ನವದೆಹಲಿ: ನಟ ಸುಶಾಂತ್ ಸಿಂಗ್ ರಜಪೂತ್ ರದ್ದು ಆತ್ಮಹತ್ಯೆ, ಅದು ಕೊಲೆಯಲ್ಲ ಎಂಬ ಸ್ಫೋಟಕ ಮಾಹಿತಿ ಈವರೆಗಿನ ಸಿಬಿಐ ತನಿಖೆಯಲ್ಲಿ ಬಹಿರಂಗಗೊಂಡಿದೆ. ಈ ಬಗ್ಗೆ ಜೀ ನ್ಯೂಸ್ ವರದಿ ಮಾಡಿದೆ.
ಸುಶಾಂತ್ ಸಿಂಗ್ ಸಾವಿನ ಕುರಿತು ಕೆಲ ಹಿಂದಿ ಹಾಗೂ ಇಂಗ್ಲಿಷ್ ನ್ಯೂಸ್ ಚಾನೆಲ್ ಗಳು ಟಿಆರ್ ಪಿಗಾಗಿ ತಮ್ಮದೇ ಆದ ರೀತಿಯಲ್ಲಿ ತನಿಖೆ ನಡೆಸಿ, ತೀರ್ಪು ನೀಡುತ್ತಿದೆ. ಆದರೆ ಇದಕ್ಕೆ ತದ್ವಿರುದ್ಧ ಎಂಬಂತೆ ಜೀ ನ್ಯೂಸ್ ನಲ್ಲಿ ಸೋಮವಾರ ರಾತ್ರಿ 9 ಗಂಟೆಗೆ ಪ್ರಸಾರಗೊಂಡ ಡೈಲಿ ಆ್ಯನಾಲಿಸಿಸ್ ನಲ್ಲಿ ಸುಶಾಂತ್ ಅವರದ್ದು ಕೊಲೆಯಲ್ಲ, ಆತ್ಮಹತ್ಯೆ ಎಂಬ ಅಂಶ ಬಹಿರಂಗಗೊಂಡಿದೆ.
ನಾವು ಸತ್ಯ ಮುಚ್ಚಿಡಲ್ಲ:
ಸುಶಾಂತ್ ಸಿಂಗ್ ಸಾವಿನ ಪ್ರಕರಣದ ಬಗ್ಗೆ ಈವರೆಗೆ ನಡೆದ ತನಿಖೆಯಿಂದ ಹೊರಬಂದ ಮಾಹಿತಿ ವಿವರಿಸಿದ ಜೀ ನ್ಯೂಸ್ ನ ಸುಧೀರ್ ಚೌಧರಿ, ನಾವು ಟಿಆರ್ ಪಿಗಾಗಿ ಸತ್ಯವನ್ನು ಮುಚ್ಚಿಡಲ್ಲ. ಜನತೆಗೆ ಸತ್ಯವನ್ನು ಹೇಳುವುದು ದೇಶದ ಹಳೆಯ ಚಾನೆಲ್ ಆದ ಜೀ ನ್ಯೂಸ್ ನ ಜವಾಬ್ದಾರಿ. ನಾವು ನೀಡುವ ಸತ್ಯ ಕೆಲವರಿಗೆ ಕಹಿ ಆಗಬಹುದು. ಆದರೆ ನಾವು ಟಿಆರ್ ಪಿಗಾಗಿ ಸತ್ಯ ಮುಚ್ಚಿಡುವ ಕೆಲಸ ಮಾಡಲ್ಲ ಎಂದು ತಿಳಿಸಿದ್ದಾರೆ.
ಡ್ರಗ್ಸ್ ಚಟಕ್ಕೆ ಬಲಿಯಾಗಿದ್ದ ಸುಶಾಂತ್.?
