ಬೆಂಗಳೂರು: ಖಾಸಗಿ ಚಾನಲ್ ಒಂದರ ಧಾರಾವಾಹಿ ಚಿತ್ರೀಕರಣದ ವೇಳೆಯಲ್ಲಿ ಹಿರಿಯ ನಟ ಮಂಡ್ಯ ರಮೇಶ್ ಕಾಲು ಜಾರಿ ಬಿದ್ದಿದ್ದು, ತೀವ್ರ ಗಾಯದಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. ಧಾರಾವಾಹಿ ಚಿತ್ರೀಕರಣದ ವೇಳೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಈ ಘಟನೆ ನಡೆದಿದೆ.
ಸ್ಟಾರ್ ಸುವರ್ಣದಲ್ಲಿ ಪ್ರಸಾರ ಕಾಣಲಿರುವ ಹೊಸ ಧಾರಾವಾಹಿ ‘ಆಸೆ’ ಶೂಟಿಂಗ್ ವೇಳೆ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದ ಕಲ್ಲು ಕ್ವಾರಿಯಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ರಮೇಶ್ ಕಾಲು ಜಾರಿ ಬಿದ್ದಿದ್ದಾರೆ. ಘಟನೆಯಲ್ಲಿ ನಟ ಮಂಡ್ಯ ರಮೇಶ್ ಅವರ ಕಾಲು ಮತ್ತು ಮುಂಗೈ ಮುರಿತವಾಗಿದೆ.
ಕಲ್ಲು ಕ್ವಾರಿಯಲ್ಲಿ ಬಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು ವೈದ್ಯರು ಕಾಲಿಗೆ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದು ಮುಂದಿನ ಎರಡು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ರಮೇಶ್ ಅರವಿಂದ್ ನಿರ್ಮಾಣದ ‘ಆಸೆ’ ಧಾರಾವಾಹಿಯಲ್ಲಿ ಮಂಡ್ಯ ರಮೇಶ್ ಪೋಷಕ ಪಾತ್ರದಲ್ಲಿ ನಟಿಸುತ್ತಿದ್ದಾರೆ.