ಸರ್ಪವನ್ನು ಕಂಡಾಗ ಕೆಲ ಹಿರಿಯರು “ಆಸ್ತಿಕ… ಆಸ್ತಿಕ…” ವೆಂದು ಪಠಿಸುವರು. ಯಾರು ಈ ಆಸ್ತಿಕ..? ಅದ್ಯಾಕೆ “ಆಸ್ತಿಕ” ಎಂದು ಸಂಬೋಧಿಸುವರು..? ಸರ್ಪಗಳಿಗೂ ಅವನಿಗೂ ಏನು ಸಂಬಂಧವಿದೆ..? ಜನಮೇಜಯನು ಯಾಗ ನಡೆಸಿ ಸರ್ಪಸಂತತಿಯನ್ನೇ ನಾಶ ಮಾಡಲು ಹೊರಟಿದ್ದೇಕೆ….? ಈ ಎಲ್ಲಾ ವಿಚಾರಗಳನ್ನು ತಿಳಿಯಲು ಈ ಸಣ್ಣ ಕಥೆಯನ್ನು ಓದಬೇಕು.
ಕೌಶಿಕಿ ನದಿಯ ಸುಂದರ ಪರಿಸರದಲ್ಲಿ ಋಷಿ ಶಮಿಕರ ಆಶ್ರಮವಿತ್ತು. ಅಲ್ಲಿ ಸಾಕಷ್ಟು ಋಷಿಕುಮಾರರು ವೇದಾಧ್ಯಯನದಲ್ಲಿ ನಿರತರಾಗಿದ್ದರು. ಅವರಲ್ಲಿ ಋಷಿ ಶಮಿಕರ ಪುತ್ರನಾದ ಶೃಂಗಿಯೂ ಒಬ್ಬನಾಗಿದ್ದನು. ಒಂದು ದಿನ ಋಷಿಕುಮಾರರು ಹೋಮ ಹವನಾದಿಗಳಿಗೆ ಬೇಕಾಗುವ ಸಾಮಗ್ರಿಗಳನ್ನು ಒಟ್ಟು ಮಾಡಲು ಹೋಗಿದ್ದರು. ಋಷಿ ಶಮಿಕರು ಆ ಸಮಯದಲ್ಲಿ ಬ್ರಹ್ಮಧಾನ್ಯದಲ್ಲಿ ನಿರತರಾಗಿದ್ದರು. ಈ ಸ್ಥಿತಿಯಲ್ಲಿ ಅವರಿಗೆ ಹೊರ ಪ್ರಪಂಚದ ಪರಿವೆಯೇ ಇರುತ್ತಿರಲಿಲ್ಲ.
ಇದೇ ಸಮಯದಲ್ಲಿ ಕುರುಕ್ಷೇತ್ರ ಯುದ್ಧ ಮುಗಿದು ಕೆಲವು ವರ್ಷಗಳ ಕಾಲ ರಾಜ್ಯಾಡಳಿತ ನಡೆಸಿದ ಪಾಂಡವರು ಸಶರೀರ ಸ್ವರ್ಗಾರೋಹಣಕ್ಕೆ ತೆರಳಿದರು. ಅವರ ನಂತರ ಅಭಿಮನ್ಯು ಮತ್ತು ರಾಜಕುಮಾರಿ ಉತ್ತರೆಯರ ಮಗನಾದ ಪರೀಕ್ಷಿತನು ಹಸ್ತಿನಾವತಿಯ ಅರಸನಾದನು. ಅಭಿಮನ್ಯುವನ್ನು ಕೌರವರು ಮೋಸದಿಂದ ನಿರ್ದಯವಾಗಿ ಕುರುಕ್ಷೇತ್ರ ಯುದ್ಧದಲ್ಲಿ ಕೊಂದಾಗ ಉತ್ತರೆ ಇನ್ನೂ ಗರ್ಭಿಣಿ. ಇದರ ನಂತರ ಅಶ್ವತ್ಥಾಮನು ಗರ್ಭದಲ್ಲಿರುವ ಮಗುವನ್ನು ಕೊಲ್ಲುವ ಸಲುವಾಗಿ ಬ್ರಹ್ಮಾಸ್ತ್ರವನ್ನು ಉಪಯೋಗಿಸಿದಾಗ ಅಭಿಮನ್ಯುವಿನ ಸೋದರ ಮಾವನಾದ ಕೃಷ್ಣನು ಮಗುವನ್ನು ಉಳಿಸುತ್ತಾನೆ. ಈತನು ಕೃಪಾಚಾರ್ಯರ ನೇತೃತ್ವದಲ್ಲಿ ಮೂರು ಅಶ್ವಮೇಧ ಯಜ್ಞಗಳನ್ನು ಪೂರೈಸುತ್ತಾನೆ. ಈತನು ಉತ್ತರನ ಮಗಳಾದ ಭದ್ರವತಿ ಅಥವಾ ಇರಾವತಿ ಎಂಬ ತರುಣಿಯನ್ನು ಮದುವೆಯಾಗಿ ಜನಮೇಜಯ, ಶ್ರುತಸೇನ, ಉಗ್ರಸೇನ ಮತ್ತು ಭೀಮಸೇನ ಎಂಬ ನಾಲ್ವರು ಪುತ್ರರನ್ನು ಪಡೆದನು.
