ಮುಲ್ಕಿ: ಹಿಟ್ ಎಂಡ್ ರನ್ ಪ್ರಕರಣದ ಆರೋಪಿ ಬಂಧನ

ಮುಲ್ಕಿ: ಮಂಗಳೂರು ಹೊರ ವಲಯದ ಮುಲ್ಕಿ ಸಮೀಪದ ಪಡುಪಣಂಬೂರು ಪೆಟ್ರೋಲ್ ಬಂಕ್ ಬಳಿ ಮಂಗಳವಾರ ಮಧ್ಯರಾತ್ರಿ ಕಾರು ಢಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಓರ್ವ ಗಂಭೀರ ಗಾಯಗೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪರಾರಿಯಾಗಿದ್ದ ಆರೋಪಿ ಕಾರು ಚಾಲಕನನ್ನು ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಕಾರು ಸಮೇತ ಬಂಧಿಸಿರುವುದಾಗಿ ವರದಿಯಾಗಿದೆ.

ಮಧ್ಯಪ್ರದೇಶದ ಇಂದೋರ್‌ನಿಂದ ಕೇರಳ ಕಡೆಗೆ ಹೋಗುತ್ತಿದ್ದ ಲಾರಿ ಪಡುಪಣಂಬೂರು ಬಳಿ ಟಯರ್ ಪಂಚರ್ ಆಗಿದ್ದು ಲಾರಿಯಲ್ಲಿದ್ದ ಮಧ್ಯಪ್ರದೇಶ ನಿವಾಸಿಗಳಾದ ಬಬುಲು(23), ಆಚಲ್ ಸಿಂಗ್ (30) ಹಾಗೂ ಕೇರಳ ನಿವಾಸಿ ಅನೀಶ್(42) ಎಂಬವರು ಕೆಳಗಿಳಿದು ಹೆದ್ದಾರಿ ಬದಿಯಲ್ಲಿ ಟಯರ್ ತೆಗೆದು ದುರಸ್ತಿ ಮಾಡುತ್ತಿದ್ದರು. ಇದೇ ವೇಳೆ ಹೆದ್ದಾರಿಯಲ್ಲಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಅತೀ ವೇಗವಾಗಿ ಚಲಿಸುತ್ತಿದ್ದ ಕಾರು, ಲಾರಿಯ ಟಯರ್ ದುರಸ್ತಿ ಮಾಡುತ್ತಿದ್ದ ಮೂವರಿಗೆ ಢಿಕ್ಕಿ ಹೊಡೆದು ಪರಾರಿಯಾಗಿತ್ತು. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದರು.

ಆರೋಪಿ ಕಾರು ಚಾಲಕನನ್ನು ಹಳೆಯಂಗಡಿ ಇಂದ್ರ ನಗರ ನಿವಾಸಿ ಅರ್ಪಿತ್ ಎಂದು ಗುರುತಿಸಲಾಗಿದ್ದು, ಮ್ಯಾಡ್ ಇನ್ ಕುಡ್ಲ ಖ್ಯಾತಿಯ ತುಳು ಕಾಮಿಡಿಯನ್, ಯೂಟ್ಯೂಬರ್ ಎಂದು ವರದಿಯಾಗಿದೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಮಾಧ್ಯಮ ವರದಿಯಾಗಿದೆ.