ನಟ ಶಿವರಾಜಕುಮಾರ್ ”ಸರಕಾರಗಳು ಕೂಲಂಕುಷವಾಗಿ ಪರಿಶೀಲಿಸಿ ಸಮಸ್ಯೆ ಬಗೆಹರಿಸಬೇಕು”

ಬೆಂಗಳೂರು, ಸೆ.29: . ಕರ್ನಾಟಕ ಹಾಗೂ ತಮಿಳುನಾಡು ಸರಕಾರಗಳು ಕೂಲಂಕುಷವಾಗಿ ಪರಿಶೀಲಿಸಿ ಕಾವೇರಿ ನದಿ ನೀರಿನ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕಾಗಿದೆ ಎಂದು ನಟ ಶಿವರಾಜ್‍ಕುಮಾರ್ ತಿಳಿಸಿದ್ದಾರೆ.ಕಲಾವಿದರು ಬಂದು ನಿಂತು ಧರಣಿ ನಡೆಸಿದರೆ ಪರಿಹಾರ ಸಮಸ್ಯೆ ಆಗುವುದಿಲ್ಲ.ನಾವು ಆಯ್ಕೆ ಮಾಡಿರುವ ಸರಕಾರ ಈ ವಿವಾದವನ್ನು ಬಗೆಹರಿಸಬೇಕು ಎಂದರು.

ಶುಕ್ರವಾರ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕಾವೇರಿ ನೀರಿನ ಸಮಸ್ಯೆಯ ಪರಿಹಾರಕ್ಕಾಗಿ ಸುಮಾರು ವರ್ಷಗಳ ಕಾಲದಿಂದ ಹೋರಾಟ ಮಾಡಿಕೊಂಡು ಬರಲಾಗಿದೆ. ಹೋರಾಟದಲ್ಲಿ ಯಾವಾಗಲೂ ನಂಬಿಕೆ ಮತ್ತು ವಿಶ್ವಾಸದಿಂದ ಇದ್ದರೆ ಮಾತ್ರ ಗೆಲ್ಲುವುದಕ್ಕೆ ಸಾಧ್ಯವಾಗುತ್ತದೆ. ಆದರಿಂದ ರಾಜ್ಯ ಹಾಗೂ ತಮಿಳುನಾಡಿನ ಸರಕಾರ ಜೊತೆಗೆ ಕೇಂದ್ರ ಮಧ್ಯಸ್ಥಿಕೆ ವಹಿಸಿ ಈ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಬೇಕು. ಪ್ರತಿಯೊಬ್ಬರಿಗೂ ಕಾವೇರಿ ನೀರಿನ ಮೇಲೆ ಪ್ರೀತಿ ಇರುತ್ತದೆ ಎಂದು ಅವರು ತಿಳಿಸಿದರು.ನಾವೂ ಅದರಲ್ಲಿ ಭಾಗಿಯಾಗುತ್ತೇವೆ. ಅದೇ ರೀತಿ ಈ ತರ ಸಮಸ್ಯೆ ಬಂದಾಗ ನಾವೆಲ್ಲರೂ ಸೇರಿ ಒಗ್ಗಟ್ಟಾಗಿ ಹೋರಾಟ ಮಾಡಬೇಕಾಗಿದೆ. ಆದರೆ ನಮ್ಮ ಹೋರಾಟವನ್ನು ಲಾಭಕ್ಕಾಗಿ ಪಡೆದುಕೊಳ್ಳಬಾರದು.

 

 

ತಮಿಳುನಾಡಿನ ರೈತರು ಬೇರೆಯಲ್ಲ, ಕರ್ನಾಟಕದ ರೈತರು ಬೇರೆಯಲ್ಲ. ರೈತರು ಎಲ್ಲಿದ್ದರೂ ರೈತರೆ. ಆದುದರಿಂದ ರಸ್ತೆಯಲ್ಲಿರುವ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದರೆ ಅದು ಹೋರಾಟ ಆಗುವುದಿಲ್ಲ, ಅದು ತಪ್ಪು. ಸಮಸ್ಯೆಯಿಂದ ಯಾವ ರೀತಿ ಹೊರ ಬರಬೇಕೆಂಬುದನ್ನು ಕೂಲಂಕುಷವಾಗಿ ವಿಚಾರ ಮಾಡಬೇಕಾಗಿದೆ ಹೊರತು ಈ ರೀತಿ ಹೋರಾಟ ಮಾಡುವುದು ಸರಿಯಲ್ಲ. ಯಾವುದೇ ರೀತಿಯಾದ ಹೋರಾಟ ಮಾಡಿದರೂ ಬೇರೆಯವರ ಭಾವನೆಗಳಿಗೆ ಹಾಗೂ ಮನಸ್ಸಿಗೆ ನೋವಾಗಬಾರದು ಎಂದು ತಿಳಿಸಿದರು.