ಈ ಪರೀಕ್ಷಿತ ರಾಜನು ಒಮ್ಮೆ ಅರಣ್ಯಕ್ಕೆ ಬೇಟೆಗೆಂದು ತೆರಳಿದನು. ತುಸು ಸಮಯ ಕಳೆದ ನಂತರ ಬಿಸಿಲಿನ ಬೇಗೆ ಮತ್ತು ಬೇಟೆಯಾಡಿದ ಆಯಾಸದಿಂದ ಆಶ್ರಯವನ್ನು ಹುಡುಕುತ್ತಾ, ಸಮೀಪದಲ್ಲಿರುವ ಋಷಿ ಶಮಿಕರ ಆಶ್ರಮಕ್ಕೆ ಬರುತ್ತಾರೆ. ಋಷಿ ಶಮಿಕರು ಆಳವಾದ ಧಾನ್ಯದಲ್ಲಿದ್ದು, ಮಹಾರಾಜರು ಆಶ್ರಮ ಪ್ರವೇಶಿಸಿದ್ದು, ನಮಸ್ಕಾರವನ್ನು ಮಾಡಿದ್ದು ಗಮನಕ್ಕೆ ಬರುವುದೇ ಇಲ್ಲ. ಮಹಾರಾಜರು ಪುನಃ “ನಮಗೆ ಬಹಳ ಬಾಯಾರಿಕೆಯಾಗಿದೆ, ನೀರು ಬೇಕು’ ಎಂದು ಕೇಳುತ್ತಾರೆ. ಅದರೆ, ಬ್ರಹ್ಮನ ಸ್ಮರಣೆಯಲ್ಲಿ ಮಗ್ನರಾಗಿದ್ದ ಋಷಿ ಶಮಿಕರಿಗೆ ರಾಜನ ಮಾತುಗಳು ಮೂರ್ನಾಲ್ಕು ಸಲ ಕೂಗಿದರೂ ಕೇಳಿಸುವುದಿಲ್ಲ. ರಾಜನಾದ ಪರೀಕ್ಷಿತರಿಗೆ ಸಿಟ್ಟು ಬಂದು ಅಂಗಳದಲ್ಲಿ ಸತ್ತು ಬಿದ್ದಿರುವ ಹಾವನ್ನು ಬಾಣದ ತುದಿಯಲ್ಲಿ ಎತ್ತಿ ಅದನ್ನು ಋಷಿ ಶಮಿಕರ ಕೊರಳಿಗೆ ಹಾಕುತ್ತಾರೆ. ಆಶ್ರಮಕ್ಕೆ ಮರಳಿ ಬಂದ ಋಷಿಕುಮಾರರು, ರಾಜಾ ಪರೀಕ್ಷಿತನು ಹೊರಡುತ್ತಿರುವುದನ್ನು ನೋಡುತ್ತಾರೆ ಮತ್ತು ಶೃಂಗಿಯನ್ನು ಕರೆದುಕೊಂಡು ಬರುತ್ತಾರೆ.
