ನಮಗೇ ಕುಡಿಯಲಿಕ್ಕೆ ನೀರಿಲ್ಲ, ತಮಿಳುನಾಡಿಗೆ ನೀರು ಬಿಡಲು ಹೇಗೆ ಸಾಧ್ಯ: ನಟಿ ಪೂಜಾ ಗಾಂಧಿ

ಬೆಂಗಳೂರು: ಕಾವೇರಿ ಜಲ ವಿವಾದವು ಮತ್ತೆ ಮುನ್ನೆಲೆಗೆ ಬಂದಿದ್ದು, ತಮಿಳುನಾಡಿಗೆ ನೀರು ಬಿಡಬೇಕೆನ್ನುವ ನಿರ್ಧಾರದ ವಿರುದ್ದ ಕನ್ನಡ ಚಿತ್ರ ನಟ ನಟಿಯರು ಧ್ವನಿ ಎತ್ತಿದ್ದಾರೆ. ನಟ ದರ್ಶನ್ ತೂಗುದೀಪ ಮತ್ತು ಕಿಚ್ಚ ಸುದೀಪ್ ಬಳಿಕ ಪೂಜಾ ಗಾಂಧಿಯೂ ಕರ್ನಾಟಕದ ಪರ ಧ್ವನಿ ಎತ್ತಿದ್ದಾರೆ.

ಈ ಬಗ್ಗೆ ವಿಡೀಯೋ ಸಂದೇಶ ನೀಡಿರುವ ಪೂಜಾ, “ಕರ್ನಾಟಕದಲ್ಲಿ ಭೀಕರವಾದ ಬರ ಇದೆ.175 ತಾಲೋಕು ಬರಪೀಡಿತ ಅಂತ ಹೇಳ್ತಿದಾರೆ. ಸೆಂಟ್ರಲ್ ವಾಟರ್ ಕಮಿಷನ್ ನ ಸದಸ್ಯರನ್ನು ಕೆ. ಆರ್. ಎಸ್ ಗೆ ಕರೆಸಬೇಕು. ಅವರು ಮುಳುಗುವಷ್ಟು ನೀರು ಇದೆಯಾ , ಇಳಿದು ನೋಡಿ ಅಂತ ಅನ್ನಬೇಕು. ಡ್ಯಾಂ ಇರೋ ಮಂಡ್ಯ ಜಿಲ್ಲೆಗೇ ನೀರು ಇಲ್ಲ, ಬೆಂಗಳೂರಿಗೆ ಕುಡಿಯುವ ನೀರು ಇಲ್ಲ. ತಮಿಳುನಾಡಿಗೆ ನೀರು ಬಿಡೋಕೆ ಹೇಗೆ ಸಾಧ್ಯ? ಕಮಿಷನ್ ನವರು ಬಂದು ಸರ್ವೇ ಮಾಡೋವರಗೂ ನೀರು ಬಿಡೊಕಾಗಲ್ಲ ಅಂತ ಸರ್ಕಾರ ಹೇಳ್ಬೇಕು” ಎಂದು ಅವರು ಹೇಳಿದ್ದಾರೆ.