ನಟಿ, ಮಾಜಿ ಸಚಿವೆ ಉಮಾಶ್ರೀ ಮನೆಯಲ್ಲಿ ಕಳ್ಳತನ

ಬಾಗಲಕೋಟೆ: ನಟಿ, ಮಾಜಿ ಸಚಿವೆ ಉಮಾಶ್ರೀ ಮನೆಯಲ್ಲಿ ಕಳ್ಳರು ಕರಮತ್ತು ತೋರಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ರಬಕವಿಯ ವಿದ್ಯಾನಗರದಲ್ಲಿರುವ ಉಮಾಶ್ರೀ ನಿವಾಸದಲ್ಲಿ ಭಾನುವಾರ ತಡರಾತ್ರಿ ಕಳ್ಳತನ ನಡೆದಿದೆ.

ಬೆಂಗಳೂರಿನ ಆರ್.ಆರ್.ನಗರ ಚುನಾವಣೆ ಹಿನ್ನೆಲೆಯಲ್ಲಿ ಉಮಾಶ್ರೀ, ಮನೆಗೆ ಬೀಗ ಹಾಕಿಕೊಂಡು ಪ್ರಚಾರದಲ್ಲಿ ತೊಡಗಿದ್ದರು.‌ ಹೀಗಾಗಿ ಮನೆಯಲ್ಲಿ ಯಾರು ಇರಲಿಲ್ಲ. ಈ ಸಂದರ್ಭವನ್ನು ಬಳಸಿಕೊಂಡ ಕಳ್ಳರು, ತಡರಾತ್ರಿ ಮನೆ ಬೀಗ ಒಡೆದು ಒಳಗೆ ನುಗ್ಗಿದ್ದಾರೆ. ಮನೆಯೊಳಗಿನ ಟ್ರಿಜರಿ ಒಡೆದಿದ್ದಾರೆ ಎಂದು ತಿಳಿದುಬಂದಿದೆ.

ಮನೆಯಲ್ಲಿ ಪೀಠೋಪಕರಣ, ದಿನ ಬಳಕೆಯ ವಸ್ತುಗಳು ಬಿಟ್ಟರೆ ಬೆಲೆ ಬಾಳುವ ವಸ್ತುಗಳು ಏನೂ ಇರಲಿಲ್ಲ. ಚಿನ್ನಾಭರಣ, ನಗದು ಕೂಡ ಇಟ್ಟಿರಲಿಲ್ಲ ಎಂದು ಉಮಾಶ್ರೀ ತಿಳಿಸಿದ್ದಾರೆ.

ಕಳ್ಳತನವಾಗಿದೆ ಎಂದು ಇದೀಗ ಗೊತ್ತಾಗಿದೆ. ಕಳ್ಳರು ಏನೇನು ಕಳ್ಳತನ ಮಾಡಿದ್ದಾರೆ ಎಂದು ಗೊತ್ತಿಲ್ಲ ಎಂದು ಹೇಳಿದ್ದಾರೆ. ತೇರದಾಳ ಠಾಣೆ ಪೋಲಿಸರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.