ಶೃಂಗಿಯು ಪರೀಕ್ಷಿತರನ್ನು ಆಶ್ರಮಕ್ಕೆ ಬರಮಾಡಿಕೊಳ್ಳಲು ಧಾವಿಸಿ ಬರುತ್ತಾನೆ. ಆದರೂ ಕೋಪಗೊಂಡ ಮಹಾರಾಜರು ಹಿಂದಿರುಗದೆ ಹೋಗುತ್ತಾರೆ. ಆಶ್ರಮವನ್ನು ಪ್ರವೇಶಿಸಿದ ಶೃಂಗಿಯು ಋಷಿ ಶಮಿಕರು ಧ್ಯಾನ ಮಗ್ನರಾಗಿರುವುದನ್ನೂ, ಅವರ ಕೊರಳಲ್ಲಿರುವ ಸತ್ತ ಹಾವು ಮತ್ತು ಅದರ ಸುತ್ತ ಒಡಾಡುವ ಇರುವೆಗಳನ್ನೂ ನೋಡಿ ಉದ್ರಿಕ್ತನಾಗುತ್ತಾನೆ. ಕೋಪಗೊಂಡು ಒಂದು ಕೋಲಿನಿಂದ ಹಾವನ್ನು ತೆಗೆದು, “ಯಾರು ಈ ಪಾಪವನ್ನು ಮಾಡಿದ್ದಾರೋ ಅವರು ಇಂದಿನಿಂದ ಏಳು ದಿನಗಳ ಒಳಗೆ ಸರ್ಪರಾಜನಾದ ತಕ್ಷಕನಿಂದ ಮರಣ ಹೊಂದಲಿ’ ಎಂದು ಶಾಪ ಕೊಟ್ಟು, ಕಮಂಡಲದಿಂದ ನೀರನ್ನು ಭೂಮಿಗೆ ಚಿಮಿಕಿಸುತ್ತಾನೆ.
ಅಷ್ಟರಲ್ಲಿ ಎಚ್ಚರಗೊಂಡ ಋಷಿಗಳು ಮಗನು ಕೋಪದಿಂದ ನಡುಗುತ್ತಿರುವುದು ಮತ್ತು ಶಿಷ್ಯರ ಮೊಗದಲ್ಲಿರುವ ಭೀತಿಯನ್ನು ನೋಡಿ ಏನಾಯಿತು ಎಂದು ವಿಚಾರಿಸುತ್ತಾರೆ. ಆಗ ಶೃಂಗಿಯು ನಡೆದ ವಿಷಯವನ್ನು ತಿಳಿಸಿದಾಗ “ಮನುಷ್ಯನು ಸಣ್ಣ ವಿಷಯಕ್ಕೆಲ್ಲ ಕೋಪಿಸಿಕೊಳ್ಳಬಾರದು. ಇಂಥ ವಿಷಯಕ್ಕೆಲ್ಲ ಶಾಪ ಹಾಕಬಾರದು’ ಎಂದು ಶೃಂಗಿಗೆ ಬುದ್ಧಿವಾದ ಹೇಳುತ್ತಾರೆ. “ಮಹಾರಾಜ ಪರೀಕ್ಷಿತರು ವಿಷ್ಣುವಿನ ಅವತಾರವಾಗಿದ್ದು, ರಾಜನಲ್ಲಿ ಕ್ಷಮೆಯನ್ನು ಯಾಚಿಸಿ ಅವರಿಗೆ ಶಾಪದಿಂದ ವಿಮುಕ್ತನಾಗಿ ಮಾಡು’ ಎಂದು ಹೇಳುತ್ತಾರೆ.
