ಸಂಚಾರಿ ನಿಯಮಗಳನ್ನು ಪಾಲಿಸದಿದ್ದಲ್ಲಿ ಕಠಿಣ ಕ್ರಮ: ಜಿಲ್ಲಾಧಿಕಾರಿ ಜಿ.ಜಗದೀಶ್

ಉಡುಪಿ, ಜೂನ್ 1:  ಕೋವಿಡ್ -2019 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಘೋಷಣೆ ಆಗಿ ನಂತರ ಹಂತ ಹಂತವಾಗಿ ಲಾಕ್ ಡೌನ್ ಸಡಿಲಿಕೆಯಾಗಿದ್ದು, ಲಾಕ್ ಡೌನ್ ಸಮಯದಲ್ಲಿ ವಾಹನಗಳ ಸಂಚಾರ ವಿರಳವಾದ ಕಾರಣ ಇತ್ತೀಚಿಗೆ ಅಪಘಾತಗಳ ಸಂಖ್ಯೆ ಇಳಿಮುಖವಾಗಿರುತ್ತದೆ.

ಪ್ರಸ್ತುತ ಲಾಕ್ ಡೌನ್ ಸಡಿಲಗೊಳಿಸಿ ಅನೇಕ ವಿನಾಯಿತಿಗಳನ್ನು ನೀಡಲಾಗಿರುತ್ತದೆ, ಇದರಿಂದಾಗಿ ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಅಧಿಕವಾಗಿದ್ದು,  ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ . ರಸ್ತೆಗಳಲ್ಲಿ ಮುಖ್ಯವಾಗಿ ರಾಷ್ರೀಯ ಹೆದ್ದಾರಿಗಳಲ್ಲಿ ಸಂಚಾರಿ ನಿಯಮಗಳನ್ನು ಪಾಲಿಸದೆ  ದ್ವಿಚಕ್ರ ವಾಹನ ಸವಾರರು ತಮಗೆ ನಿಗಧಿ ಪಡಿಸಿದ ಪಥದಲ್ಲಿ ಸಂಚರಿಸದೆ  ಅತಿ ವೇಗದಲ್ಲಿ ಮೊದಲ ಪಥಗಳಲ್ಲಿ ಸಂಚರಿಸುತ್ತಿರುವ ಕಾರಣ  ಅಪಘಾತಗಳಾಗುತ್ತಿರುವುದನ್ನು ಗಮನಿಸಲಾಗಿದೆ. ಹಾಗೂ ದ್ವಿಚಕ್ರ ವಾಹನಗಳಲ್ಲಿ  3 ಜನರು  ಸಂಚರಿಸುವುದು , ಹೆಲ್ಮೆಟ್ ಧರಿಸದೆ ಇರುವುದು, ಮತ್ತು ಮಾಸ್ಕ್ ಧರಿಸದೆ ಇರುವುದು ಕಂಡು ಬಂದಿರುತ್ತದೆ. ಇಂತಹ ಅತಿರೇಕಗಳಿಂದ ಉಡುಪಿ ಜಿಲ್ಲೆಯಲ್ಲಿ ಅಪಘಾತಗಳು ಹೆಚ್ಚುತಿರುವುದು  ಕಳವಳಿಕಾರಿಯಾದ ವಿಷಯವಾಗಿದೆ.

ಅಲ್ಲದೇ ಮಳೆಗಾಲದ ಪ್ರಾರಂಭದಲ್ಲಿ  ಗ್ರೀಸ್ , ಆಯಿಲ್  ಇತ್ಯಾದಿಗಳು ರಸ್ತೆಗೆ  ಬಿದ್ದಿರುವ ಕಾರಣಗಳಿಂದಾಗಿ ಎಲ್ಲಾ ರೀತಿಯ ವಾಹನಗಳು ಸ್ಕಿಡ್ ಆಗಿ  ಅಪಘಾತಗಳು ಸಂಭವಿಸುತ್ತಿವೆ .

ಆದುದರಿಂದ ಅತೀ ಜಾಗ್ರತೆಯಿಂದ ನಿಯಮಿತ ವೇಗದಲ್ಲಿ  ವಾಹನ ಚಲಾಯಿಸುವಂತೆ ಮತ್ತು ಸಂಚಾರಿ ನಿಯಮಗಳನ್ನು ಪಾಲಿಸಿ, ನಿಗಧಿತ  ಪಥಗಳಲ್ಲಿಯೆ ಸಂಚರಿಸಿ, ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಅಪಘಾತಗಳಾಗುವುದನ್ನು ತಡೆಯುವ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಿ ಸಂಚರಿಸುವಂತೆ ಸಾರ್ವಜನಿಕರಲ್ಲಿ, ಹಾಗೂ ವಾಹನ ಬಳಕೆದಾರರಲ್ಲಿ ವಿನಂತಿಸಲಾಗಿದೆ. ತಪ್ಪಿದಲ್ಲಿ ಕಠಿಣ  ಕಾನೂನು ಕ್ರಮ ಜರುಗಿಸುವುದು ಅನಿವಾರ್ಯವಾಗುತ್ತದೆ  ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಸಿದ್ದಾರೆ.