ಉಡುಪಿ: ಮಂಗಳೂರು ವಿಶ್ವವಿದ್ಯಾನಿಲಯದಿಂದ ವಿದ್ಯಾರ್ಥಿಗಳು ಅನುಭವಿಸುತ್ತಿರುವ ಶೈಕ್ಷಣಿಕ ಸಮಸ್ಯೆಯ ಕುರಿತು ಡಿ.17 ರಂದು ಎಬಿವಿಪಿ ವತಿಯಿಂದ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯವು ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡದೆ ಸತಾಯಿಸುತ್ತಿರುವುದು, ಅಂಕಪಟ್ಟಿ ಬಾರದ ಹಿನ್ನೆಲೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಲು ಸಮಸ್ಯೆಯಾಗುತ್ತಿರುವುದು, ಮೌಲ್ಯಮಾಪನವನ್ನು ಸೂಕ್ತ ಸಮಯದಲ್ಲಿ ನಡೆಸದೇ ಇರುವುದು, ಮರು ಪರೀಕ್ಷೆ ಹಾಗೂ ಮರುಮೌಲ್ಯಮಾಪನಗಳಲ್ಲಿ ಗೊಂದಲ, ಮರು ಮೌಲ್ಯಮಾಪನದಲ್ಲಿ ಶುಲ್ಕ ಮರುಪಾವತಿಗೆ ನಿಗದಿ ಪಡಿಸಿದಷ್ಟು ಅಂಕ ಬಂದರೂ ಸಹ ಕಟ್ಟಿದ ಶುಲ್ಕವು ಮರುಪಾವತಿಯಾಗದಿರುವುದು, ಈ ಎಲ್ಲಾ ಸಮಸ್ಯೆಗಳು ಒಂದು ಕಡೆಯಾದರೆ ಎನ್.ಇ.ಪಿ ಜಾರಿಯಾದ ನಂತರ ಮೊದಲನೇ ವರ್ಷಕ್ಕೆ ಸೇರ್ಪಡೆಯಾದ ವಿದ್ಯಾರ್ಥಿಗಳು ಪ್ರಸ್ತುತ ದ್ವಿತೀಯ ವರ್ಷದಲ್ಲಿ ಇದ್ದರೂ ಸಹ ಪ್ರಥಮ ಹಾಗೂ ದ್ವಿತೀಯ ಸೆಮಿಸ್ಟರ್ ನ ಮೌಲ್ಯಮಾಪನ ಈವರೆಗೂ ಆಗಿರುವುದಿಲ್ಲ. ಆದಾಗ್ಯೂ, ತೃತೀಯ ಸೆಮಿಸ್ಟರ್ ನಲ್ಲಿರುವ ವಿದ್ಯಾರ್ಥಿಗಳಿಗೆ ಈ ಹಿಂದಿನ ಎರಡು ಸೆಮಿಸ್ಟರ್ ನ ಫಲಿತಾಂಶ ಇಲ್ಲದಿದ್ದರೂ ಮೂರನೇ ಸೆಮಿಸ್ಟರ್ ನ ಪರೀಕ್ಷಾ ಶುಲ್ಕವನ್ನು ಪಡೆದುಕೊಂಡಿದ್ದಾರೆ. ಇದು ಯಾವ ನ್ಯಾಯ?
ಮಂಗಳೂರು ವಿಶ್ವವಿದ್ಯಾನಿಲಯದ ಈ ಎಲ್ಲಾ ಬೇಜಾವಾಬ್ದಾರಿತನದಿಂದಾಗಿ ಮಕ್ಕಳು ಹಾಗೂ ಪೋಷಕರು ತಲೆತಗ್ಗಿಸುವಂತೆ ಆಗಿದೆ. ಸಾವಿರಾರು ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ವಿಭಾಗಗಳಿಗೆ ಸೇರ್ಪಡೆಯಾಗಲು ಆಗದೆ ಇರುವುದು ಶೋಚನೀಯ.
ಈ ಎಲ್ಲಾ ವಿಷಯಗಳಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳು ಹಾಗೂ ಪರೀಕ್ಷಾಂಗ ಕುಲ ಸಚಿವರು ನೇರ ಹೊಣೆಯಾಗಿದ್ದಾರೆ. ಹಾಗಾಗಿ ವಿದ್ಯಾರ್ಥಿಗಳು ಅನುಭವಿಸುತ್ತಿರುವ ತೊಂದರೆಗಳನ್ನು ಶೀಘ್ರವೇ ಪರಿಹರಿಸಬೇಕಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ಮನವಿಯಲ್ಲಿ ಆಗ್ರಹಿಸಿದೆ.