ಮುನಿಗಳ ಶಾಪ ತಿಳಿದು ಪರೀಕ್ಷಿತ ಮಹಾರಾಜನು ಭೀತಿಯಿಂದ ತತ್ತರಿಸಿಹೋದನು. ತನ್ನ ಹತ್ತಿರ ಯಾರೂ ಸುಳಿಯದಂತೆ ರಕ್ಷಣೆಯ ಕೋಟೆ ಕಟ್ಟಿಕೊಂಡು ಶಾಪವನ್ನು ನಿಷ್ಕ್ರಿಯಗೊಳಿಸಲು ಪರೀಕ್ಷಿತ ಮಹಾರಾಜನು ನಿರ್ಧರಿಸಿದನು. ಮನುಷ್ಯರು ಅಥವಾ ಜೀವಜಂತುಗಳು ಪ್ರವೇಶಿಸಲಾಗದಂತಹ ಉಪ್ಪರಿಗೆಯ ಅಭೇದ್ಯ ಅರಮನೆಯೊಂದನ್ನು ಕಟ್ಟಿಸಿದನು. ಅರಮನೆಯನ್ನು ಎಂತಹ ಕೌಶಲದಿಂದ ನಿರ್ಮಿಸಲಾಗಿತ್ತೆಂದರೆ, ಅದರೊಳಕ್ಕೆ ಪ್ರವೇಶಿಸಿದ ಗಾಳಿಯೂ ಹೊರಹೋಗುವಂತಿರಲಿಲ್ಲ. ದೊರೆಗೆ ತಿಳಿಸದೆ ಯಾರೂ ಅವನನ್ನು ಕಾಣುವಂತಿರಲಿಲ್ಲ. ತಾನಿನ್ನು ಹಾವಿನ ಕಡಿತದಿಂದ ಮುಕ್ತ ಎಂದು ದೊರೆ ಭಾವಿಸಿದನು. ಆದರೆ, ತಕ್ಷಕನೆಂಬ ಸರ್ಪನು ಸಾಧುಸಂತರ ರೂಪದಲ್ಲಿ ಕೆಲವು ಹಾವುಗಳನ್ನು ಪರೀಕ್ಷಿತನ ಬಳಿಗೆ ಕಳುಹಿಸಿದನು. ದೊರೆಗೆ ಗೌರವ ಸಮರ್ಪಣೆಯಾಗಿ ಹೂವು-ಹಣ್ಣುಗಳನ್ನೂ ಕಳುಹಿಸಿದ್ದನು. ತಕ್ಷಕನು ಈ ಹಣ್ಣುಗಳಲ್ಲಿ ಒಂದರಲ್ಲಿ ಅವಿತುಕೊಂಡಿದ್ದನು. ಮಹಾರಾಜನು ಹಣ್ಣೊಂದನ್ನು ತಿನ್ನುತ್ತಿದ್ದಾಗ ತಕ್ಷಕನು ಹೊರಬಂದು ಕಾಳಿಂಗ ಸರ್ಪದ ರೂಪ ಧರಿಸಿ ದೊರೆಯ ಮೈಗೆ ಸುತ್ತಿಕೊಂಡು ಅವನನ್ನು ಕಚ್ಚಿದನು. ದೊರೆ ಪರೀಕ್ಷಿತ ಮರಣ ಹೊಂದಿದನು.
ಪರಿಕ್ಷೀತನ ಮರಣದ ನಂತರ ಆತನ ಪುತ್ರ ಜನಮೇಜಯನಿಗೆ ಪಟ್ಟಾಭಿಷೇಕ ಮಾಡಲಾಯಿತು. ಮಹಾರಾಜ ಪರೀಕ್ಷಿತನ ಪ್ರಸಿದ್ಧ ಪುತ್ರ ಮತ್ತು ರಾಜರ್ಷಿ ದೊರೆಗಳಲ್ಲಿ ಒಬ್ಬನಾಗಿದ್ದನು. ಆತನ ತಾಯಿಯ ಹೆಸರು ಇರಾವತಿ ಅಥವಾ ಮಾದ್ರವತಿ. ಜನಮೇಜಯ ಮಹಾರಾಜನಿಗೆ ಜ್ಞಾತನೀಕ ಮತ್ತು ಶಂಕುಕರ್ಣ ಎಂಬ ಇಬ್ಬರು ಮಕ್ಕಳು. ಈತನು ಕುರುಕ್ಷೇತ್ರ ಪುಣ್ಯಸ್ಥಳದಲ್ಲಿ ಅನೇಕ ಯಜ್ಞಗಳನ್ನು ಮಾಡಿದನು. ತನ್ನ ತಂದೆಯನ್ನು ಉಳಿಸಿಕೊಳ್ಳಲು ರಹಸ್ಯ ಭವನ ನಿರ್ಮಿಸಿ ಎಷ್ಟೆಲ್ಲ ಕಷ್ಟಪಟ್ಟಿದ್ದರೂ ತಕ್ಷಕ ಅದನ್ನು ಪ್ರವೇಶಿಸಿ ಕಚ್ಚಿ ಸಾಯಿಸಿದ್ದು ಅವನಿಗೆ ಮರೆಯಲಾಗಿರಲಿಲ್ಲ. ಅದಕ್ಕೆ ಸರಿಯಾಗಿ, ಸರ್ಪಗಳ ಮೇಲೆ ದ್ವೇಷವಿದ್ದ ಉತ್ಥಂಕನು ಜನಮೇಜಯನನ್ನು ಭೇಟಿಯಾಗಿ ಅವನನ್ನು ಸೇಡಿಗಾಗಿ ಪ್ರಚೋದಿಸಿದನು. “ಸರ್ಪಯಾಗ ನಡೆಸಿ ನಿನ್ನ ತಂದೆಯ ಸಾವಿಗೆ ಕಾರಣವಾದ ಸರ್ಪಕುಲವನ್ನೇ ನಾಶ ಮಾಡು” ಎಂದು ಹುರಿದುಂಬಿಸಿದನು.
