ಆಚಾರ್ & ಕೋ ಸಿನಿಮಾ ಜುಲೈ 28ರಂದು ರಾಜ್ಯಾದ್ಯಂತ ತೆರೆಕಾಣಲಿದೆ

ಜುಲೈ 28ರಂದು ಬಿಡುಗಡೆ: ಮಹತ್ವಾಕಾಂಕ್ಷೆಯ ಸಹೋದರಿಯರು ಒಂದು ಕಡೆ ಆಧುನಿಕತೆಯ ಸವಾಲುಗಳನ್ನು ಎದುರಿಸುತ್ತಾ, ಇನ್ನೊಂದೆಡೆ ತಮ್ಮ ಬೇರುಗಳನ್ನೂ ಬಿಡದೇ ಹೇಗೆ ಯಶಸ್ವಿಯಾಗುತ್ತಾರೆ? ಎಂಬ ಕಥೆಯನ್ನು ಪ್ರೇಕ್ಷಕರಿಗೆ ಹೇಳಹೊರಟಿದೆ ವಿಭಿನ್ನ ಶೀರ್ಷಿಕೆಯ ಸಿನಿಮಾ. ಜುಲೈ 28ರಂದು ಸಿನಿಮಾ ತೆರೆಕಾಣಲಿದೆ.
ಕನ್ನಡ ಸಿನಿಮೋದ್ಯಮದಲ್ಲಿ ​​ಸದಭಿರುಚಿಯ, ಹೊಸ ಶೈಲಿಯ ಚಿತ್ರಗಳ ಮೂಲಕ ಕನ್ನಡಿಗರ ಮನ ಗೆದ್ದಿರುವ ಪಿ.ಆರ್.ಕೆ ಪ್ರೊಡಕ್ಷನ್ಸ್ ಇದೀಗ ಮತ್ತೊಂದು ವಿಭಿನ್ನ ಸಿನಿಮಾ ನಿರ್ಮಾಣ ಮಾಡಿದೆ. ಸಿಂಧು ಶ್ರೀನಿವಾಸಮೂರ್ತಿ ಚೊಚ್ಚಲ ನಿರ್ದೇಶನದ ‘ಆಚಾರ್ & ಕೋ’ ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ.

ಆಧುನಿಕತೆಯ ಸವಾಲು; ಸಂಪ್ರದಾಯದ ರಕ್ಷಣೆ: 1960ರ ಕಾಲಘಟ್ಟದಲ್ಲಿ ಬೆಂಗಳೂರಿನಲ್ಲಿ ನಡೆಯುವ ಕಥೆ ಇದು. ಒಂದು ಕುಟುಂಬ ತಮ್ಮ ಕನಸುಗಳನ್ನು ಬೆನ್ನತ್ತುವ ಹಾದಿಯಲ್ಲಿ ಹೇಗೆ ಸವಾಲುಗಳನ್ನು ಎದುರಿಸುತ್ತದೆ, ಸಂಪ್ರದಾಯಗಳನ್ನೂ ಮೀರದೇ ಆಧುನಿಕ ಜಗತ್ತಿನ ಅವಶ್ಯಕತೆಗಳನ್ನು ಹೇಗೆ ನಿಭಾಯಿಸಿ ಗೆಲ್ಲುತ್ತದೆ ಎಂಬ ಕಥೆಯನ್ನೊಳಗೊಂಡ ಭಾವನಾತ್ಮಕ ಚಿತ್ರ.​​

60ರ ದಶಕದ ಸಾಮಾಜಿಕ ಮತ್ತು ಸಾಂಪ್ರದಾಯಿಕ ವ್ಯವಸ್ಥೆಯಲ್ಲಿ ವಿನೂತನ ಆಲೋಚನೆಯೊಂದನ್ನು ಯಶಸ್ವಿಯಾಗಿಸಲು ಹೋರಾಡುವ ಈ ಚಿತ್ರದಲ್ಲಿ ಭಾವನಾತ್ಮಕ ದೃಶ್ಯಗಳ ಜೊತೆ ಜೊತೆಗೆ ಹಾಸ್ಯವೂ ಇದೆ. ಆಸಕ್ತಿಕರ ಸನ್ನಿವೇಶಗಳ ಜೊತೆಗೆ ಸಮಾಜಕ್ಕೆ ಒಂದು ಪ್ರೇರಣೆಯೂ ಇದೆ.

