ಶಾಲಾ ಕಾಲೇಜುಗಳಲ್ಲಿ ಯಕ್ಷಗಾನ ಕಲಿಕೆಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹಾಗೂ ಕಲೆಯ ಉಳಿವು ಸಾಧ್ಯ: ಡಾ.ಶಿವರಾಮ್ ಶೆಟ್ಟಿ ತಲ್ಲೂರು

ಮಂಗಳೂರು: ಯಕ್ಷಗಾನ ಕಲೆಯಲ್ಲಿ ಅದ್ಭುತ ಶಕ್ತಿಯಿದೆ. ಯಕ್ಷಗಾನ ಕಲಿಯುವ ಮಕ್ಕಳು ಗುರುಹಿರಿಯರಿಗೆ ಗೌರವ ಕೊಡುತ್ತಾರೆ. ನವರಸಗಳನ್ನು ಮೇಳೈಸಿರುವ ಈ ಕಲೆಯನ್ನು ಶಾಲಾ ಕಾಲೇಜುಗಳಲ್ಲಿ ಕಲಿಸುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಜೊತೆಗೆ ಭವಿಷ್ಯದಲ್ಲಿ ಯಕ್ಷಗಾನ ಕಲೆಯ ಉಳಿವು ಬೆಳವಣಿಗೆಗೂ ಸಾಕಾರವಾಗುತ್ತದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷ ಹಾಗೂ ತಲ್ಲೂರು ಫ್ಯಾಮಿಲಿ ಟ್ರಸ್ಟ್ನ ಪ್ರವರ್ತಕ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಅವರು ಭಾನುವಾರ ಮಂಗಳೂರಿನ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕೃಷ್ಣಾಪುರ -ಕಾಟಿಪಳ್ಳ, ಯುವಕ ಮಂಡಲ ಕೃಷ್ಣಾಪುರ ಕೇಂದ್ರ ಮೈದಾನದಲ್ಲಿ ಏರ್ಪಡಿಸಿದ ಆಹ್ವಾನಿತ ಕಾಲೇಜು ಯಕ್ಷತಂಡಗಳ ಅಂತರ್ ಜಿಲ್ಲಾ -ಅಂತರ್ ಕಾಲೇಜು ಯಕ್ಷಗಾನ ಸ್ಪರ್ಧೆಯ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಸಂಸ್ಕಾರ -ಸಂಸ್ಕೃತಿ ಉಳಿಸಲು ಯಕ್ಷಗಾನ ಕಲಿಕೆ ಪೂರಕವಾಗಿದೆ. ಯಕ್ಷಗಾನದಲ್ಲಿ ಮಾತುಗಾರಿಕೆ, ಅಭಿನಯ, ನೃತ್ಯ, ಸಂಗೀತ ಮೊದಲಾದ ಕಲಾಪ್ರಕಾರಗಳೆಲ್ಲಾ ಅಡಗಿದೆ. ಈ ಕಲೆಯ ಸೆಳೆತವೇ ನನ್ನನ್ನು 60ರ ವಯಸ್ಸಿನಲ್ಲಿ ಯಕ್ಷಗಾನವನ್ನು ಕಲಿತು ಸುಮಾರು 400ರಷ್ಟು ಪ್ರದರ್ಶನಗಳನ್ನು ನೀಡುವಂತಾಯಿತು. ಯಕ್ಷಗಾನ ಕಲಾರಂಗದ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಯಕ್ಷ ಶಿಕ್ಷಣ ಟ್ರಸ್ಟ್ ಮೂಲಕ ಶಾಲೆಗಳಲ್ಲಿ ಯಕ್ಷ ಶಿಕ್ಷಣವನ್ನು ಕಲಿಸುವ ಅಭಿಯಾನ ಕೈಗೊಂಡಾಗ ಯಕ್ಷಗಾನ ಕಲೆ ಮಕ್ಕಳಲ್ಲಿ ನೈತಿಕ ಪ್ರಜ್ಞೆ ಮೂಡಿಸುವುದಲ್ಲದೆ ಅವರು ಉತ್ತಮ ಅಂಕಗಳೊಂದಿಗೆ ಶೈಕ್ಷಣಿಕ ಪ್ರಗತಿಯನ್ನು ಹೊಂದಿರುವುದು ಅರಿವಿಗೆ ಬಂತು. ಹೀಗಾಗಿ ಹೆತ್ತವರು ತಮ್ಮ ಮಕ್ಕಳ ಯಕ್ಷಗಾನ ಕಲಿಕೆಗೆ ಪ್ರೋತ್ಸಾಹ ನೀಡಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸಾಮಾಜಿಕ ಕಳಕಳಿ ಅಭಿನಂದನೀಯ. ಇದಕ್ಕೆ ಸಮಾಜದ ಪ್ರೋತ್ಸಾಹದ ಅಗತ್ಯವಿದೆ ಎಂದರು.

