ಮುಂಬೈ: ₹65.54 ಕೋಟಿ ಮೌಲ್ಯದ ಮಿಥಿ ನದಿ ಹೂಳೆತ್ತುವಿಕೆ ಹಾಗೂ ಪುನಶ್ಚೇತನ ಕಾಮಗಾರಿಗೆ ಸಂಬಂಧಿಸಿದ ಹಣಕಾಸು ಅಕ್ರಮಗಳ ಆರೋಪದ ಪ್ರಕರಣದಲ್ಲಿ ಬಾಲಿವುಡ್ ನಟ ಡಿನೊ ಮೊರಿಯಾ ಅವರನ್ನು ಮುಂಬೈ ಪೊಲೀಸ್ ಆರ್ಥಿಕ ಅಪರಾಧ ವಿಭಾಗ (EOW) ಬಂಧಿಸಿದೆ
ಅಕ್ಟೋಬರ್ 2ರಂದು ಬಾಂದ್ರಾದಲ್ಲಿರುವ ಡಿನೊ ಮೊರಿಯಾ ಅವರ ನಿವಾಸದಲ್ಲಿ ಸುಮಾರು ಎಂಟು ಗಂಟೆಗಳ ಕಾಲ ವಿಚಾರಣೆ ನಡೆಸಿದ ಬಳಿಕ ಅವರನ್ನು ವಶಕ್ಕೆ ಪಡೆಯಲಾಗಿದೆ
ಮುಂಬೈನ ಮಿಥಿ ನದಿ ಕಾಮಗಾರಿಗೆ ಸಂಬಂಧಿಸಿದ ಗುತ್ತಿಗೆ ನೀಡಿಕೆ ಹಾಗೂ ಹಣ ಪಾವತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಕುರಿತು EOW ತನಿಖೆ ನಡೆಸುತ್ತಿದೆ. ಈ ಅಕ್ರಮಗಳಿಂದ ಬೃಹನ್ಮುಂಬೈ ಮಹಾನಗರ ಪಾಲಿಕೆ (BMC)ಗೆ ₹65.54 ಕೋಟಿ ನಷ್ಟವಾಗಿರುವ ಸಾಧ್ಯತೆಯ ಬಗ್ಗೆಯೂ ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಪ್ರಕರಣದಲ್ಲಿ ಗುತ್ತಿಗೆದಾರರು, ಮಧ್ಯವರ್ತಿಗಳು ಹಾಗೂ ನಾಗರಿಕ ಸಂಸ್ಥೆಯ ಅಧಿಕಾರಿಗಳ ಪಾತ್ರದ ಬಗ್ಗೆಯೂ ತನಿಖೆ ಮುಂದುವರಿದಿದೆ. ಮಿಥಿ ನದಿ ಹೂಳೆತ್ತುವಿಕೆ ಕಾಮಗಾರಿಯ ಗುತ್ತಿಗೆ ನೀಡಿಕೆ, ಉಪಕರಣಗಳ ಬಾಡಿಗೆ ದರ ಹಾಗೂ ಹಣ ಪಾವತಿಯಲ್ಲಿ ನಡೆದಿರುವ ಅಕ್ರಮಗಳ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಡಿನೊ ಮೊರಿಯಾ ಅವರನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆಯೂ ವಿಚಾರಣೆ ನಡೆಸಲಾಗಿತ್ತು. 2025ರ ಮೇನಲ್ಲಿ ಡಿನೊ ಮೊರಿಯಾ ಹಾಗೂ ಅವರ ಸಹೋದರ ಸ್ಯಾಂಟಿನೋ ಮೊರಿಯಾ ಅವರನ್ನು EOW ವಿಚಾರಣೆಗೊಳಪಡಿಸಿತ್ತು. ಸ್ಯಾಂಟಿನೋ ಮೊರಿಯಾ ನಿರ್ದೇಶಕರಾಗಿದ್ದ UBO Ridez ಕಂಪನಿಯ ಹಣಕಾಸು ವ್ಯವಹಾರಗಳು ಹಾಗೂ ಪ್ರಕರಣದ ಆರೋಪಿಗಳೊಂದಿಗಿನ ಸಂಪರ್ಕದ ಕುರಿತು ಅಧಿಕಾರಿಗಳು ಮಾಹಿತಿ ಕಲೆಹಾಕಿದ್ದರು.
ಪ್ರಕರಣದಲ್ಲಿ ಕೇತನ್ ಕದಮ್ ಸೇರಿದಂತೆ ಇತರ ಆರೋಪಿಗಳ ವಿರುದ್ಧವೂ ತನಿಖೆ ಮುಂದುವರಿದಿದೆ.
ಡಿನೊ ಮೊರಿಯಾ ಕನ್ನಡ ಚಿತ್ರರಂಗದಲ್ಲೂ ನಟಿಸಿದ್ದಾರೆ. ರಮ್ಯಾ ಅಭಿನಯದ ‘ಜೂಲಿ’ ಸಿನಿಮಾದಲ್ಲಿ ಅವರು ಕಾಣಿಸಿಕೊಂಡಿದ್ದರು. ‘ರಾಜ್’, ‘ಜಿಸ್ಟ್’ ಸೇರಿದಂತೆ ಹಲವು ಹಿಂದಿ ಚಿತ್ರಗಳಲ್ಲಿ ನಟಿಸಿರುವ ಅವರು ಇತ್ತೀಚೆಗೆ ‘ಹೌಸ್ಫುಲ್ 5’ ಸಿನಿಮಾದಲ್ಲೂ ಅಭಿನಯಿಸಿದ್ದರು.















