ಬೆಂಗಳೂರು: ಡ್ರಗ್ಸ್ ಜಾಲದ ನಂಟು ಆರೋಪದ ಹಿನ್ನೆಲೆಯಲ್ಲಿ ಸ್ಯಾಂಡಲ್ ವುಡ್ ನ ಖ್ಯಾತ ನಟಿ ರಾಗಿಣಿ ದ್ವಿವೇದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಇಂದು ಬೆಳಿಗ್ಗೆ ಯಲಹಂಕದ ಅನನ್ಯ ಅಪಾರ್ಟ್ಮೆಂಟ್ ಸಮುಚ್ಚಯದಲ್ಲಿರುವ ರಾಗಿಣಿ ಅವರ ಫ್ಲ್ಯಾಟ್ ಮೇಲೆ ದಾಳಿ ಮಾಡಿ, ಸತತ ನಾಲ್ಕು ಗಂಟೆಗಳ ಕಾಲ ತೀವ್ರ ವಿಚಾರ ನಡೆಸಿದ್ದರು.
ಬಳಿಕ ಮತ್ತಷ್ಟು ವಿಚಾರಣೆಗಾಗಿ ರಾಗಿಣಿಯನ್ನು ತಮ್ಮ ವಶಕ್ಕೆ ಪಡೆದಿದ್ದು, ತಮ್ಮೊಂದಿಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಕರೆದೊಯ್ದಿದ್ದರು. ಮಧ್ಯಾಹ್ನ 12 ಗಂಟೆಯಿಂದ ಸತತ 6 ಗಂಟೆಯಿಂದ ತೀವ್ರ ವಿಚಾರಣೆ ನಡೆಸಿದ್ದು, ಡ್ರಗ್ಸ್ ಪೆಡ್ಲರ್ ಗಳ ಜತೆ ಸಂಪರ್ಕ ಹೊಂದಿರುವುದಕ್ಕೆ ಸೂಕ್ತ ಸಾಕ್ಷ್ಯಾಧಾರಗಳು ಸಿಕ್ಕ ಹಿನ್ನೆಲೆಯಲ್ಲಿ ಇದೀಗ ರಾಗಿಣಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಮೊಬೈಲ್ ನಲ್ಲಿ ಡ್ರಗ್ಸ್ ನಂಟು ಪತ್ತೆ:
ಬೆಳಿಗ್ಗೆ ಪೊಲೀಸರು ರಾಗಿಣಿ ಫ್ಲ್ಯಾಟ್ ನಲ್ಲಿ ಎರಡು ಮೊಬೈಲ್, ಹಾರ್ಡ್ ಡಿಸ್ಕ್, ಲ್ಯಾಪ್ ಟಾಪ್ ವಶಕ್ಕೆ ಪಡೆದಿದ್ದಾರೆ. ರಾಗಿಣಿ ಮೊಬೈಲ್ ನಲ್ಲಿ ಡ್ರಗ್ಸ್ ಪೆಡ್ಲರ್ ಹಾಗೂ ಪಾರ್ಟಿ ಆಯೋಜಕರ ಜತೆ ಸಂಪರ್ಕ ಇರುವುದು ಪತ್ತೆಯಾಗಿತ್ತು. ಪಾರ್ಟಿಗಳಲ್ಲಿ ಡ್ರಗ್ಸ್ ಸೇವನೆ ಬಗ್ಗೆಯೂ ಸಾಕ್ಷ್ಯ ಲಭ್ಯವಾಗಿದೆ ಎಂದು ತಿಳಿದುಬಂದಿದೆ.
ಸೆ. 7ಕ್ಕೆ ವಿಚಾರಣೆ ಮುಂದೂಡಿಕೆ:
ಬಂಧನದ ಭೀತಿಯಿಂದ ತಪ್ಪಿಸಿಕೊಳ್ಳಲು ರಾಗಿಣಿ ನಿರೀಕ್ಷಣಾ ಜಾಮೀನಿಗಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಕೋರ್ಟ್ ವಿಚಾರಣೆಯನ್ನು ಸೆ. 7ಕ್ಕೆ ಮುಂದೂಡಿದೆ.