ವಿನೂತನ ಕಥೆಗಳಿಗೆ ಪಿಆರ್​ಕೆ ಬೆಂಬಲ: ಹೊಸ ಅಲೆಯ, ಹೊಸ ಆಲೋಚನೆಗಳ ಕನ್ನಡ ಸಿನಿಮಾ ನಿರ್ಮಾಣ ಮಾಡುವುದರಲ್ಲಿ ಸದಾ ಮುಂಚೂಣಿಯಲ್ಲಿರುವ ಪಿ.ಆರ್.ಕೆ ಪ್ರೊಡಕ್ಷನ್ಸ್ ಈವರೆಗೆ ವಿನೂತನ ಕಥೆಗಳಿಗೆ, ಹೊಸ ಪ್ರತಿಭೆಗಳಿಗೆ ವೇದಿಕೆಯಾಗುತ್ತಾ ಬಂದಿದೆ. ಕನ್ನಡ ಚಿತ್ರಗಳು, ಕಥಾಹಂದರ ಮತ್ತು ಗುಣಮಟ್ಟದ ವಿಷಯದಲ್ಲಿ ಪ್ರಾಮಾಣಿಕ ಹೆಜ್ಜೆಗಳನ್ನಿಡುತ್ತಾ ಬಂದಿರುವ ಸಂಸ್ಥೆ ಇದೀಗ ‘ಆಚಾರ್ & ಕೋ’ ಚಿತ್ರದ ಮೂಲಕ ಮತ್ತೊಂದು ಹೃದಯಸ್ಪರ್ಶಿ ಕಥೆಯನ್ನು ಪ್ರೇಕ್ಷಕರೆದುರು ತರುತ್ತಿದೆ.

1960ರ ಕಾಲಘಟ್ಟದ ಮರುಸೃಷ್ಟಿ: ​​​​ಸೂಕ್ತ ವಸ್ತ್ರವಿನ್ಯಾಸ ಮತ್ತು ಕಲಾ ನಿರ್ದೇಶನದ ಮೂಲಕ 60 ಮತ್ತು 70ರ ದಶಕದ ಬೆಂಗಳೂರನ್ನು ತೆರೆ ಮೇಲೆ ಸಮರ್ಥವಾಗಿ ಮರುಸೃಷ್ಟಿ ಮಾಡಲಾಗಿದೆ. ಈ ಕುಟುಂಬದ ಕಥೆಯನ್ನು ನೋಡುತ್ತಾ ಪ್ರೇಕ್ಷಕರು ತಮಗೇ ಗೊತ್ತಿಲ್ಲದಂತೆ ಅಂದಿನ ಕಾಲಕ್ಕೆ ರವಾನೆಯಾಗುತ್ತಾರೆ, ಆ ಕುಟುಂಬದ ಪಯಣದಲ್ಲಿ ತಾವೂ ಭಾಗಿಯಾಗುತ್ತಾರೆ ಎಂಬ ಭರವಸೆ ಚಿತ್ರ ತಂಡಕ್ಕಿದೆ.

ಮಹಿಳೆಯರೇ ಸೇರಿ ಮಾಡಿರುವ ಸಿನಿಮಾ: ​​’ಆಚಾರ್ & ಕೋ’ ಚಿತ್ರದ ಮತ್ತೊಂದು ಹೆಮ್ಮೆಯ ವಿಷಯವೆಂದರೆ ಹೆಚ್ಚಿನ ವಿಭಾಗಗಳಲ್ಲಿ ಮಹಿಳೆಯರೇ ಕೆಲಸ ಮಾಡಿರುವುದು. ಈ ಚಿತ್ರಕ್ಕೆ ನಿರ್ಮಾಪಕರು, ನಿರ್ದೇಶಕರು, ಸಂಗೀತ ನಿರ್ದೇಶಕರು, ಮುಖ್ಯ ಪಾತ್ರಧಾರಿ, ಸೌಂಡ್ ಇಂಜಿನಿಯರ್, ವಸ್ತ್ರ ವಿನ್ಯಾಸಕರು, ಕ್ರಿಯಾಶೀಲ ನಿರ್ಮಾಪಕರು ಸೇರಿದಂತೆ ಹಲವು ವಿಭಾಗಗಳಲ್ಲಿ ಮಹಿಳೆಯರೇ ಕೆಲಸ ಮಾಡಿದ್ದಾರೆ. ಅನೇಕ ಮಹಿಳಾ ಪ್ರತಿಭೆಗಳ ಸಂಗಮವಾಗಿರುವ ‘ಆಚಾರ್ & ಕೋ’ ನೈಜ ಅರ್ಥದಲ್ಲಿ ಒಂದು ಕ್ರಾಂತಿಯನ್ನೇ ಮಾಡಿದೆ ಅಂದ್ರೆ ತಪ್ಪಾಗುವುದಿಲ್ಲ. ಸಿಂಧು ಶ‍್ರೀನಿವಾಸಮೂರ್ತಿ ಅವರು ಈ ಚಿತ್ರದ ಬರವಣಿಗೆ, ನಿರ್ದೇಶನದ ಜವಾಬ್ದಾರಿಯ ಜೊತೆಗೆ ತಾವೇ ಮುಖ್ಯ ಪಾತ್ರವನ್ನೂ ನಿರ್ವಹಿಸಿದ್ದಾರೆ.

