ಹೈದರಾಬಾದ್​ನಲ್ಲಿ ನಾಳೆ ಅದ್ದೂರಿಯಾಗಿ ನಡೆಯಲಿದೆ ನಟ ವರುಣ್​ ತೇಜ್​ – ಲಾವಣ್ಯ ತ್ರಿಪಾಠಿ ನಿಶ್ಚಿತಾರ್ಥ

ತೆಲುಗು ನಟ ವರುಣ್​ ತೇಜ್​ ಮತ್ತು ನಟಿ ಲಾವಣ್ಯ ತ್ರಿಪಾಠಿ ಮದುವೆ ವಿಚಾರ ಸದ್ಯ ಟಾಲಿವುಡ್​ನಲ್ಲಿ ಹಾಟ್​ ಟಾಪಿಕ್​ ಆಗಿದೆ. ಇವರಿಬ್ಬರು ಕೆಲ ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದಾರೆ. ನಟ ವರುಣ್​ ತೇಜ್​ ಮತ್ತು ಲಾವಣ್ಯ ತ್ರಿಪಾಠಿ ನಿಶ್ಚಿತಾರ್ಥ ನಾಳೆ ಹೈದರಾಬಾದ್​ನಲ್ಲಿ ನಡೆಯಲಿದೆ.

ಜೂನ್​ 9 ರಂದು ಈ ಜೋಡಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದು, ಅದಕ್ಕಾಗಿ ಸಕಲ ಸಿದ್ಧತೆಗಳು ನಡೆಯುತ್ತಿದೆ ಎಂಬ ಸುದ್ದಿ ಕೆಲ ದಿನಗಳಿಂದ ಕೇಳಿ ಬರುತ್ತಿತ್ತು. ಅದರಂತೆ ಈ ಜೋಡಿ ನಾಳೆ ಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆಯಾಗಿದೆ.

ಹೌದು. ವರುಣ್​ ತೇಜ್​ ಮತ್ತು ಲಾವಣ್ಯ ತ್ರಿಪಾಠಿ ಎಂಗೇಜ್​ಮೆಂಟ್​ ನಾಳೆ ಹೈದರಾಬಾದ್​ನಲ್ಲಿ ನಡೆಯಲಿದೆ. ನಟ ನಾಗಬಾಬು ಪುತ್ರನ ನಿಶ್ಚಿತಾರ್ಥ ಪ್ರೀತಿಸಿದ ಹುಡುಗಿಯ ಜೊತೆಗೆ ಅದ್ದೂರಿಯಾಗಿ ಜರುಗಲಿದೆ. ನಿರ್ದೇಶಕ ಏಲೂರು ಶ್ರೀನು ನಿಶ್ಚಿತಾರ್ಥ ಆಮಂತ್ರಣದ ಫೋಟೋವನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡು, ತಾರಾ ಜೋಡಿಗೆ ಶುಭ ಹಾರೈಸಿದ್ದಾರೆ. “ಮೆಗಾ ಪ್ರಿನ್ಸ್ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಅವರಿಗೆ ಅಭಿನಂದನೆಗಳು. ಯಾವಾಗಲೂ ಜೊತೆಯಾಗಿರಿ” ಎಂದು ಕ್ಯಾಪ್ಶನ್​ ನೀಡಿದ್ದಾರೆ.

ಆಮಂತ್ರಣ ಪತ್ರದಲ್ಲಿ ಲಾವಣ್ಯ ತ್ರಿಪಾಠಿ ಅವರು ವರುಣ್​ ತೇಜ್​ ಭುಜದ ಮೇಲೆ ಒರಗಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ನಿಶ್ಚಿತಾರ್ಥ ಆಮಂತ್ರಣ ಪತ್ರಿಕೆಯ ಫೋಟೋ ವೈರಲ್ ಆಗಿದೆ. ಈ ಮೂಲಕ ವರುಣ್, ಮದುವೆ ಬಗ್ಗೆ ಎಲ್ಲ ಮೆಗಾ ಅಭಿಮಾನಿಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಕುಟುಂಬಸ್ಥರು ಹಾಗೂ ಚಿತ್ರರಂಗದ ಕೆಲ ಗಣ್ಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ಸಮಾರಂಭ ನಡೆಯಲಿದೆ ಎಂದು ವರದಿಯಾಗಿದೆ.

