ಹೆತ್ತವರ ಪ್ರೋತ್ಸಾಹ ಇದ್ದಾಗ ಸಾಧನೆ ಸಾಧ್ಯ: ಚಾಣಕ್ಯ ಬೇಸಿಗೆ ಶಿಬಿರದಲ್ಲಿ ಸಾನಿಧ್ಯ ಆಚಾರ್ಯ

ಹೆಬ್ರಿ: ನಮ್ಮ ಹೆತ್ತವರ ಪ್ರೋತ್ಸಾಹ ಇದ್ದಾಗ ಮಾತ್ರ ನಮಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ.ಈ ನಿಟ್ಟಿನಲ್ಲಿ ನಾನು ಕಂಡ ಕನಸು ನನಸಾಗಲು ನನ್ನ ತಂದೆ ತಾಯಿಯ ನಿರಂತರ ಪ್ರೋತ್ಸಾಹವೇ ಕಾರಣವಾಗಿದೆ. ಇಂತಹ ಬೇಸಗೆ ಶಿಬಿರಗಳಿಗೆ ಪೋಷಕರು ತಮ್ಮ ಮಕ್ಕಳನ್ನು ಕಳುಹಿಸಿದಾಗ ಮಕ್ಕಳ ಪ್ರತಿಭೆ ಹೊರ ಬರಲು ವೇದಿಕೆಯಾಗುತ್ತದೆ ಎಂದು ಬಾಲ ಪ್ರತಿಭೆ ಡ್ರಾಮಾ ಜ್ಯೂನಿಯರ್ ಹಾಗೂ ಡಾನ್ಸ್ ಕರ್ನಾಟಕ ಡಾನ್ಸ್ ಖ್ಯಾತಿಯ ಸಾನಿಧ್ಯ ಆಚಾರ್ಯ ಹೇಳಿದರು.

ಅವರು ಚಾಣಕ್ಯ ಏಜ್ಯಕೇಶನ್ ಮತ್ತು ಕಲ್ಚರಲ್ ಆಕಾಡೆಮಿ ನೇತೃತ್ವದಲ್ಲಿ ಜೇಸಿಐ ಹೆಬ್ರಿ ಇವರ ಸಹಯೋಗದೊಂದಿಗೆ ಹೆಬ್ರಿ ಎಸ್.ಆರ್.ಸ್ಕೂಲ್ ಬಳಿಯ ಗುರುಕೃಪಾ ಬಿಲ್ಡಿಂಗ್‌ನಲ್ಲಿರುವ ಚಾಣಕ್ಯ ಟ್ಯೂಟೋರಿಯಲ್ ಕಾಲೇಜಿನಲ್ಲಿ ಏ.27ರವರೆಗೆ ನಡೆಯುತ್ತಿರುವ ಚಾಣಕ್ಯ ನಲಿಕಲಿ ವೈವಿಧ್ಯಮಯ ಬೇಸಿಗೆ ರಜಾ ಶಿಬಿರವನ್ನು ಉದ್ಘಾಟಿಸಿ ಸಂಸ್ಥೆಯ ವತಿಯಿಂದ ಸಮ್ಮಾನ ಸ್ವೀಕರಿಸಿ ಮಾತನಾಡಿದರು.

ಮಕ್ಕಳು ತಮ್ಮ ರಜಾ ಸಮಯವನ್ನು ವ್ಯರ್ಥ ಕಾಲಹರಣ ಮಾಡುವ ಬದಲು ಕ್ರೀಯಾಶೀಲತೆಯೊಂದಿಗೆ ಬದುಕು ಶಿಕ್ಷಣ ನೀಡುವ ತರಬೇತಿಯಲ್ಲಿ ಪಾಲ್ಗೊಳ್ಳಬೇಕು. ಈ ನಿಟ್ಟಿನಲ್ಲಿ
ಗುಣಮಟ್ಟದ ತರಬೇತಿಯಲ್ಲಿ ಮನೆಮಾತಾದ ಚಾಣಕ್ಯ ಸಂಸ್ಥೆ ನಿರಂತರವಾಗಿ ಇಂತಹ ಬೇಸಗೆ ಶಿಬಿರವನ್ನು ವೈವಿಧ್ಯಮಯವಾಗಿ ಆಯೋಜಿಸುತ್ತಿದ್ದು ಮಾದರಿ ಬೇಸಿಗೆ ಶಿಬಿರವಾಗಿ ಉಡುಪಿ ಜಿಲ್ಲೆಯಲ್ಲಿ ಗುರುತಿಸಿಕೊಂಡಿದೆ ಎಂದು ಎಸ್.ಕೆ.ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋಆಪರೇಟಿವ್ ಸೊಸೈಟಿ ಮಂಗಳೂರು ಇದರ ಅಧ್ಯಕ್ಷ ಉಪೇಂದ್ರ ಆಚಾರ್ಯ ಪೆರ್ಡೂರು ಹೇಳಿದರು.

ಸಮಾರಂಭದ ಅಧ್ಯಕ್ಷೆ ಚಾಣಕ್ಯ ಸಂಸ್ಥೆಯ ಪ್ರಾಂಶುಪಾಲೆ ವೀಣಾ ಯು.ಶೆಟ್ಟಿಮಾತನಾಡಿ ಏ.27ರ ತನಕ ನಡೆಯುವ ಈ ವೈವಿಧ್ಯಮಯ ಶಿಬಿರದಲ್ಲಿ ಭಾಗವಹಿಸಲು ಕರೆ ನೀಡಿದರು.

ಸಮಾರಂಭದಲ್ಲಿ ಹೆಬ್ರಿ ಜೇಸಿಐ ಅಧ್ಯಕ್ಷೆ ರಕ್ಷಿತಾ ಪಿ.ಭಟ್, ಎನ್‌ಜಿಓ ವಿಜೇತಾ ಶೆಟ್ಟಿ, ಕರಾಟೆ ಗುರುಗಳಾದ ಡಾ.ವಿಜಯಲಕ್ಷ್ಮಿ ಆರ್.ನಾಯಕ್, ಸೋಮನಾಥ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು. ಉದಯಕುಮಾರ್ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.