ಅದರಂತೆ ಜನಮೇಜಯನು ಆಸ್ಥಾನದ ಪುರೋಹಿತರನ್ನು ಕರೆಸಿ ಸರ್ಪಯಾಗಕ್ಕೆ ದಿನ ನಿಶ್ಚಯಿಸಿದನು. ಋತ್ವಿಜರನ್ನು, ಬ್ರಾಹ್ಮಣ ಶ್ರೇಷ್ಠರನ್ನೂ ಯಾಜ್ಞಿಕರನ್ನು ಕರೆಯಿಸಿ ಅದಕ್ಕೆ ಬೇಕಾದ ಏರ್ಪಾಡುಗಳನ್ನು ಮಾಡಿಕೊಳ್ಳಲು ಸೂಚಿಸಿದನು. ಸರ್ಪ ಯಾಗವು ಶುರುವಾಯಿತು. ಋತ್ವಿಜರು ಒಂದೊಂದೇ ಸರ್ಪದ ಹೆಸರು ಹೇಳಿ ಆವಾಹನೆ ಮಾಡಿ, ಅದನ್ನು ಅಗ್ನಿಯ ಬಳಿಗೆ ಆಕರ್ಷಿಸಿ ‘ಸ್ವಾಹಾ’ ಅನ್ನುತ್ತಿದ್ದರು. ಕೂಡಲೇ ಸರ್ಪವು ಪ್ರಜ್ವಲಿಸಿ ಉರಿಯುತಿದ್ದ ಯಾಗ ಕುಂಡದೊಳಗೆ ಬಿದ್ದು ಒದ್ದಾಡಿ ಬೆಂದು ಹೋಗುತ್ತಿದ್ದವು. ಎಲ್ಲಾ ಲೋಕಗಳ, ಎಲ್ಲ ಬಗೆಯ ಹಾವುಗಳು ಸರಸರನೆ ಬಂದು ಅಗ್ನಿಕುಂಡದೊಳಗೆ ಬೀಳುವುದನ್ನು ನೋಡಿದರೆ ಎಂಥವರು ತಲ್ಲಣಿಸಬೇಕು..! ಆದರೆ ಜನಮೇಜಯನು ತನ್ನ ತಂದೆಯ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಬದ್ಧನಾಗಿದ್ದನು. ಅವನ ಮನಸ್ಸು ಬದಲಾಗಲಿಲ್ಲ. ಜೊತೆಗೆ ಸರ್ಪಗಳು ಹೀಗೆ ಕುಂಡದೊಳಗೆ ಸುಟ್ಟು ಸಾಯಬೇಕೆನ್ನುವುದು ನಿಯತಿಯ ಇಚ್ಛೆಯಾಗಿತ್ತು. ಜನಮೇಜಯನು ನಿಮಿತ್ತ ಮಾತ್ರನಾಗಿದ್ದನು. ಸರ್ಪಕುಲದ ತಾಯಿ ಕದ್ರು ನೀಡಿದ ಶಾಪವೇ ಸರ್ಪಯಾಗಕ್ಕೆ ವೇದಿಕೆ ಒದಗಿಸಿತ್ತು.
