ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡ ಎಸ್ಕಾರ್ಟ್ ಸೇವೆಯ ಜಾಹೀರಾತು ನಂಬಿ 22 ವರ್ಷದ ಯುವಕನೊಬ್ಬ ₹1,22,700 ಕಳೆದುಕೊಂಡಿದ್ದಾನೆ. ಮತ್ತೊಂದೆಡೆ, ಕೃತಕ ಬುದ್ಧಿಮತ್ತೆ (AI) ಆಧಾರಿತ ಆನ್ಲೈನ್ ಕೋರ್ಸ್ಗೆ ದಾಖಲಾತಿ ನೀಡುವುದಾಗಿ ನಂಬಿಸಿ 57 ವರ್ಷದ ವ್ಯಕ್ತಿಯೊಬ್ಬರಿಂದ ₹1,27,500 ವಸೂಲಿ ಮಾಡಿ ವಂಚಿಸಲಾಗಿದೆ. ಈ ಎರಡೂ ಘಟನೆಗಳಿಗೆ ಸಂಬಂಧಿಸಿದಂತೆ ಮಂಗಳೂರು ಸೆನ್ (CEN) ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ ಎಂದು ಮಂಗಳೂರು ನಗರ ಪೊಲೀಸ್ ಪ್ರಕಟಣೆ ತಿಳಿಸಿದೆ.
ಎಸ್ಕಾರ್ಟ್ ಸೇವೆಯ ಜಾಹೀರಾತು ನಂಬಿ ₹1.22 ಲಕ್ಷ ಕಳೆದುಕೊಂಡ ಯುವಕ
ಇನ್ಸ್ಟಾಗ್ರಾಮ್ನಲ್ಲಿ ‘ROYAL ESCORT GIRLS IN MANGALORE CUSTOMER SERVICE’ ಎಂಬ ಜಾಹೀರಾತು ನೋಡಿ ಸಂಪರ್ಕಿಸಿದ ಯುವಕನಿಗೆ ಸೈಬರ್ ವಂಚಕರು ₹1,22,700 ವಂಚಿಸಿದ್ದಾರೆ.
2026ರ ಅಕ್ಟೋಬರ್ 25ರಂದು ಸಂಜೆ ಮನೆಯಲ್ಲಿದ್ದು ಮೊಬೈಲ್ನಲ್ಲಿ ಇನ್ಸ್ಟಾಗ್ರಾಮ್ ವೀಕ್ಷಿಸುತ್ತಿದ್ದ ಯುವಕನಿಗೆ ಈ ಜಾಹೀರಾತು ಕಾಣಿಸಿಕೊಂಡಿತ್ತು. ಅದನ್ನು ಕ್ಲಿಕ್ ಮಾಡಿದಾಗ ಟೆಲಿಗ್ರಾಂ ಆ್ಯಪ್ ತೆರೆದುಕೊಂಡಿದ್ದು, ಅಲ್ಲಿ @KAVYA_REEDY08 ಎಂಬ ಖಾತೆಯೊಂದಿಗೆ ಚಾಟ್ ಆರಂಭವಾಗಿತ್ತು.
ಬಳಿಕ 7849928552 ಸಂಖ್ಯೆಯಿಂದ ವಾಟ್ಸಾಪ್ ಕರೆ ಮಾಡಿದ ಅಪರಿಚಿತ ವ್ಯಕ್ತಿ, ಆನ್ಲೈನ್ ಮೂಲಕ ಹಣ ಪಾವತಿಸಿ ಸೇವೆಯನ್ನು ಬುಕ್ ಮಾಡುವಂತೆ ತಿಳಿಸಿದ್ದಾನೆ. ಇದನ್ನು ನಂಬಿದ ಯುವಕ ಮೊದಲಿಗೆ ವಂಚಕರು ಕಳುಹಿಸಿದ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಗೂಗಲ್ ಪೇ ಮೂಲಕ ₹1,700 ಪಾವತಿಸಿದ್ದಾನೆ.
ನಂತರ ಸೆಕ್ಯೂರಿಟಿ ಡೆಪಾಸಿಟ್ ಹೆಸರಿನಲ್ಲಿ ₹19,000 ಪಾವತಿಸುವಂತೆ ಸೂಚಿಸಿದ್ದು, ಯುವಕ ಅದನ್ನೂ ವರ್ಗಾಯಿಸಿದ್ದಾನೆ. ಬಳಿಕ ಸರ್ವೀಸ್ ಕನ್ಫರ್ಮೇಷನ್ ಚಾರ್ಜ್, ಪೊಲೀಸ್ ವೆರಿಫಿಕೇಷನ್ ಚಾರ್ಜ್ ಹಾಗೂ ವೈಟಿಂಗ್ ಚಾರ್ಜ್ ಹೆಸರಿನಲ್ಲಿ ಮತ್ತೆ ಮತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಮೊತ್ತವನ್ನೆಲ್ಲ ಬಳಿಕ ಮರುಪಾವತಿಸುವುದಾಗಿ ನಂಬಿಸಿದ್ದಾರೆ.