ಸಿಂಧು ಶ್ರೀನಿವಾಸಮೂರ್ತಿ ಕೆಲಸಕ್ಕೆ ಶ್ಲಾಘನೆ: ​​ಹೊಸ ಪ್ರತಿಭೆ ಸಿಂಧು ಶ್ರೀನಿವಾಸಮೂರ್ತಿ ಅವರಿಗೆ ಸಮರ್ಥವಾದ ವೇದಿಕೆ ನಿರ್ಮಿಸಿ ಕೊಟ್ಟಿರುವ ಚಿತ್ರದ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಸಿಂಧು ಅವರ ಪ್ರತಿಭೆ ಮತ್ತು ಕಾರ್ಯಕ್ಷಮತೆಯ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ”ಸಿಂಧು ಅವರ ಕ್ರಿಯಾಶೀಲತೆ ಮತ್ತು ಸಿನಿಮಾದ ಬಗ್ಗೆ ಅವರಿಗಿರುವ ಬದ್ಧತೆಯೇ ನಾವು ಅವರೊಂದಿಗೆ ಕೈ ಜೋಡಿಸಲು ಮುಖ್ಯ ಕಾರಣ. ನಿರ್ಮಾಣದ ಪ್ರತೀ ಹಂತದಲ್ಲೂ ಅತ್ಯಂತ ನಾಜೂಕಾಗಿ ಕೆಲಸ ಮಾಡಿರುವ ಸಿಂಧು ಅವರ ಆಲೋಚನೆಗಳು ಅದ್ಭುತ ಸಿನಿಮಾ ರೂಪ ತಳೆದಿದೆ. ಅದು ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನೂ ತಲುಪಲಿದೆ” ಎಂದು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹಾಡುಗಳು, ಟ್ರೇಲರ್​ ಸೇರಿದಂತೆ ಇನ್ನಿತರೆ ತುಣುಕುಗಳನ್ನು ಮುಂಬರುವ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ, ಪಿಆರ್​ಕೆ ಪ್ರೊಡಕ್ಷನ್ಸ್​ನ ಅಧಿಕೃತ ವೆಬ್​ಸೈಟ್​, ಚಾನಲ್​ಗಳ ಮೂಲ ವೀಕ್ಷಣೆಗೆ ಲಭ್ಯಗೊಳಿಸಲಾಗುವುದು. ಪ್ರೇಕ್ಷಕರಿಗೆ ಆಸಕ್ತಿ ಹುಟ್ಟಿಸಲು ನಮ್ಮ ತಂಡ ಉತ್ಸುಕವಾಗಿದೆ ಎಂದು ತಿಳಿಸಿದರು.

ಬಿಂದುಮಾಲಿನಿ ನಾರಾಯಣಸ್ವಾಮಿ ಸಂಗೀತ ನಿರ್ದೇಶನ, ಇಂಚರಾ ಸುರೇಶ್ ವಸ್ತ್ರ ವಿನ್ಯಾಸ, ಸೌಂಡ್ ಇಂಜಿನಿಯರ್ ಆಗಿ ಹೇಮಾ ಸುವರ್ಣ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ ಹಾಗೂ ಅಭಿಮನ್ಯು ಸದಾನಂದ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

​​’ಆಚಾರ್ & ಕೋ’ ಸಿನಿಮಾ ಬಿಡುಗಡೆ ಬಗ್ಗೆ ಮಾತನಾಡಿದ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್​ಕುಮಾರ್, ”ಎಲ್ಲ ವರ್ಗದ ಪ್ರೇಕ್ಷಕರನ್ನು ಮುಟ್ಟುವಂಥ, ಎಲ್ಲರಿಗೂ ಆಪ್ತವಾಗುವಂಥ ಒಂದು ಕಥೆಯನ್ನು ಹೊತ್ತು ತಂದಿದ್ದೇವೆ. ಇಂತಹ ವಿಶೇಷ ಚಿತ್ರವನ್ನು ನಿರ್ಮಾಣ ಮಾಡುತ್ತಿರುವುದಕ್ಕೆ ಬಹಳ ಖುಷಿ ಇದೆ. ಹೊಸ ಬಗೆಯ ಕಥೆಗಳಿಗೆ ವೇದಿಕೆಯಾಗುತ್ತೇವೆ ಎಂಬ ನಮ್ಮ ಬದ್ಧತೆಯನ್ನು ಈ ಚಿತ್ರ ಮುಂದುವರಿಸಿಕೊಂಡು ಹೋಗಲಿದೆ. ಪ್ರತಿಭಾವಂತ ಮಹಿಳಾ ತಂತ್ರಜ್ಞರಿಗೆ ಪ್ರೋತ್ಸಾಹ ನೀಡುವ ಮೂಲಕ ಈ ಸಿನಿಮಾ ನಮಗೆ ಮತ್ತು ಇಡೀ ಚಿತ್ರರಂಗಕ್ಕೆ ಅತ್ಯಂತ ಸ್ಮರಣೀಯವಾಗಿದೆ” ಎಂದರು. ಜೊತೆಗೆ ಎಲ್ಲ ವರ್ಗದ ಪ್ರೇಕ್ಷಕರನ್ನೂ ಸೆಳೆಯುವಂತಹ ಕಥಾಹಂದರ ಹೊಂದಿರುವ ನಮ್ಮ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಒಂದು ವಿಶಿಷ್ಟ ಚಿತ್ರವಾಗಿ ಉಳಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.