ಉಡುಪಿ: ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಪ್ರಪ್ರಥಮವಾಗಿ ಭಾರತದಲ್ಲೆ ಜಾರಿಗೊಳಿಸಲಾದಂತಹ ಯೋಜನೆ, ಇಂತಹ ಯೋಜನೆ ಪ್ರಪಂಚದ ಬೇರಿನ್ನಾವುದೇ ದೇಶದಲ್ಲಿ ಇಲ್ಲದಿರುವುದು ನಮ್ಮ ಹೆಗ್ಗಳಿಕೆ. ಈ ಯೋಜನೆಯಲ್ಲಿರುವ ಅಡೆತಡೆಗಳನ್ನು ಸರಿಪಡಿಸಿ, ಮುಂದಿನ ದಿನಗಳಲ್ಲಿ ಎಲ್ಲರಿಗೂ ಇದರ ಲಾಭ ದೊರೆಯುವಂತೆ ಮಾಡಲಾಗುವುದು ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಭರವಸೆ ನೀಡಿದರು.
ಅವರು, ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಬ್ರಹ್ಮಗಿರಿಯ ಐಎಂಎ ಭವನದಲ್ಲಿ ಹಮ್ಮಿಕೊಳ್ಳಲಾದ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಪಾಕ್ಷಿಕ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತವಾಗಿ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆಯನ್ನು ಕೊಡಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ಈ ಯೋಜನೆಯ ಲಾಭವು ಎಲ್ಲರಿಗೂ ದೊರಕುವಂತಾಗಲು ಯೋಜನೆಯಲ್ಲಿರುವ ಅಡೆತಡೆಗಳನ್ನು ಶೀಘ್ರವೇ ಸರಿ ಪಡಿಸಿ ಜನರಿಗೆ ತಕ್ಷಣದಿಂದಲೇ ಸಹಾಯವಾಗುವಂತೆ ಮುಂದಿನ ದಿನಗಳಲ್ಲಿ ಪ್ರಯತ್ನಿಸಲಾಗುವುದು, ಎಂದು ಸಂಸದೆ ಹೇಳಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಮಾತನಾಡಿ, ಸಾರ್ವಜನಿಕರಲ್ಲಿ ಈ ಯೋಜನೆಯ ಬಗ್ಗೆ ಕೆಲವೊಂದು ಗೊಂದಲಗಳಿವೆ. ಇಂತಹ ಗೊಂದಲಗಳನ್ನು ನಿವಾರಿಸಲು ಸ್ಥಳೀಯ ಜನ ಪ್ರತಿನಿಧಿಗಳಿಗೆ ಸರಿಯಾದ ಮಾಹಿತಿ ನೀಡಿ, ಜಾಗೃತಿ ಮೂಡಿಸುವ ಕೆಲಸವಾದರೆ ಮುಂದಿನ ದಿನಗಳಲ್ಲಿ ಒಳ್ಳೆಯ ಫಲಿತಾಂಶ ದೊರೆಯುತ್ತದೆ ಎಂದರು.
ಕಾರ್ಯಕ್ರಮದ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ,
ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಅಶೋಕ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ, ಕಾಪು ತಾಲೂಕು ಪಂಚಾಯತ್ ಅಧ್ಯಕ್ಷ ನವೀನ್ಚಂದ್ರ, ಅಲೆವೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಕಾಂತ್ ನಾಯಕ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ರಾಮ್ರಾಮ್, ಆರ್ಸಿಎಚ್ ಅಧಿಕಾರಿ ಎಂ.ಜಿ ರಾಮ, ಡಾ.ಪ್ರಶಾಂತ್ ಭಟ್, ತಾಲೂಕು ಆರೋಗ್ಯ ಅಧಿಕಾರಿ ನಾಗರತ್ನ, ಆಯುಷ್ಮಾನ್ ಭಾರತ್ನ ಜಿಲ್ಲಾ ಸಂಯೋಜಕ ಜಗನ್ನಾಥ್ ವಿವಿಧ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.
ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ ಜಾಗೃತಿಗಾಗಿ ಬೋರ್ಡ್ ಸಂಯುಕ್ತ ಸರಕಾರಿ ಪದವಿ ಪೂರ್ವ ಕಾಲೇಜಿನಿಂದ ಜಿಲ್ಲಾಸ್ಪತ್ರೆವರೆಗೆ ಜಾಥ ಕಾರ್ಯಕ್ರಮ ನಡೆಯಿತು.