ವಂಚಕರ ಮಾತು ನಂಬಿದ ಯುವಕ ಅಕ್ಟೋಬರ್ 25ರಿಂದ ನವೆಂಬರ್ 6ರವರೆಗೆ ತನ್ನ ಕೊಟಕ್ ಮಹೀಂದ್ರಾ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಒಟ್ಟು ₹1,22,700 ಹಣವನ್ನು ಆರೋಪಿಗಳು ನೀಡಿದ ಕ್ಯೂಆರ್ ಕೋಡ್ಗಳ ಮೂಲಕ ಯುಪಿಐನಲ್ಲಿ ವರ್ಗಾಯಿಸಿದ್ದಾನೆ. ಬಳಿಕ ತಾನು ವಂಚನೆಗೆ ಒಳಗಾಗಿರುವುದನ್ನು ಅರಿತು ಪೊಲೀಸರಿಗೆ ದೂರು ನೀಡಿದ್ದಾನೆ.
ಎಐ ಕೋರ್ಸ್ ಹೆಸರಿನಲ್ಲಿ ₹1.27 ಲಕ್ಷ ವಂಚನೆ
ಮತ್ತೊಂದು ಪ್ರಕರಣದಲ್ಲಿ ಎಐ ಆಧಾರಿತ ಆನ್ಲೈನ್ ಕೋರ್ಸ್ಗೆ ಪ್ರವೇಶ ನೀಡುವುದಾಗಿ ನಂಬಿಸಿ 57 ವರ್ಷದ ವ್ಯಕ್ತಿಯೊಬ್ಬರಿಂದ ₹1,27,500 ಪಡೆದು ವಂಚಿಸಲಾಗಿದೆ.
ಸುಮಾರು ಆರು ತಿಂಗಳ ಹಿಂದೆ ದೂರುದಾರರು ಗೂಗಲ್ನಲ್ಲಿ ಕೌಶಲ್ಯಾಭಿವೃದ್ಧಿಗಾಗಿ ಎಐ ಕೋರ್ಸ್ಗಳ ಕುರಿತು ಹುಡುಕಾಟ ನಡೆಸಿದ್ದರು. ಈ ವೇಳೆ ‘AI-MEDICAL IMAGING’ ಕೋರ್ಸ್ ಬಗ್ಗೆ ಮಾಹಿತಿ ದೊರೆತಿದ್ದು, ‘NEMI ARADHANA’ ಎಂಬ ಹೆಸರಿನ ಸೇಲ್ಸ್ ಎಕ್ಸಿಕ್ಯೂಟಿವ್ರ ಮೊಬೈಲ್ ಸಂಖ್ಯೆಯೂ ಲಭ್ಯವಾಗಿತ್ತು.
ಆ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿದಾಗ, ಕೋರ್ಸ್ ನೋಂದಣಿಗಾಗಿ ದಾಖಲೆಗಳನ್ನು ಕಳುಹಿಸುವಂತೆ ಸೂಚಿಸಲಾಗಿತ್ತು. ಅದರಂತೆ ದೂರುದಾರರು ತಮ್ಮ ಕೆವೈಸಿ ವಿವರ ಹಾಗೂ ಗುರುತಿನ ಚೀಟಿಯನ್ನು ಕಳುಹಿಸಿ ಹೆಸರು ನೋಂದಾಯಿಸಿಕೊಂಡಿದ್ದರು.
‘AI IMAGING FOR HEALTHCARE PROFESSIONALS NEMI-COURSE – 46’ ಹೆಸರಿನಲ್ಲಿ ಪ್ರತಿದಿನ ಸಂಜೆ 6ರಿಂದ 7.30ರವರೆಗೆ ಆನ್ಲೈನ್ ತರಗತಿಗಳು ನಡೆಯಲಿವೆ ಎಂದು ತಿಳಿಸಲಾಗಿತ್ತು. ಇದಕ್ಕಾಗಿ ಮುಂಗಡ ಶುಲ್ಕ ಪಾವತಿಸುವಂತೆ ಸೂಚಿಸಿದ್ದರು.
ಇದನ್ನು ನಂಬಿದ ದೂರುದಾರರು 2026ರ ಏಪ್ರಿಲ್ 30ರಂದು ₹10,000 ಹಾಗೂ ಮೇ 3ರಂದು ₹1,17,500 ಹೀಗೆ ಎರಡು ಹಂತಗಳಲ್ಲಿ ನೆಫ್ಟ್ ಮೂಲಕ ಹಣ ವರ್ಗಾಯಿಸಿದ್ದಾರೆ. AMSKILLS ECADEMY PRIVATE LTD (NEMI) ಹೆಸರಿನಲ್ಲಿ ಕೋರ್ಸ್ ನಡೆಸುವುದಾಗಿ ನಂಬಿಸಿ ಒಟ್ಟು ₹1,27,500 ಪಡೆದು ವಂಚಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಎರಡೂ ಪ್ರಕರಣಗಳಲ್ಲೂ ಅಪರಿಚಿತ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಹಣ ವಂಚಿಸಿದವರನ್ನು ಪತ್ತೆಹಚ್ಚುವಂತೆ ಸಂತ್ರಸ್ತರು ಮಂಗಳೂರು ಸೆನ್ ಪೊಲೀಸರಿಗೆ ದೂರು ನೀಡಿದ್ದಾರೆ.















