ಬೆಂಗಳೂರು: ಕನ್ನಡ ಚಿತ್ರರಂಗದ ಪ್ರಖ್ಯಾತ ನಟ ಅನಂತ್ ನಾಗ್ ಇಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಳ್ಳುತ್ತಿದ್ದಾರೆ. ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಸಂಜೆ 4.30ಕ್ಕೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಬಿಜೆಪಿಗೆ ಸೇರುತ್ತಿದ್ದಾರೆ ಎಂದು ವರದಿಯಾಗಿದೆ.
1980 ರಲ್ಲೇ ರಾಜಕೀಯ ರಂಗಕ್ಕೆ ಪಾದಾರ್ಪಣೆ ಮಾಡಿರುವ ಅನಂತ್ ನಾಗ್ 1983ರಲ್ಲಿ ಜನತಾ ಪಕ್ಷದ ಪ್ರಚಾರಕರಾಗಿದ್ದರು. 1985 ಮತ್ತು 1989 ರಲ್ಲಿಯೂ ಪಕ್ಷದ ಪ್ರಚಾರಕರಾಗಿ ಗುರುತಿಸಿಕೊಂಡ ಇವರು, 1983ರಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಶಿವರಾಮ ಕಾರಂತರ ವಿರುದ್ಧ ಸ್ಪರ್ಧಿಸಿ ಸೋತಿದ್ದರು.
1994ರಲ್ಲಿ ಬೆಂಗಳೂರಿನ ಮಲ್ಲೇಶ್ವರ ಕ್ಷೇತ್ರದಿಂದ ಗೆದ್ದ ಅನಂತ್ ನಾಗ್ ವಿಧಾನಸೌಧ ಪ್ರವೇಶ ಮಾಡಿ ಜೆ.ಎಚ್.ಪಟೇಲ್ ಸಂಪುಟದಲ್ಲಿ ಬಿಡಿಎ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಜನತಾದಳ ಪಕ್ಷ ಒಡೆದು ಚೂರಾಗುವವರೆಗೂ ಪಕ್ಷದಲ್ಲಿದ್ದ ಅನಂತ್ ನಾಗ್, 2004ರ ವಿಧಾನಸಭೆ ಚುನಾವಣೆಯಲ್ಲಿ ಚಾಮರಾಜಪೇಟೆ ಕ್ಷೇತ್ರದಿಂದ ಜೆಡಿಎಸ್ ನಿಂದ ಕಣಕ್ಕೆ ಇಳಿದು ಸೋಲುಂಡಿದ್ದರು.
ಇತ್ತೀಚಿನ ದಿನಗಳಲ್ಲಿ ಬಹಿರಂಗವಾಗಿಯೆ ಕೇಂದ್ರ ಸರ್ಕಾರ ಮತ್ತು ಮೋದಿಯವರನ್ನು ಹೊಗಳುತ್ತಿದ್ದ ಅನಂತ್ ನಾಗ್ ಇಂದು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ.












