ಅಪರಿಚಿತ ವಾಟ್ಸಪ್‌ ಸಂಖ್ಯೆಯಿಂದ ಬಂತು ಮದುವೆ ಆಹ್ವಾನ ಪತ್ರಿಕೆ, ಓಪನ್ ಮಾಡಿದ್ದೇ ಬ್ಯಾಂಕ್ ಖಾತೆಯಿಂದ ₹9.96 ಲಕ್ಷ ಢಮಾರ್, ನಿಮಗೂ ಹೀಗಾಗಬಹುದು ಎಚ್ಚರ!

ಬೆಂಗಳೂರು: ವಾಟ್ಸಪ್‌ಗೆ ಅಪರಿಚಿತ ಸಂಖ್ಯೆಯಿಂದ ಬರುವ ಸಂದೇಶಗಳು, ಲಿಂಕ್‌ಗಳು ಅಥವಾ ಫೈಲ್‌ಗಳನ್ನು ತೆರೆಯುವ ಮುನ್ನ ಎಚ್ಚರಿಕೆ ವಹಿಸುವಂತೆ ಸೈಬರ್ ತಜ್ಞರು ಸಲಹೆ ನೀಡುತ್ತಿದ್ದಾರೆ. ಆದರೂ ಪ್ರತೀ ದಿನವೂ ಒಂದಿಲ್ಲೊಂದು ಸೈಬರ್ ಪ್ರಕರಣ ಆಗುತ್ತಲೇ ಇದೆ. ಮದುವೆ ಆಹ್ವಾನ ಪತ್ರಿಕೆ ಎಂದು ನಂಬಿ APK ಫೈಲ್ ತೆರೆದ ಸರ್ಕಾರಿ ಅಧಿಕಾರಿಯೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದು ಸುಮಾರು ₹9.96 ಲಕ್ಷ ಕಳೆದುಕೊಂಡಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಮೇಶ್ ಬಾಬು ಅವರಿಗೆ ಜುಲೈ 14ರಂದು ಸಂಜೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ವಾಟ್ಸಪ್‌ನಲ್ಲಿ ಮದುವೆ ಆಹ್ವಾನದ ಸಂದೇಶ ಬಂದಿತ್ತು. ಸ್ನೇಹಿತ ಅಥವಾ ಪರಿಚಿತರದ್ದಿರಬಹುದು ಎಂದು ಭಾವಿಸಿ ಅವರು ಆ ಫೈಲ್ ಅನ್ನು ತೆರೆದಿದ್ದಾರೆ.

ಫೈಲ್ ತೆರೆದ ಬಳಿಕ ಅದು APK ಫೈಲ್ ಎಂಬುದು ತಿಳಿದಿದ್ದರೂ ಹೆಚ್ಚಿನ ಗಮನ ನೀಡಿಲ್ಲ. ಆದರೆ ಸುಮಾರು 15 ನಿಮಿಷಗಳಲ್ಲೇ ಅವರ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗುತ್ತಿರುವ ಕುರಿತು ಮೊಬೈಲ್‌ಗೆ ಸಂದೇಶಗಳು ಬರಲಾರಂಭಿಸಿವೆ. ಬಳಿಕ ಪರಿಶೀಲಿಸಿದಾಗ ವಿವಿಧ ಹಂತಗಳಲ್ಲಿ ಒಟ್ಟು ₹9.96 ಲಕ್ಷ ಹಣವನ್ನು ಸೈಬರ್ ವಂಚಕರು ದುರ್ಬಳಕೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಸೈಬರ್ ಪೊಲೀಸರ ಎಚ್ಚರಿಕೆ

  • ಅಪರಿಚಿತ ಸಂಖ್ಯೆಯಿಂದ ಬಂದ APK ಫೈಲ್‌ಗಳನ್ನು ಯಾವುದೇ ಕಾರಣಕ್ಕೂ ಡೌನ್‌ಲೋಡ್ ಅಥವಾ ಇನ್‌ಸ್ಟಾಲ್ ಮಾಡಬೇಡಿ.
  • ವಾಟ್ಸಪ್‌ನಲ್ಲಿ ಬರುವ ಲಿಂಕ್ ಅಥವಾ ಫೈಲ್‌ನ ಮೂಲವನ್ನು ದೃಢಪಡಿಸಿಕೊಂಡ ಬಳಿಕವೇ ತೆರೆಯಿರಿ.
  • ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣ ಬ್ಯಾಂಕ್‌ಗೆ ಮಾಹಿತಿ ನೀಡಿ ಖಾತೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ.
  • ಸೈಬರ್ ವಂಚನೆ ನಡೆದರೆ ಕೂಡಲೇ 1930 ಸಹಾಯವಾಣಿಗೆ ಕರೆ ಮಾಡಿ ಅಥವಾ cybercrime.gov.in ನಲ್ಲಿ ದೂರು ದಾಖಲಿಸಿ.