ಜನಮೇಜಯನು ಯಜ್ಞಕ್ಕೆ ತನ್ನ ಬಾಂಧವರು ಬಲಿಯಾಗುತ್ತಿರುವುದನ್ನು ಕಂಡು ತಕ್ಷಕನು ತಲ್ಲಣಿಸಿಹೋದನು ಸಹಾಯಕ್ಕಾಗಿ ದೇವೇಂದ್ರನ ಬಳಿ ಧಾವಿಸಿದನು. ತಕ್ಷಕನಿಗೆ ಅಭಯ ನೀಡಿದ ದೇವೇಂದ್ರ, “ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡು ನಿಲ್ಲು, ಯಾಗ ಮಂತ್ರ ನಿನ್ನನ್ನು ಸೆಳೆಯಲಾರದು” ಎಂದು ಸೂಚಿಸಿದನು. ದೇವೆಂದ್ರನ ಅಣತಿಯಂತೆ ತಕ್ಷಕನು ಇಂದ್ರನನ್ನು ಗಟ್ಟಿಯಾಗಿ ಹಿಡಿದು ನಿಂತನು. ಆದರೆ, ಯಾಗ ಮಂತ್ರದ ಆಕರ್ಷಣೆಯ ಬಲದೆದುರು ತಕ್ಷಕನ ಆಟ ನಡೆಯಲಿಲ್ಲ. ಮಂತ್ರವು ದೇವೇಂದ್ರನನ್ನೂ ಸೇರಿಸಿಕೊಂಡೇ ತಕ್ಷಕನನ್ನು ಯಾಗ ಕುಂಡದೆಡೆ ಸೆಳೆಯಲಾರಂಭಿಸಿತು.
ಇದನ್ನು ಕಂಡು ಭೀತರಾದ ವಾಸುಕಿ ಮೊದಲಾದ ಅಳಿದುಳಿದ ಸರ್ಪಗಳು ತಮ್ಮ ಕುಲಕ್ಕೆ ಹೊರಗಿನವನಾದ, ಸೋದರಳಿಯ ಆಸ್ತಿಕ ಋಷಿಯ ಬಳಿ ಹೋದರು. “ನಮ್ಮ ತಾಯಿಯ ಶಾಪದ ಪರಿಣಾಮವಾಗಿ ನಾವೆಲ್ಲರೂ ಯಜ್ಞ್ಯಕುಂಡದಲ್ಲಿ ಬಿದ್ದು ಪ್ರಾಣ ಕಳೆದುಕೊಳ್ಳುವ ಸ್ಥಿತಿ ಬಂದಿದೆ. ನಿನಗೊಬ್ಬನಿಗೆ ಮಾತ್ರ ನಮ್ಮನ್ನು ಈ ದುರವಸ್ಥೆಯಿಂದ ಪಾರುಮಾಡಲು ಸಾಧ್ಯ. ದಯವಿಟ್ಟು ನಮಗೆ ಸಹಾಯಮಾಡು” ಎಂದು ಕೇಳಿಕೊಂಡರು. ಆಸ್ತಿಕನು ಸಂತೋಷದಿಂದಲೇ ಸಮ್ಮತಿಸಿ, “ಹೇಳಿ, ನಾನೇನು ಮಾಡಿದರೆ ಸರ್ಪ ಸಂತತಿ ಉಳಿಯುತ್ತದೆ..?” ಎಂದು ಪ್ರಶ್ನಿಸಿದನು.
