಖುಷಿ ವಿಚಾರವಾಗಿದೆ.
ಪೋಸ್ಟರ್ನಲ್ಲಿ ‘ಸಂಜು ವೆಡ್ಸ್ ಗೀತಾ 2’ವನ್ನು ರಕ್ತದ ಬಣ್ಣದಲ್ಲೇ ಬರೆಯಲಾಗಿದೆ. ಅದರ ಮೇಲೆ ಲೈಫ್ ಈಸ್ ಬ್ಯೂಟಿಫುಲ್ ಎಂಬ ಬರಹವೂ ಇದೆ. ಸಿನಿಮಾವನ್ನು ನಾಗಶೇಖರ್ ಅವರೇ ನಿರ್ದೇಶಿಸುತ್ತಿದ್ದಾರೆ. ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಮುಂದಿನ ವರ್ಷ 2024ರ ದಸರಾ ಹಬ್ಬದ ಸಮಯದಲ್ಲಿ ‘ಸಂಜು ವೆಡ್ಸ್ ಗೀತಾ 2’ ಬಿಡುಗಡೆಗೆ ಮುಹೂರ್ತ ನೀಡಲಾಗಿದೆ. ಇದೇ ವರ್ಷ ಚಳಿಗಾಲ ಪ್ರಾರಂಭವಾಗುತ್ತಿದ್ದಂತೆ ಶೂಟಿಂಗ್ ಕೂಡ ಪ್ರಾರಂಭವಾಗಲಿದೆ.