ಸ್ನೇಹದಿಂದ ಪ್ರೀತಿಯೆಡೆಗೆ.. ವರುಣ್​ ತೇಜ್​ ಮತ್ತು ಲಾವಣ್ಯ ತ್ರಿಪಾಠಿ ‘ಮಿಸ್ಟರ್’ ಮತ್ತು ‘ಅಂತರಿಕ್ಷಂ’ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಈ ಸಿನಿಮಾಗಳ ಶೂಟಿಂಗ್​ ವೇಳೆಯೇ ಇಬ್ಬರ ನಡುವೆ ಸ್ನೇಹ ಚಿಗುರಿ ಪ್ರೀತಿಗೆ ತಿರುಗಿತ್ತು. ಅಂದಿನಿಂದ ಇವರಿಬ್ಬರು ಪ್ರೀತಿಸುತ್ತಿದ್ದಾರೆ ಎಂಬ ಪ್ರಚಾರವೂ ಜೋರಾಗಿತ್ತು. ಇವರಿಬ್ಬರೂ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹಲವು ಬಾರಿ ಕೇಳಿಬಂದಿತ್ತು.

ಜೋಡಿಯ ಸಿನಿಮಾ ವಿಚಾರಕ್ಕೆ ಬಂದರೆ, ಲಾವಣ್ಯ ತ್ರಿಪಾಠಿ ಸಿನಿ ವೃತ್ತಿ ಜೀವನ ಸದ್ಯ ನಿರೀಕ್ಷಿತ ಮಟ್ಟದಲ್ಲಿ ಸಾಗುತ್ತಿಲ್ಲ. ಅವರ ಕೊನೆಯ ಚಿತ್ರ ‘ಹ್ಯಾಪಿ ಬರ್ತ್​ಡೇ’ ಅಭಿಮಾನಿಗಳಿಗೆ ನಿರಾಸೆ ತಂದಿತ್ತು. ಈಗ ಅವರ ಕೈಯಲ್ಲಿ ಒಂದೇ ಒಂದು ತೆಲುಗು ಪ್ರಾಜೆಕ್ಟ್​ ಇಲ್ಲ. ತಮಿಳಿನಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಇತ್ತೀಚೆಗೆ ಲಾವಣ್ಯ ನಟಿಸಿರುವ ‘ಪುಲಿ ಮೇಕಾ’ ವೆಬ್ ಸೀರೀಸ್ ಬಿಡುಗಡೆಯಾಗಿತ್ತು. ಇದು ನಿರೀಕ್ಷಿತ ಮಟ್ಟದಲ್ಲಿ ಹಿಟ್​ ಆಗಿಲ್ಲ. ಇದರಲ್ಲಿ ಅವರು ಪೊಲೀಸ್​ ಅಧಿಕಾರಿಯಾಗಿ ನಟಿಸಿದ್ದಾರೆ.

ಇನ್ನೂ ನಟ ವರುಣ್​ ತೇಜ್​ ಸದ್ಯ ಪ್ರವೀಣ್ ಸತ್ತಾರು ನಿರ್ದೇಶನದಲ್ಲಿ ‘ಗಾಂಡಿವಧಾರಿ ಅರ್ಜುನ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ವರುಣ್ ಎದುರು ಸಾಕ್ಷಿ ನಟಿಸುತ್ತಿದ್ದಾರೆ. ಮಿಕ್ಕಿ ಜೇ ಮೇಯರ್ ಸಂಗೀತ ಸಂಯೋಜಿಸುತ್ತಿದ್ದಾರೆ. ಇದಲ್ಲದೇ ನಿರ್ದೇಶಕ ಶಕ್ತಿ ಪ್ರತಾಪ್ ಸಿಂಹ ಅವರ ಜೊತೆಯೂ ವರುಣ್​ ತೇಜ್​ ಸಿನಿಮಾ ಮಾಡುತ್ತಿದ್ದಾರೆ.

ಆದರೆ, ಈ ಬಗ್ಗೆ ಮೆಗಾ ಕುಟುಂಬದವರು ಯಾರೂ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಇದೀಗ ಈ ಸುದ್ದಿ ಅಧಿಕೃತವಾಗಿ ಹೊರಬಿದ್ದಿದೆ. ವರುಣ್- ಲಾವಣ್ಯ ಪ್ರೀತಿ ನಿಜವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ನೆಟಿಜನ್‌ಗಳು ಮತ್ತು ಮೆಗಾ ಅಭಿಮಾನಿಗಳು ಈ ಜೋಡಿಗೆ ಶುಭ ಹಾರೈಸುತ್ತಿದ್ದಾರೆ.