ನಟ ಸುಶಾಂತ್ ಕಳೆದ ಏಳೆಂಟು ತಿಂಗಳಿನಿಂದ ವಿಪರೀತವಾಗಿ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು ಎಂಬ ಅಂಶ ಹೊರಬಿದ್ದಿದೆ. ತನ್ನ ಉದ್ಯೋಗಿಗಳ ಮೂಲಕ ಗಾಂಜಾ ತರಿಸಿಕೊಂಡು ಸೇದುತ್ತಿದ್ದರು. ದಿನಕ್ಕೆ 10ರಿಂದ 12 ಹೈಬ್ರಿಡ್ ಗಾಂಜಾ (ದುಬಾರಿ ಬೆಲೆಯ ವಿದೇಶಿ ಗಾಂಜಾ) ಸೇವನೆ ಮಾಡುತ್ತಿದ್ದರು. ಸುಶಾಂತ್ ತುಂಬಾ ಮಾನಸಿಕ ಖಿನ್ನತೆ ಒಳಗಾಗಿದ್ದರು. ಪ್ರತಿದಿನ ಗಾಂಜಾ ಅಮಲಿನಲ್ಲಿ ತೇಲುತ್ತಿದ್ದರು ಎಂಬ ಅಂಶದ ಬಗ್ಗೆಯೂ ಹೇಳಿದೆ.
ರಿಯಾ ಚಕ್ರವರ್ತಿ ಹಾಗೂ ಆಕೆಯ ಸಹೋದರನಿಂದಲೂ ಗಾಂಜಾ ತರಿಸಿಕೊಂಡು ಸೇದುತ್ತಿದ್ದರು. ಸದ್ಯ ಎನ್ ಸಿಬಿ ವಶದಲ್ಲಿರುವ ಸ್ಯಾಮ್ಯುಯಲ್ ಮಿರಾಂಡ್ ಹಾಗೂ ದಿವೇಶ್ ಸಾವಂತ್ ಮೂಲಕವೂ ಗಾಂಜಾ ತರಿಸಿಕೊಂಡು ಸೇದುತ್ತಿದ್ದರು ಎಂದು ತಿಳಿಸಿದೆ.
ಹಲವು ಸಿನಿಮಾಗಳು ಕೈಬಿಟ್ಟು ಹೋಗಿತ್ತು.?
ಸುಶಾಂತ್ ಸಿಂಗ್ ನನ್ನ ಎಲ್ಲ ಸಿನಿಮಾಗಳಿಗೆ ನಟಿ ರಿಯಾ ಚಕ್ರವರ್ತಿಯನ್ನೇ ನಾಯಕಿಯನ್ನಾಗಿ ಮಾಡಬೇಕೆಂದು ನಿರ್ಮಾಪಕರಿಗೆ ಷರತ್ತು ಹಾಕುತ್ತಿದ್ದರು. ಇದರಿಂದ ದೊಡ್ಡ ಬ್ಯಾನರ್ ನ ಸಿನಿಮಾ ಸಹಿತ ಹಲವು ಸಿನಿಮಾಗಳು ಸುಶಾಂತ್ ರಿಂದ ಕೈಬಿಟ್ಟು ಹೋಗಿದ್ದವು ಎಂಬುವುದನ್ನು ಜೀ ನ್ಯೂಸ್ ವರದಿ ಮಾಡಿದೆ.
ಪ್ರಸ್ತುತ ಸುಶಾಂತ್ ಸಿಂಗ್ ಸಾವಿನ ತನಿಖೆಯನ್ನು ಸಿಬಿಐ ನಡೆಸುತ್ತಿದ್ದು, ಎಲ್ಲ ಆಯಾಮಗಳಲ್ಲಿ ಶೋಧಕಾರ್ಯ ಮುಂದುವರಿಸಿದೆ. ಹಾಗಾಗಿ ಸಿಬಿಐ ತನಿಖೆ ಪೂರ್ಣಗೊಂಡ ಬಳಿಕ ಸುಶಾಂತ್ ರದ್ದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುವುದು ತಿಳಿಯಲಿದೆ.