ಉಡುಪಿ: ಗುಜರಿ ಹೆಕ್ಕಿಕೊಂಡು ಬದುಕು ಸಾಗಿಸುತ್ತಿದ್ದ 78 ವರ್ಷ ಪ್ರಾಯದ ವೃದ್ದೆಯ ಮೇಲೆ ಅತ್ಯಾಚಾರವೆಸಗಿ ಆಕೆಯ ಬಳಿಯಿದ್ದ ನಗದನ್ನು ಅಪಹರಿಸಿದ್ದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶ ನೀಡಿದೆ.
ಶಿವಮೊಗ್ಗ ಮೂಲದ ಇರ್ಫಾನ್ ಆತ್ಯಾಚಾರ ನಡೆಸಿದ ಆರೋಪಿಯಾಗಿದ್ದು, ಉಡುಪಿಯ ಕೋಳಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ. 2017 ಜೂನ್ 5 ರಂದು ಉಡುಪಿ ಪರಿಸರದಲ್ಲಿ ಗುಜರಿ ಮಾರಾಟ ಮಾಡಿಕೊಂಡು ಬದುಕುತ್ತಿದ್ದ ವೃದ್ಧೆಯನ್ನು ತೆಂಕಪೇಟೆ ಪರಿಸರದ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ನಡೆಸಿ ಆಕೆಯ ಬಳಿಯಿದ್ದ ರೂ 30,000 ನಗದನ್ನು ಕೂಡ ದೋಚಿಕೊಂಡು ಹೋಗಿದ್ದ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದು ಸುದೀರ್ಘ ವಿಚಾರಣೆಯ ಬಳಿಕ ಆರೋಪಿಗೆ ಅತ್ಯಾಚಾರ ಪ್ರಕರಣದಲ್ಲಿ 10 ವರ್ಷದ ಕಠಿಣ ಸಜೆ, ಐವತ್ತು ಸಾವಿರ ದಂಡ ಹಾಗೂ ದರೋಡೆ ಪ್ರಕರಣದಲ್ಲಿ ಆರು ತಿಂಗಳ ಸಾದಾ ಶಿಕ್ಷೆ ಹಾಗೂ ಐದು ಸಾವಿರ ದಂಡ ವಿಧಿಸಿದ್ದು, ದಂಡದ ಮೊತ್ತವನ್ನು ಸಂತ್ರಸ್ತ ವೃದ್ಧೆಗೆ ನೀಡಲು ನ್ಯಾಯಾಲಯ ಆದೇಶ ನೀಡಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಜಯಂತ ಶೆಟ್ಟಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.