ಉಡುಪಿ: ಗೆಳೆಯರ ಬಳಗ ಲಕ್ಷ್ಮೀನಗರ ಗರ್ಡೆ ವತಿಯಿಂದ ಕೃಷ್ಣಪ್ಪ ಕಾಂಪ್ಲೆಕ್ಸ್ ನಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ನಗರ ಸಭಾ ಸದಸ್ಯ ವಿಜಯ್ ಕೊಡವೂರು, ಇಂದು ನಮಗೆ ನಮ್ಮ ಹಿರಿಯರು ನಡೆದ ಹೆಜ್ಜೆ ಗುರುತುಗಳು ನೆನಪಾಗಲು ಪ್ರಾರಂಭವಾಗಿದೆ. ಇದು ಒಳ್ಳೆಯ ವಿಷಯವಾದ್ದರಿಂದ ನಾವು ಈ ಕಾರ್ಯಕ್ರಮ ಮಾಡುತ್ತಿದ್ದೇವೆ. ಕಾರ್ಯಕ್ರಮವು ಕೇವಲ ತಿಂಡಿ ತಿನಿಸುಗಳಿಗೆ ಮಾತ್ರ ಸೀಮಿತವಾಗಿರದೆ, ಹಿರಿಯರು ನಡೆದ ಜೀವನದ ಪ್ರತಿಕ್ಷಣವೂ ಅವರ ಪ್ರತಿ ಗುಣವೂ ನಮ್ಮದಾಗಬೇಕಾಗಿದೆ.
ಒಂದು ಮನೆಯಲ್ಲಿ ಒಟ್ಟಾಗಿ ಬದುಕುವ ಆ ಆನಂದ ನಮ್ಮಲ್ಲಿ ಕಾಣಲು ಸಾಧ್ಯವಿದೆ. ಅಣ್ಣತಮ್ಮಂದಿರು ರಾಮ ಲಕ್ಷ್ಮಣರಂತೆ ಇರಬೇಕು, ಗಂಡ ಹೆಂಡತಿ ಸೀತಾರಾಮರಂತಿರಬೇಕು, ನಮ್ಮ ಭಕ್ತಿ ಹನುಮಂತನಂತಿರಬೇಕು. ಕಷ್ಟದ ದಿನದಲ್ಲಿ ನಡೆದು ತೋರಿಸಿದವರು ನಮ್ಮ ಹಿರಿಯರು ಆದರೆ ನಾವು ಶ್ರೀಮಂತಿಕೆಯ ದಿನಗಳಲ್ಲಿ ನಮ್ಮ ಹಿರಿಯರು ನಡೆದ ದಾರಿಯನ್ನು ಮೆರೆತಿದ್ದೇವೆ. ನಮ್ಮ ಒಂದು ಮನೆ ಈಗ ಮನೆಯೊಂದು ಮೂರು ಬಾಗಿಲಾಗಿದೆ. ಇದಕ್ಕೆ ಕಾರಣ ನಮ್ಮ ಶ್ರೀಮಂತಿಕೆಯ ಬದುಕಿನ ಓಡಾಟ. ಹಿರಿಯರು ನಡೆದ ಆಚಾರ ವಿಚಾರ ಸಂಸ್ಕೃತಿಗಳು ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿರುತ್ತದೆ. ಈ ರೀತಿ ನಡೆದು ನಾವು ನಮ್ಮ ದೇಶ ಧರ್ಮವನ್ನು ರಕ್ಷಿಸಬೇಕಾಗಿದೆ. ಒಂದು ವೇಳೆ ದೇಶ ಧರ್ಮವನ್ನು ಬಿಟ್ಟು ಮುಂದುವರಿದರೆ ಎಲ್ಲಾ ಸಂಸ್ಕೃತಿಗಳು ನಾಶವಾಗುವ ಸಾಧ್ಯತೆ ಇದೆ. ಹಿಂದು ಧರ್ಮ ಉಳಿದರೆ ಈ ಪ್ರಪಂಚಕ್ಕೆ ಸುಖ ನೆಮ್ಮದಿ ಬರುವುದು. ಅದಕ್ಕಾಗಿ ನಾವು ನಮ್ಮ ಹಿರಿಯರು ನಡೆದ ದಾರಿಯನ್ನು ನೆನಪು ಮಾಡುತ್ತಾ ನಮ್ಮ ಮುಂದಿನ ಜನಾಂಗಕ್ಕೆ ಇದರ ಪರಿಚಯವನ್ನು ಮಾಡಿಸುವ ಅವಶ್ಯಕತೆ ಇದೆ. ಆಟಿಡೊಂಜಿ ದಿನ ಎಲ್ಲರಿಗೂ ಕೇವಲ ಒಂದು ದಿನದ ಆಚರಣೆಯಾಗದೆ ಜೀವನ ಪೂರ್ತಿ ನೆನೆಪು ಮಾಡುವಂತಹ ವಿಷಯವಾಗಬೇಕು ಎಂದರು.
ಗೆಳೆಯರ ಬಳಗದ ಅಧ್ಯಕ್ಷ ಪ್ರಶಾಂತ್ ಶೆಟ್ಟಿಗಾರ್,ಪ್ರೇಮ ದಯಾನಂದ್ ಅಧ್ಯಕ್ಷರು ಮಹಿಳಾ ಮಂಡಳಿ ಗರ್ಡೆ,ಲಕ್ಷ್ಮೀ ನಗರ,ವಿನೋದ ಶೆಟ್ಟಿ, ಮಮತಾ ಶೆಟ್ಟಿ, ಸಮಾಜಸೇವಕ ಬಾ ಸಾಮಗ ಹಿರಿಯ ಪತ್ರಕರ್ತರು ಮತ್ತು ಇನ್ನಿತರರು ಉಪಸ್ಥಿತರಿದ್ದರು.
ಅಮಿತ್ ಕುಮಾರ್ ಸ್ವಾಗತಿಸಿದರು, ಪ್ರಶಾಂತ್ ಕುಂದರ್ ವಂದಿಸಿದರು.












