ಆವತ್ತು ದ್ವಿತೀಯ ಪಿಯುಸಿ ಪರೀಕ್ಷೆ ಮುಗಿದು ಫಲಿತಾಂಶವೂ ಬಂದಾಗಿತ್ತು. ನಾನು ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಆದೆ. ಮುಂದೆ ಪದವಿಗೆ ಸೇರ್ಪಡೆಯಾಗಲು ಕಾರ್ಕಳದ ಕಾಲೇಜ್ ಗೆ ಬಂದೆ. ಅಡ್ಮಿಸನ್ ಫಾರ್ಮ್ ತೆಗೆದುಕೊಳ್ಳುವಾಗ ನನ್ನನ್ನು ಸೆಳೆದಿದ್ದು ಆ ಕಣ್ಣುಗಳು. ಆ ಕಣ್ಣುಗಳನ್ನು ನೋಡಿ ಒಂದು ಕ್ಷಣ ಕಳೆದುಹೋದೆ. ಯಾರಪ್ಪ ಈ ಸುಂದರಿ ಎಂದು ನನ್ನಲ್ಲೆ ನಾನು ಕೇಳಿಕೊಂಡೆ.
ಅವಳು ಬುರ್ಖಾ ತೊಟ್ಟಿದರಿಂದ ಅವಳ ಮುಖ ನೋಡಲು ಸಾಧ್ಯವಾಗಲಿಲ್ಲ. ಆದರೆ ಅವಳ ಕಣ್ಣುಗಳು ನನ್ನ ಮನಸ್ಸಿನಲ್ಲಿ ಹಚ್ಚೆ ಹಾಕಿದವು. ಮೊದಲ ಪ್ರೀತಿ ಸಣ್ಣಗೇ ಹುಟ್ಟಿತು. ಅವಳನ್ನು ನೋಡಿ ನಾನು ಕಳೆದು ಹೋದೆ. ಯಾವುದಾದರೂ ನೆಪ ಮಾಡಿ ಅವಳ ಹತ್ತಿರ ಮಾತನಾಡಬೇಕೆಂದು ಯೋಚಿಸಿದೆ. ಆದರೆ ಅವಳು ಜಿಂಕೆಯಂತೆ ಮಾಯವಾದಳು. ಅವಳನ್ನು ತುಂಬಾ ಹುಡುಕಾಡಿದೆ ಆದರೆ ಅವಳು ಮಾತ್ರ ಸಿಗಲಿಲ್ಲ.
ನನ್ನನ್ನು ನಾನೇ ಸಮಾಧಾನ ಮಾಡಿಕೊಂಡು ಇವತ್ತು ಸಿಗದಿದ್ದರೆ ಏನಂತೆ? ಈ ಕಾಲೇಜಿಗೆ ಬಂದೇ ಬರುತ್ತಾಳೆ ಎಂದುಕೊಂಡು ಮನೆ ಕಡೆಗೆ ನಡೆದೆ. ಮನೆಗೆ ಹೋದರೂ ಅವಳದ್ದೆ ನೆನಪು. ಅವಳ ದ್ರಾಕ್ಷಿಯಂತಿರುವ ಕಣ್ಣುಗಳು ನನ್ನನ್ನು ಮೋಡಿ ಮಾಡಿದ್ದವು. ಕಾಲೇಜು ಯಾವಾಗ ಪ್ರಾರಂಭವಾಗುತ್ತೊ ಅಂತ ಚಡಪಡಿಸುತ್ತಿದ್ದೆ, ಕೊನೆಗೂ ಕಾಲೇಜು ಆರಂಭದ ದಿನ ಬಂದೇ ಬಿಟ್ಟಿತ್ತು. ಬೇಗ ರೆಡಿಯಾಗಿ ಕಾಲೇಜಿಗೆ ಬಂದು ಎಲ್ಲಾ ಹೊಸ ಮುಖಗಳ ನಡುವೆ ನನ್ನ ಕಣ್ಣು ಮಾತ್ರ ಹುಡುಕಾಡಿದ್ದು ನನ್ನ ಸುಂದರಿಯ ಕಣ್ಣುಗಳನ್ನು. ಅವಳು ಮಾತ್ರ ಪತ್ತೆಯಾಗಲೇ ಇಲ್ಲ. ಆವತ್ತೆ ಕೊನೆ ಮತ್ತೆ ಆ ಹುಡುಗಿಯನ್ನು ಕಾಲೇಜಿನಲ್ಲಿ ನೋಡಲೇ ಇಲ್ಲ, ಆದರೆ ನನ್ನ ಮನದಲ್ಲಿ ಅವಳದ್ದೇ ನೆನಪು.
ಅವಳು ಎಂಬ ಹಿತವಾದ ವೈರಸ್ ಗೆ ನಾನು ತುತ್ತಾಗಿ ಈಗ ಅವಳ ನೆನಪಿನ ಕ್ವಾರಂಟೈನ್ ನಲ್ಲಿ ಬಂಧಿಯಾಗಿದ್ದೇನೆ. ಅವಳೇ ನನ್ನ ಮೊದಲ ಮತ್ತು ಕೊನೆಯ ಪ್ರೀತಿ. ಅವಳಿಗಾಗಿ ಕಾಯುತ್ತೇನೆ, ಸಿಕ್ಕೆ ಸಿಗುತ್ತಾಳೆ ಅನ್ನೊ ನಂಬಿಕೆ ಇದೆ. ನನ್ನ ಪ್ರೀತಿಯ ಹೃದಯದ ಅರಮನೆಗೆ ಅವಳೇ ಮುಮ್ತಾಜ್, ನಾನೇ ಷಹಜಹಾನ್. ಹೇ ಕಪ್ಪು ಬುರ್ಖಾದ ಸುಂದರಿ ನಿನ್ನ ನೆನಪಿನಲ್ಲೆ ಕಾಯುತ್ತಿರುವ
♥ ಇಂತಿ ನಿನ್ನ ಪ್ರೀತಿಯ ಇನಿಯ
-ತೌಫೀಕ್ ಸಾಣೂರು