ಸೊಸೈಟಿ ಕಛೇರಿಯಲ್ಲಿ ಮಹಿಳೆ ಆತ್ಮಹತ್ಯೆ ಪ್ರಕರಣ: ಆರೋಪಿ ಆತ್ಮಹತ್ಯೆಗೆ ಶರಣು

ಕಾರ್ಕಳ: ಜು.14ರಂದು ಮಹಿಳೆಯೋರ್ವರು ಕೆಲಸ ಮಾಡುತ್ತಿದ್ದ ಸೊಸೈಟಿಯ ಕಚೇರಿಯಲ್ಲಿ ಅತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿದ್ದ ಸಂತೋಷ್ ಯಾನೆ ಹರಿತನಯ ದೇವಾಡಿಗ ಹೊಸ್ಮಾರಿನಲ್ಲಿ ಆತ್ಮಹತ್ಯೆ ಶರಣಾಗಿದ್ದಾನೆ.

ಹರಿತನಯ ಕಾರ್ಕಳ ಮಾರ್ಕೆಟ್ ರೋಡ್ ನ ಮಹಿಳಾ ಕೋ ಆಪರೇಟಿವ್ ಸೊಸೈಟಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಮೀಳಾ ಎಂಬುವವರನ್ನು ಹಣಕ್ಕಾಗಿ ಪೀಡಿಸುತ್ತಿದ್ದ. ಇದರಿಂದ ಬೇಸತ್ತು ಪ್ರಮೀಳಾ ನೇಣು ಬಿಗಿದುಕೊಂಡು ಬ್ಯಾಂಕ್ ನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದರು.

ಈ ಕುರಿತಂತೆ ಪ್ರಮೀಳಾ ಸಹೋದರ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ತನಿಖೆ ನಡೆಯುತ್ತಿತ್ತು.

ಶನಿವಾರದಿಂದ ನಾಪತ್ತೆಯಾಗಿದ್ದ ಸಂತೋಷ್ ಈದುವಿನ ಮನೆಯೊಂದರಿಂದ ಸೀರೆ ಕೊಂಡುಹೋಗಿದ್ದ ಎನ್ನಲಾಗಿದೆ. ಇದೀಗ ಈದು ಮಾಪಾಲು ಹಾಡಿಯೊಂದರಲ್ಲಿ ಸಂತೋಷ್ ಶವ ಆತ್ಮಹತ್ಯೆಗೈದ ರೀತಿಯಲ್ಲಿ ಪತ್ತೆಯಾಗಿದೆ.ಶವ ಕೊಳೆತು ಹೋಗಿದ್ದು ಆತ್ಮಹತ್ಯೆಗೈದು ಎರಡು ದಿನ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಸಂತೋಷ್ ಯಾನೆ

ಹರಿತನಯ ಪತ್ನಿ ಹಾಗೂ ಪುಟ್ಟ ಮಗುವನ್ನು ಅಗಲಿದ್ದಾನೆ.