 

ನಟ ಉಪೇಂದ್ರ ಮಾತನಾಡಿ, ನಾನು ಚಿತ್ರರಂಗಕ್ಕೆ ಬಂದಾಗಿನಿಂದ ಸುಮಾರು 20ರಿಂದ 25 ಬಾರಿ ಈ ವಿಚಾರವಾಗಿ ಹೋರಾಟ ಮಾಡಿದ್ದೇನೆ. ಆದರೆ ಇಂದಿಗೂ ಪರಿಹಾರ ಸಿಕ್ಕಿಲ್ಲ. ಸಮಸ್ಯೆ ಎಂದರೆ ಅದು ಇದೇ ಇರಬೇಕು. ನಾವೆಲ್ಲರೂ ವಿಚಾರವಂತರಾಗಬೇಕು. ಸ್ವಲ್ಪ ವಿಚಾರ ಮಾಡಿದರೆ ಇದರ ಹಿಂದಿನ ರಹಸ್ಯ ಏನು ಎಂಬುದು ಗೊತ್ತಾಗುತ್ತದೆ. ನಮ್ಮ ಸಮಸ್ಯೆಯನ್ನು ನಾವೇ ಪರಿಹರಿಸಿಕೊಳ್ಳೋಣ ಎಂದರು. ಸಂಗೀತ ನಿರ್ದೇಶಕ ಹಂಸಲೇಖ ಮಾತನಾಡಿ, ‘ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಯೇ ಶ್ರೇಷ್ಠ ಮಾರ್ಗ. ರಾಜಕಾರಣಿಗಳು ಪ್ರತಿಭಟನೆ ಮಾಡಿದರೆ ಆಕ್ರೋಶ ಹೊರಬರುತ್ತದೆ. ದಾಳಿಕೋರರು ಪ್ರತಿಭಟನೆ ಮಾಡಿದರೆ ಶಾಂತಿ ಮತ್ತು ಸಂಯಮದಿಂದ ಕೂಡಿರಬೇಕು’ ಎಂದರು. ಕಾವೇರಿ ಸಮಸ್ಯೆ ಮೊದಲಿನಿಂದಲೂ ಇದೆ. 10ನೇ ಶತಮಾನದಲ್ಲಿ ಈ ಬಗ್ಗೆ ಒಂದು ಶಾಸನದಲ್ಲಿ ಪ್ರಸ್ತಾಪ ಇದೆ. ಆ ಸಮಸ್ಯೆಯನ್ನು ಬಗೆಹರಿಸುವುದು ಕಲಾವಿದರ ಕೆಲಸ ಅಲ್ಲ. ಸಿನಿಮಾದ ಮೂಲಕ ಮಾರ್ಗಸೂಚಿ ನೀಡಬಹುದು ಎಂದು ಅವರು ಹೇಳಿದರು.ಇದೆ ಸಂದರ್ಭದಲ್ಲಿ ಹಿರಿಯ ಕಲಾವಿದರಾದ ಶೃತಿ, ಪೂಜಾಗಾಂಧಿ, ದರ್ಶನ್ ಗಿರಿಜಾ ಲೋಕೇಶ್, ಉಮಾಶ್ರೀ, ಶ್ರೀನಿವಾಸಮೂರ್ತಿ, ಶ್ರೀನಾಥ್, ಸುಂದರ್ ರಾಜ್, ವಾಸಂತಿ ಸೇರಿದಂತೆ ಅನೇಕ ಸಂಖ್ಯೆಯಲ್ಲಿ ಕಲಾವಿದರು, ನಿರ್ದೇಶಕರು, ನಿರ್ಮಾಪಕರು ಭಾಗವಹಿಸಿದ್ದರು.