ಅಲೆವೂರು ಗ್ರಾಪಂ ಸದಸ್ಯನಿಂದ ಕಟ್ಟಡ ಕಾರ್ಮಿಕರ ಕಿಟ್ ದುರುಪಯೋಗ: ಗ್ರಾಪಂ ಅಧ್ಯಕ್ಷೆಯಿಂದ ದೂರು

ಉಡುಪಿ: ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರಿಗೆ ಮಂಜೂರಾದ 200 ಸಾಮಗ್ರಿಗಳ ಕಿಟ್ ಗಳನ್ನು ಅಲೆವೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಹಾಲಿ‌ ಸದಸ್ಯ ಶ್ರೀಕಾಂತ್ ನಾಯಕ್ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿ ಅಲೆವೂರು ಗ್ರಾಪಂ ಅಧ್ಯಕ್ಷೆ ಪುಷ್ಪ ಅಂಚನ್ ಮಣಿಪಾಲ ಪೊಲೀಸ್ ಠಾಣೆಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಜುಲೈ 8 ರಂದು ಕಾರ್ಮಿಕ ಇಲಾಖೆಯಿಂದ ಗ್ರಾಪಂ ವ್ಯಾಪ್ತಿಯ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ 200 ಆಹಾರ ಸಾಮಗ್ರಿಗಳ ಕಿಟ್ ಮಂಜೂರಾಗಿತ್ತು. ಈ ಬಗ್ಗೆ ಪಂಚಾಯತ್ ಕಾರ್ಯದರ್ಶಿ ಶಾಂತಪ್ಪ ಅವರಿಗೆ ಕಾರ್ಮಿಕ ಇಲಾಖೆ ನಿರೀಕ್ಷಕ ಪ್ರವೀಣ್ ಮಲ್ಲಿ ಅವರು ಮಾಹಿತಿ ನೀಡಿದ್ದರು.

ಅದರಂತೆ ಕಿಟ್ ಗಳನ್ನು ತರಲು ಜುಲೈ 9 ರಂದು ಕಾರ್ಮಿಕ ಇಲಾಖೆಗೆ ಹೋದಾಗ ಕಿಟ್ ಗಳನ್ನು ಅಲೆವೂರು ಗ್ರಾಪಂ ಸದಸ್ಯರಾಗಿರುವ ಶ್ರೀಕಾಂತ್ ನಾಯಕ್ ಅವರು, ‘ನಾನು ಗ್ರಾಮ ಪಂಚಾಯತ್ ಗೆ ತಲುಪಿಸುವುದಾಗಿ ಹೇಳಿ ಕಿಟ್ ಗಳನ್ನು ತೆಗೆದುಕೊಂಡು ಹೋಗಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ಶ್ರೀಕಾಂತ್ ಅವರು ಪಂಚಾಯತ್ ಗೆ ಕಿಟ್ ತಲುಪಿಸದೆ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.