ಮಣಿಪುರದಲ್ಲಿ ‘ಆಟಿದ ನೆನಪು’ ಕಾರ್ಯಕ್ರಮ: ಕರಾವಳಿಯ ಸಂಪ್ರದಾಯದ ಪರಿಚಯ


ಉಡುಪಿ: ಕರಾವಳಿಯ ಆಟಿ ತಿಂಗಳ ಸಂಪ್ರದಾಯ, ಹಳೆಯ ಜೀವನಶೈಲಿ, ಔಷಧೀಯ ಸಸ್ಯಗಳು ಹಾಗೂ ಸಾಂಪ್ರದಾಯಿಕ ಆಹಾರ ಸಂಸ್ಕೃತಿಯನ್ನು ಇಂದಿನ ಮಕ್ಕಳಿಗೆ ಪರಿಚಯಿಸುವ ಉದ್ದೇಶದಿಂದ ಮಣಿಪುರದಲ್ಲಿ ‘ಆಟಿದ ನೆನಪು’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಸಂಘ ಮಣಿಪುರ ಹಾಗೂ ಶ್ರೀ ನಾರಾಯಣ ಗುರು ಮಹಿಳಾ ಘಟಕದ ಜಂಟಿ ಆಶ್ರಯದಲ್ಲಿ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಸಮಾಜ ಸೇವಕಿ ಗೀತಾ ವಾಗ್ಲೆ ಅವರು ಆಟಿ ತಿಂಗಳಲ್ಲಿ ಬಳಸುತ್ತಿದ್ದ ಔಷಧೀಯ ಸಸ್ಯಗಳು, ವಿವಿಧ ಸೊಪ್ಪುಗಳು ಹಾಗೂ ಅವುಗಳ ಔಷಧೀಯ ಮಹತ್ವವನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ಚಂದ್ರಶೇಖರ್ ಸಾಲಿಯಾನ್ ಅವರು ಗ್ಯಾಸ್ ಲೈಟ್, ಚೆನ್ನಮನೆ, ಅಕ್ಕಿಮುಡಿ, ನೇಗಿಲು ಸೇರಿದಂತೆ ಹಿಂದಿನ ಕಾಲದಲ್ಲಿ ಬಳಕೆಯಲ್ಲಿದ್ದ ವಿವಿಧ ಗೃಹೋಪಯೋಗಿ ವಸ್ತುಗಳನ್ನು ಪರಿಚಯಿಸಿ, ಆ ಕಾಲದ ಜೀವನಶೈಲಿ ಮತ್ತು ಸಂಪ್ರದಾಯಗಳ ಕುರಿತು ಮಕ್ಕಳಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ನಾರಾಯಣ ಗುರು ಮಹಿಳಾ ಘಟಕದ ಸದಸ್ಯೆಯರು ಸುಮಾರು 30 ಬಗೆಯ ಆಟಿ ತಿಂಗಳ ಸಾಂಪ್ರದಾಯಿಕ ಆಹಾರಗಳನ್ನು ತಯಾರಿಸಿ ಭಾಗವಹಿಸಿದವರಿಗೆ ಉಣಬಡಿಸಿದರು.

ಆಟಿ ತಿಂಗಳ ಸಂಪ್ರದಾಯವನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ಅದರ ಹಿಂದಿನ ಜೀವನ ಮೌಲ್ಯಗಳು ಹಾಗೂ ಆರೋಗ್ಯಕರ ಆಹಾರ ಪದ್ಧತಿಯನ್ನು ಹೊಸ ತಲೆಮಾರಿಗೆ ಪರಿಚಯಿಸುವ ಪ್ರಯತ್ನವಾಗಿ ಕಾರ್ಯಕ್ರಮ ಗಮನ ಸೆಳೆಯಿತು. ಮಕ್ಕಳು ಉತ್ಸಾಹದಿಂದ ಭಾಗವಹಿಸಿ ಕರಾವಳಿಯ ಸಂಸ್ಕೃತಿ ಮತ್ತು ಪರಂಪರೆಯ ಕುರಿತು ಅರಿವು ಪಡೆದುಕೊಂಡರು.