ಬೆಂಗಳೂರು: ಮಿಸ್ಟರ್ 360 ಡಿಗ್ರಿ ಎಂದು ಪರಿಗಣಿಸಲಾಗುವ, ಕ್ರಿಕೆಟ್ ಜಗತ್ತಿನ ಬಹು ಬೇಡಿಕೆಯ ಆಟಗಾರ, ಆರ್ಸಿಬಿಯ ಹಕ್ಕಿ ಎಬಿ ಡಿವಿಲಿಯರ್ಸ್ ಮರಳಿ ಗೂಡು ಸೇರಲಿದ್ದಾರೆ. ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ ಕೆಲವು ತಿಂಗಳ ನಂತರ, ಎಬಿ ಡಿವಿಲಿಯರ್ಸ್ ತಮ್ಮ ಐಪಿಎಲ್ ಫ್ರಾಂಚೈಸಿಯಾದ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಮರಳುವುದಾಗಿ ಹೇಳಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿ ಮುಂದಿನ ವರ್ಷ ಐಪಿಎಲ್ಗೆ “ಖಂಡಿತವಾಗಿ” ಮರಳಲಿದ್ದೇನೆ ಎಂದು ಅವರು ಹೇಳಿದ್ದಾರೆ.
“ವಿರಾಟ್ ಅದನ್ನು ಖಚಿತಪಡಿಸಿದ್ದು ಕೇಳಿ ನನಗೆ ಖುಷಿಯಾಗಿದೆ. ನಿಜ ಹೇಳಬೇಕೆಂದರೆ, ನಾವು ಇನ್ನೂ ಯಾವುದನ್ನೂ ನಿರ್ಧರಿಸಿಲ್ಲ. ಮುಂದಿನ ವರ್ಷ ಖಂಡಿತಾ ಐಪಿಎಲ್ ಗೆ ಬರಲಿದ್ದೇನೆ. ಯಾವ ಸಾಮರ್ಥ್ಯದಲ್ಲಿ ಎಂದು ನನಗೆ ಖಚಿತವಿಲ್ಲ ಆದರೆ ನಾನು ಅಲ್ಲಿಗೆ ಹಿಂತಿರುಗುವುದನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ” ಎಂದು ಡಿವಿಲಿಯರ್ಸ್ ವಿಯು ಸ್ಪೋರ್ಟ್ ಗೆ ತಿಳಿಸಿದ್ದಾರೆ.
“ಬೆಂಗಳೂರಿನಲ್ಲಿ ಕೆಲವು ಆಟಗಳಿರಬಹುದು ಎಂದು ಪುಟ್ಟ ಹಕ್ಕಿಯೊಂದು ಟ್ವೀಟ್ ಮಾಡುವುದನ್ನು ಕೇಳಿದ್ದೇನೆ. ಹಾಗಾಗಿ ನನ್ನ ಎರಡನೇ ತವರೂರಿಗೆ ಹಿಂತಿರುಗಲು ಮತ್ತು ಚಿನ್ನಸ್ವಾಮಿಯಲ್ಲಿನ ಪೂರ್ಣ ಸಾಮರ್ಥ್ಯದ ಕ್ರೀಡಾಂಗಣವನ್ನು ಮತ್ತೊಮ್ಮೆ ವೀಕ್ಷಿಸಲು ನಾನು ಇಷ್ಟಪಡುತ್ತೇನೆ. ನಾನು ಹಿಂತಿರುಗಲು ಇಷ್ಟಪಡುತ್ತೇನೆ, ನಾನು ಅದನ್ನು ಎದುರು ನೋಡುತ್ತಿದ್ದೇನೆ ” ಎಂದು ಅವರು ಹೇಳಿದ್ದಾರೆ.
ಏತನ್ಮಧ್ಯೆ, ಡಿವಿಲಿಯರ್ಸ್ ಅವರ ಮಾಜಿ ನಾಯಕ ಮತ್ತು ಸಹ ಆಟಗಾರ ವಿರಾಟ್ ಕೊಹ್ಲಿ ಮುಂದಿನ ವರ್ಷದ ಐಪಿಎಲ್ನಲ್ಲಿ ಎಬಿ ಫ್ರಾಂಚೈಸಿಗೆ ಮರಳುವ ಬಗ್ಗೆ ಸುಳಿವು ನೀಡಿದ್ದರು. ದಕ್ಷಿಣ ಆಫ್ರಿಕಾದ ಶ್ರೇಷ್ಠ ಆಟಗಾರ ಮುಂದಿನ ವರ್ಷ ಹೊಸ ಪಾತ್ರದಲ್ಲಿ ಆರ್ಸಿಬಿಗೆ ಮರಳುವ ಭರವಸೆ ಇದೆ ಎಂದು ವಿರಾಟ್ ಈ ತಿಂಗಳ ಆರಂಭದಲ್ಲಿ ಹೇಳಿದ್ದರು.