ಸ್ಥಳೀಯ ಶಾಸಕ ಡಾ. ಭರತ್ ಶೆಟ್ಟಿ ವೈ. ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಅಲ್ಲಿನ ಶಾಸಕರ ನೇತೃತ್ವದಲ್ಲಿ ಶಾಲಾ ಕಾಲೇಜುಗಳಲ್ಲಿ ಆರಂಭಿಸಿರುವ ಯಕ್ಷ ಶಿಕ್ಷಣವನ್ನು ಮಂಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲೂ ಆರಂಭಿಸುವ ಉದ್ದೇಶವಿದೆ ಎಂದರು.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಯಕ್ಷಗಾನ ಒಂದು ಸಮೃದ್ಧ ಕಲೆ. ವಿಶ್ವದ ಎಲ್ಲಾ ಕಲಾಪ್ರಕಾರಗಳ ಅಂಶ ಇದರಲ್ಲಡಗಿದೆ. ಇದನ್ನು ಉಳಿಸಿ ಬೆಳೆಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಉಡುಪಿ ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ಉಡುಪಿಯಲ್ಲಿ 152 ಶಾಲೆಗಳಲ್ಲಿ ಯಕ್ಷ ಶಿಕ್ಷಣವನ್ನು ಆರಂಭಿಸಲಾಗಿದೆ. ಈ ಮೂಲಕ ಭವಿಷ್ಯದ ಕಲಾವಿದರನ್ನು ರೂಪುಗೊಳಿಸುವ ಕಾರ್ಯ ನಡೆದಿದೆ ಎಂದರು.

ಕಟೀಲು ದೇವಿಪ್ರಸಾದ್ ಅಸ್ರಣ್ಣ ಆಶೀರ್ವಚನ ನೀಡಿದರು.

ಯಕ್ಷಗಾನ ಮೇಳಗಳ ಸಂಚಾಲಕ ಪಿ.ಕಿಶನ್ ಹೆಗ್ಡೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಯಕ್ಷಗಾನ ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಗೆ ಲೇಖನ ಪುಸ್ತಕ, ಬ್ಯಾಗ್ ವಿತರಣೆ, ಬ್ಯಾಂಕ್ ಖಾತೆಯ ಹಸ್ತಾಂತರ ನಡೆಯಿತು.

ಮಂಗಳೂರಿನ ಎಸ್.ಎಸ್.ಶೇಟ್ ಡೈಮಂಡ್ ಹೌಸ್‌ನ ಮಾಲೀಕ ಎಂ.ರವೀಂದ್ರ ಶೇಟ್, ಸ್ಥಳೀಯ ಕಾಪೋರೇಟರ್ ಲಕ್ಷ್ಮಿ ಶೇಖರ ದೇವಾಡಿಗ, ಸಮಾಜ ಸೇವಕಿ ಸುಶೀಲಾ ಕೆ.ಶೆಟ್ಟಿ, ಉದ್ಯಮಿಗಳಾದ ಪ್ರಶಾಂತ್ ಮೂಡಾಯಿಕೋಡಿ, ಆಡಳಿತ ಮೊಕ್ತೇಸರ ಪುರುಷೋತ್ತಮ ಕುಲಾಲ್ ಕಲ್ಬಾವಿ, ಜ್ಯೋತಿಷಿ ಡಾ.ವಾಮನ ಸಾಲಿಯಾನ್, ವಿವೇಕ ಆಚಾರ್ಯ, ಸಮಿತಿಯ ಅಧ್ಯಕ್ಷ ದುರ್ಗಾಪ್ರಸಾದ್ ಹೊಳ್ಳ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವೇ.ಮೂ.ಪಿ.ವೆಂಕಟರಮಣ ಐತಾಳ್ ಹಾಗೂ ಯಕ್ಷಗಾನ ಕಲಾವಿದ ಡಿ.ಮಾಧವ ಬಂಗೇರ ಕೊಳತ್ತಮಜಲು ಇವರಿಗೆ ಗೌರವಾರ್ಪಣೆ ನಡೆಯಿತು.

ವಕೀಲ ಸದಾಶಿವ ಐತಾಳ್ ಸ್ವಾಗತಿಸಿ, ಪಿ. ಸುಧಾಕರ ಕಾಮತ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.