ಆಗ ವಾಸುಕಿಯು “ಮಗೂ, ಜನಮೇಜಯನು ಸರ್ಪಯಾಗವನ್ನು ಮಾಡುತಿದ್ದಾನೆ. ಬ್ರಹ್ಮಚಾರಿಯಾದ ನೀನು ಅವನ ಬಳಿಗೆ ಹೋಗಿ ಆ ಯಜ್ಞ್ಯವನ್ನು ನಿಲ್ಲಿಸುವಂತೆ ಮಾಡು” ಎಂದು ಸಲಹೆ ನೀಡಿದ. ಆಸ್ತಿಕನು ತಡಮಾಡದೆ ಅಲ್ಲಿಂದ ಹೊರಟು ಯಾಗಶಾಲೆಯನ್ನು ತಲುಪಿದನು. ಜನಮೇಜಯನ ಮುಂದೆ ಹೋಗಿ ನಿಂತನು. ಇನ್ನೇನು ಮಂತ್ರಾಕರ್ಷಣೆಗೆ ಸಿಲುಕಿ ದೇವೇಂದ್ರ ಸಹಿತನಾಗಿ ತಕ್ಷಕ ಕುಂಡದಲ್ಲಿ ಬೀಳುವುದರಲ್ಲಿದ್ದನು. ಆದರೆ ಅದಕ್ಕೆ ಅಡ್ಡಿಯಾಗಿ ನಿಂತ ಆಸ್ತಿಕ, “ಬ್ರಹ್ಮಚಾರಿಗೆ ದಕ್ಷಿಣೆ ಕೊಡದೆ ಯಾಗ ಹೇಗೆ ಮುನ್ನಡೆಸುತ್ತೀರಿ..?” ಎಂದು ಜನಮೇಜಯನನ್ನು ಇಕ್ಕಟ್ಟಿಗೆ ಸಿಲುಕಿಸಿದನು. ಜನಮೇಜಯ, “ಬ್ರಹ್ಮಚಾರಿ..! ನಿನಗೇನು ಬೇಕು ಕೇಳು. ಕೊಡುತ್ತೇನೆ” ಎಂದು ವಾಗ್ದಾನ ನೀಡಿಬಿಟ್ಟನು. ಇದಕ್ಕಾಗಿಯೇ ಕಾದಿದ್ದ ಆಸ್ತಿಕನು “ಈಗಿಂದೀಗಲೇ ಸರ್ಪಯಾಗವನ್ನು ನಿಲ್ಲಿಸಬೇಕು. ಇದೇ ನೀವು ನನಗೆ ಕೊಡುವ ದಕ್ಷಿಣೆ!!” ಅಂದುಬಿಟ್ಟ.
ಮಾತಿಗೆ ಬದ್ಧನಾದ ಜನಮೇಜಯನಿಗೆ ಬೇರೆ ದಾರಿಯೇ ಉಳಿಯಲಿಲ್ಲ. ತನ್ನ ತಂದೆಯ ಸಾವಿಗೆ ಕಾರಣನಾದ ತಕ್ಷಕ ಕಣ್ಣೆದುರೇ ಇದ್ದರೂ ಏನೂ ಮಾಡುವಂತಿಲ್ಲ. ಆದರೂ ಆಸ್ತಿಕನಿಗೆ ಕೊಟ್ಟ ಮಾತಿನಂತೆ ಯಾಗವನ್ನು ನಿಲ್ಲಿಸಿದನು. ದೇವೇಂದ್ರ ಅವನನ್ನು ಸಮಾಧಾನ ಪಡಿಸಿ, ಶೃಂಗಿಯ ಶಾಪವೇ ಕಾರಣವಾಗಿ ನಿನ್ನ ತಂದೆಯ ಮೃತ್ಯುವಾಯಿತು. ಇದರಲ್ಲಿ ತಕ್ಷಕನ ಪಾತ್ರವೇನೂ ಇಲ್ಲ. ಅವನು ನಿಮಿತ್ತ ಮಾತ್ರ ಎಂದು ಅನುನಯಿಸಿದ. ಇದರಿಂದ ಜನಮೇಜಯನೂ ದ್ವೇಷ ಕಳೆದು ಸಮಾಧಾನ ಹೊಂದಿದನು.
