ಅಜಾಗರೂಕತೆಯ ಬೈಕ್ ಚಲಾವಣೆಯಿಂದ ಪಾದಚಾರಿಯ ಸಾವಿಗೆ ಕಾರಣನಾದ ಆರೋಪಿಗೆ ಶಿಕ್ಷೆ

ಉಡುಪಿ: ಅತೀವೇಗ ಹಾಗೂ ಅಜಾಗರೂಕತೆಯಿಂದ ಬೈಕ್ ಚಲಾಯಿಸಿ, ಪಾದಚಾರಿಯ ಸಾವಿಗೆ ಕಾರಣವಾದ
ಆರೋಪಿಗೆ ನಗರದ ಪ್ರಧಾನ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.

2018 ಮೇ 28 ರಂದು ದೀಪ್‌ರಾಜ್ ನಾಯ್ಕ್ ಎಂಬಾತನು ಕೊಕ್ಕರ್ಣೆ ಯಿಂದ ಮುದ್ದೂರು ಕಡೆಗೆ ಹೋಗುವಾಗ ತನ್ನ ಬೈಕನ್ನು ಅತೀವೇಗ ಹಾಗೂ ಅಜಾಕರೂಕತೆಯಿಂದ ಚಲಾಯಿಸಿ, ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಾಕು ಪೂಜಾರ್ತಿ ಎಂಬ ಮಹಿಳೆಗೆ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ, ಅವರು ರಸ್ತೆಗೆ ಬಿದ್ದು ಹಣೆಗೆ ತೀವ್ರ ಸ್ವರೂಪದ ಗಾಯವಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಹಿನ್ನೆಲೆ, ಹೆಬ್ರಿ ಪೊಲೀಸ್ ಠಾಣೆ ಉಪನಿರೀಕ್ಷಕರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ವಿರುದ್ಧ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆ ನಗರದ ಪ್ರಧಾನ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶೆ ದೀಪಾ ಅವರು ಆರೋಪಿ ದೀಪ್‌ರಾಜ್ ನಾಯ್ಕ್ಗೆ 6 ತಿಂಗಳ ಸಾದಾ ಶಿಕ್ಷೆ ವಿಧಿಸಿ ತೀರ್ಪು ನೀಡಿರುತ್ತಾರೆ. ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕಿ ಜಯಂತಿ.ಕೆ. ವಾದ ಮಂಡಿಸಿರುತ್ತಾರೆ.