ಚೊಚ್ಚಲ ಹೆಣ್ಣು ಮಗುವನ್ನು ಬರಮಾಡಿಕೊಂಡ ರಾಮ್ ಚರಣ್ ದಂಪತಿಗಳು

ನಟ ರಾಮ್ ಚರಣ್ ಮತ್ತು ಪತ್ನಿ ಉಪಾಸನಾ ಕೊನಿಡೇಲಾ ತಮ್ಮ ಚೊಚ್ಚಲ ಹೆಣ್ಣು ಮಗುವನ್ನು ಬರ ಮಾಡಿಕೊಂಡಿದ್ದಾರೆ. ಈ ಸುದ್ದಿಯನ್ನು ಆಸ್ಪತ್ರೆಯ ಬುಲೆಟಿನ್ ಮೂಲಕ ಪ್ರಕಟಿಸಲಾಗಿದೆ.

ಉಪಾಸನಾ ಕೊನಿಡೇಲಾ ಜುಬಿಲಿ ಹಿಲ್ಸ್ ಹೈದರಾಬಾದ್‌ನ ಅಪೋಲೋ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಮತ್ತು ತಾಯಿ ಚೆನ್ನಾಗಿದ್ದಾರೆ ಎಂದು ಆಸ್ಪತ್ರೆಯು ತಿಳಿಸಿದೆ. ಡಿಸೆಂಬರ್‌ನಲ್ಲಿ ತಾವು ತಂದೆ ತಾಯಿಯರಾಗುವ ಬಗ್ಗೆ ದಂಪತಿಗಳು ಘೋಷಿಸಿಕೊಂಡಿದ್ದರು. ರಾಮ್ ಚರಣ್ ಅವರ ತಂದೆ, ನಟ ಚಿರಂಜೀವಿ, ಮಂಗಳವಾರ ಮುಂಜಾನೆ ದಂಪತಿಗಳನ್ನು ಭೇಟಿ ಮಾಡಿ ತಮ್ಮ ಮೊಮ್ಮಗಳನ್ನು ಕುಟುಂಬಕ್ಕೆ ಸ್ವಾಗತಿಸಿದ್ದಾರೆ.

ಮದುವೆಯಾದ ಹತ್ತು ವರ್ಷಗಳ ನಂತರ ಉಪಾಸನಾ ಮತ್ತು ರಾಮ್ ಚರಣ್ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ. ಇತ್ತೀಚೆಗೆ, ಹ್ಯೂಮನ್ಸ್ ಆಫ್ ಬಾಂಬೆಗೆ ನೀಡಿದ ಸಂದರ್ಶನದಲ್ಲಿ, ಉಪಾಸನಾ ಅವರು ತಡವಾದ ಗರ್ಭಧಾರಣೆಯ ಬಗ್ಗೆ ಮಾತನಾಡಿದ್ದಾರೆ.

Image

ನಾನು ತುಂಬಾ ಉತ್ಸುಕಳಾಗಿದ್ದೇನೆ. ಸಮಾಜಕ್ಕಾಗಿ ಅಲ್ಲದೆ, ನಮಗೋಸ್ಕರ ನಾವು ಬಯಸಿದಾಗ ನಾನು ತಾಯಿಯಾಗಲು ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಹೆಮ್ಮೆಪಡುತ್ತೇನೆ. ನಮ್ಮ ಮದುವೆಯಾದ ಹತ್ತು ವರ್ಷಗಳ ಬಳಿಕ ನಾವು ಈಗ ಮಗುವನ್ನು ಪಡೆಯಲು ನಿರ್ಧರಿಸಿದ್ದೇವೆ. ನಾವಿಬ್ಬರೂ ಅಭಿವೃದ್ಧಿ ಹೊಂದುತ್ತಿರುವ ಕಾರಣ ಇದು ಉತ್ತಮ ಸಮಯ ಎಂದು ನಾನು ಭಾವಿಸುತ್ತೇನೆ. ನಾವಿಬ್ಬರೂ ಆರ್ಥಿಕವಾಗಿ ಸುರಕ್ಷಿತರಾಗಿದ್ದೇವೆ ಮತ್ತೀಗ ನಮ್ಮ ಮಕ್ಕಳನ್ನು ನಾವೇ ನೋಡಿಕೊಳ್ಳಲು ಸಮರ್ಥರಿದ್ದೇವೆ ಎಂದು ಅವರು ಹೇಳಿದ್ದಾರೆ.

ದಂಪತಿಗಳಿಗೆ ಶುಭ ಹಾರೈಸಲು ಅಪೋಲೋ ಆಸ್ಪತ್ರೆಯ ಮುಂದೆ ಅಭಿಮಾನಿಗಳ ಜನಸಾಗರವೇ ನೆರೆದಿದೆ.