ಆದರೆ, ಜನಮೇಜಯನು ಯಜ್ಞವನ್ನು ನಿಲ್ಲಿಸಿದರೂ ಆತ ಸಂಬಂಧಪಟ್ಟ ಎಲ್ಲರಿಗೂ ಸೂಕ್ತ ಬಹುಮಾನ ನೀಡಿ ತೃಪ್ತಿಪಡಿಸಿದನು. ಆ ಸಮಾರಂಭದಲ್ಲಿ ಮಹಾಮುನಿ ವೇದವ್ಯಾಸರೂ ಹಾಜರಿದ್ದು, ಸ್ವತಃ ಅವರೇ ರಾಜನ ಮುಂದೆ ಕುರುಕ್ಷೇತ್ರ ಯುದ್ಧದ ಇತಿಹಾಸವನ್ನು ನಿರೂಪಿಸಿದರು ಮತ್ತು ತಕ್ಷಕನನ್ನು ಕೊಲ್ಲುವುದು ಸಾಧ್ಯವಿಲ್ಲ ಏಕೆಂದರೆ ಅವನು ಅಮೃತ ಪಾನವನ್ನು ಮಾಡಿದ್ದಾನೆ ಎಂದು ಹೇಳಿದರು. ಅನಂತರ ವೇದವ್ಯಾಸರ ಆದೇಶದಂತೆ ಅವರ ಶಿಷ್ಯ ವೈಶಂಪಾಯನ ಮಹಾಭಾರತದ ವಸ್ತುವಿಷಯವನ್ನು ರಾಜನ ಮುಂದೆ ನಿರೂಪಿಸಿದನು. ತನ್ನ ಪ್ರಸಿದ್ಧ ತಂದೆಯ ಅಕಾಲಿಕ ಮರಣದಿಂದ ಆತ ಬಹಳ ನೊಂದು ಮತ್ತೆ ಆತನನ್ನು ನೋಡಬಯಸಿ, ತನ್ನ ಅಪೇಕ್ಷೆಯನ್ನು ಮಹಾಮುನಿ ವೇದವ್ಯಾಸರ ಮುಂದೆ ವ್ಯಕ್ತಪಡಿಸಿದನು. ವೇದವ್ಯಾಸರೂ ಸಹ ಆತನ ಅಪೇಕ್ಷೆಯನ್ನು ಈಡೇರಿಸಿದರು. ಅವನ ತಂದೆ ಪರೀಕ್ಷಿತನು ಅವನ ಮುಂದೆ ಬಂದನು. ಜನಮೇಜಯ ತನ್ನ ತಂದೆ ಮತ್ತು ವೇದವ್ಯಾಸರಿಬ್ಬರನ್ನೂ ಬಹಳ ಗೌರವ ಮತ್ತು ವೈಭವದಿಂದ ಪೂಜಿಸಿದರು. ಸಂಪೂರ್ಣ ತೃಪ್ತನಾದ ಆತನು ಯಾಗಕ್ಕೆ ಬಂದಿದ್ದ ಬ್ರಾಹ್ಮಣರಿಗೆ ಅತ್ಯಂತ ಉದಾರವಾಗಿ ದಾನ ನೀಡಿದನು.
ಇದೇ ಸಂದರ್ಭದಲ್ಲಿ ತಮ್ಮ ಸೋದರಳಿಯನ ಸಹಾಯಕ್ಕೆ ಕೃತಜ್ಞರಾದ ಸರ್ಪಗಳು “ನಿನ್ನನ್ನು ಯಾರು ಸ್ಮರಿಸುತ್ತಾರೋ ಅವರನ್ನು ನಾವು ಬಾಧಿಸುವುದಿಲ್ಲ” ಎಂದು ವಾಗ್ದಾನ ನೀಡಿದವು. ಇಂದಿಗೂ ಕೆಲವು ಕಡೆಗಳಲ್ಲಿ ಬಹುತೇಖ ವೃದ್ಧರು ಹಾವನ್ನು ಕಂಡಕೂಡಲೇ “ಆಸ್ತಿಕ… ಆಸ್ತಿಕ…” ಎಂದು ಪಠಿಸುವುದು ಇದೇ ಕಾರಣಕ್ಕೆ. ಆಸ್ತಿಕನನ್ನು ಸ್ಮರಿಸಿದರೆ ಸರ್ಪ ತೊಂದರೆ ಕೊಡದೆ ಹೊರಟು ಹೋಗುತ್ತದೆ ಅನ್ನುವ ನಂಬಿಕೆಗೆ ಈ ಕಥೆಯೇ ಹಿನ್ನೆಲೆ.
ಕೃಪೆ – ವಾಟ್ಸ್ ಅಪ್












