ಯಕ್ಷರಂಗದಲ್ಲಿ ಹುಮ್ಮಸ್ಸಿನಿಂದ ಗೆಜ್ಜೆ ಕಟ್ಟಿ ಕುಣಿಯುತ್ತಿರುವ ಮೂಡಬಿದ್ರೆಯ ಯುವ ಪ್ರತಿಭೆ “ಆದರ್ಶ್”

ಉಡುಪಿXPRESS:ಯಕ್ಷ ಸಿರಿ

ಯಕ್ಷಗಾನ ಕ್ಷೇತ್ರ ಹಲವಾರು ಹೊಸ ಯುವ ಪ್ರತಿಭೆಗಳನ್ನು ಆಕರ್ಷಿಸುತ್ತಿದೆ. ಕರಾವಳಿಯ ಜನಪ್ರಿಯ ತೆಂಕು ತಿಟ್ಟಿನಲ್ಲಿ ನವ ಪ್ರತಿಭೆಗಳು ಭರವಸೆ ಮೂಡಿಸುತ್ತಿದ್ದಾರೆ. ಅಂತಹ ಭರವಸೆಯ ಪ್ರತಿಭೆಗಳಲ್ಲಿ ಮೂಡಬಿದ್ರೆಯ ಆದರ್ಶ ವಿ. ಆಚಾರ್ಯ ಕೂಡ ಯಕ್ಷರಂಗದಲ್ಲಿ ದಿಟ್ಟ ಹೆಜ್ಜೆ ಇಡುತ್ತಿರುವ ಯುವ ಪ್ರತಿಭೆ.

  

ಮಂಗಳೂರಿನಲ್ಲಿ ಪ್ರಸ್ತುತ ಇಂಟಿರಿಯರ್ ಪದವಿ ಓದುತ್ತಿರುವ ಆದರ್ಶ್ ಗೆ ಬಾಲ್ಯದಿಂದಲೂ ಯಕ್ಷಗಾನ ಕುರಿತು ಅಪಾರ ಆಸಕ್ತಿ ಇತ್ತು. ಮನೆಯಲ್ಲಿಯೂ ಯಕ್ಷಗಾನದ ಕುರಿತ ಚರ್ಚೆ ಮತ್ತು ವಾತಾವರಣವಿರುವುದರಿಂದ ಇವರಲ್ಲಿಯೂ ಕ್ಷೇತ್ರದ ಕುರಿತ ಆಸಕ್ತಿ ಚಿಗುರೊಡೆಯತೊಡಗಿತು.

ಕರಾವಳಿಯ ಪ್ರತಿಷ್ಠಿತ ಮೇಳಗಳಾದ ಹಿರಿಯಡ್ಕ ಮೇಳ, ಸಹಿಹಿತ್ಲು, ಸುಂಕದಕಟ್ಟೆ, ಬಪ್ಪನಾಡು ಮೇಳ, ಹನುಮಗಿರಿ ಮೇಳಗಳಲ್ಲಿ ಹವ್ಯಾಸಿ ಕಲಾವಿದರಾಗಿ ಕೋಟಿ ಚೆನ್ನಯ್ಯನ ಬಾಲ್ಯ ವೇಷ, ಮಹಿಷಾಸುರ, ಅರ್ಜುನ, ಅಭಿಮನ್ಯು ಮೊದಲಾದ ವೇಷಗಳನ್ನು ಮಾಡಿದ ಆದರ್ಶ್ಅವರಿಗೆ ಅಭಿಮನ್ಯುವಿನಂತಹ ಭಾವನಾತ್ಮಕ ಪಾತ್ರಗಳೇ ಇಷ್ಟವಂತೆ. ಜಾಸ್ತಿ ಭಾವನೆಗೆ ಅವಕಾಶ ಇರುವ ಈ ಪಾತ್ರದಲ್ಲಿ  ನಮ್ಮನ್ನು ನಾವು ತೊಡಗಿಸಿಕೊಳ್ಳುವಂತಹ ಸಾಧ್ಯತೆ ಹೆಚ್ಚಿದೆ ಅನ್ನುವುದು ಅವರ ಅಭಿಪ್ರಾಯ.

ವೇಣೂರು ಅಶೋಕ್ ಆಚಾರ್ಯ ಇವರ ಮೊದಲ ಗುರುಗಳು. ಬಳಿಕ ಯಕ್ಷಗಾನವನ್ನು ಶ್ರೀ ಯಕ್ಷನಿಧಿ ಮೂಡಬಿದಿರೆ ಇದರ ಗುರುಗಳಾದ ಶಿವಕುಮಾರ್ ಮೂಡಬಿದ್ರೆ ಅವರಲ್ಲಿ ಕಲಿತರು ಆದರ್ಶ್.

ಶಿವಕುಮಾರ್ ಮೂಡಬಿದ್ರೆಯವರು ನನಗೆ ಯಕ್ಷಗಾನದ ಮೂಲ ಪಾಠಗಳನ್ನು ಕಲಿಸಿಕೊಟ್ಟಿದ್ದು,  ನನಗೆ ಸ್ಪೂರ್ತಿ ಕೊಟ್ಟ ಗುರುಗಳು ಎನ್ನುತ್ತಾರೆ ಆದರ್ಶ್.

ಯಕ್ಷಗಾನವನ್ನು ನಿದ್ದೆ ಬಿಟ್ಟು ಬೇಕಾದರೂ ಮಾಡಬಲ್ಲೆ, ಯಾಕೆಂದರೆ ಅದು ಅಷ್ಟು ಆಸಕ್ತಿ ಕೊಡುವ ಕ್ಷೇತ್ರ. ಆದರೆ ನಾನಿನ್ನು ಎಳೆಯ ಕಲಾವಿದ, ಈ ಕ್ಷೇತ್ರದಲ್ಲಿ ಆಸಕ್ತಿಯಿಂದ ಇನ್ನಷ್ಟು ಗೆಜ್ಜೆ ಕಟ್ಟುವ ಆಸೆ ಇದೆ. ಯಕ್ಷಗಾನದಲ್ಲಿಯೂ ತುಂಬಾ ಸಾಧ್ಯತೆಗಳಿವೆ ಎನ್ನುವುದು ಅವರ ಅಭಿಮತ.

ದಿವಾಕರ ರೈ ಸಂಪಾಜೆ, ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ ಇವರು ಆದರ್ಶ್ ಅವರಿಗೆ ಸ್ಪೂರ್ತಿ ಕೊಟ್ಟವರು.ಇಂಟಿರಿಯರ್ ಡಿಸೈನಿಂಗ್ ನಲ್ಲಿ ವೃತ್ತಿ ಜೀವನ ಕಂಡುಕೊಂಡೇ ಯಕ್ಷಗಾನ ಕ್ಷೇತ್ರದಲ್ಲಿ ಮುಂದುವರಿಯುವಾಸೆ ಯುವ ಪ್ರತಿಭೆ ಆದರ್ಶ್ ಆಚಾರ್ಯ ಅವರದ್ದು. ಯಕ್ಷ ರಂಗದಲ್ಲಿ ಹೊಸತೇನೋ ಮಾಡಬೇಕು, ತನ್ನನ್ನು ತೊಡಗಿಸಿಕೊಳ್ಳಬೇಕು ಎನ್ನುವ ಕನಸಿರುವ ಇವರ ಯಕ್ಷ ಕನಸಿಗೆ ನಮ್ಮ ಶುಭ ಹಾರೈಕೆಗಳು.