ಸಾವಿರಾರು ಹಣತೆಗಳ ಬೆಳಕಿನಲ್ಲಿ ವೆಂಕಟರಮಣನ ವಿಶ್ವರೂಪ ದರ್ಶನ

ಉಡುಪಿ: ಉತ್ಥಾನ ದ್ವಾದಶಿ ಹಾಗೂ ತುಳಸಿ ಪೂಜೆಯ ಪರ್ವಕಾಲದ ಅಂಗವಾಗಿ ಉಡುಪಿಯ ತೆಂಕಪೇಟೆಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಭಾನುವಾರ ಮುಂಜಾನೆ 5 ಗಂಟೆಗೆ ಸಾವಿರಾರು ಹಣತೆಗಳ ಜ್ಯೋತಿಯ ಬೆಳಕಿನಲ್ಲಿ ಶ್ರೀ ದೇವರ ವಿಶ್ವರೂಪ ದರ್ಶನ ನಡೆಯಿತು.

ಪಶ್ಚಿಮ ಜಾಗರ ಪೂಜೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು, ಸರತಿ ಸಾಲಿನಲ್ಲಿ ನಿಂತು ಶ್ರೀ ದೇವರ ದರ್ಶನ ಪಡೆದರು. ದೇವಸ್ಥಾನದ ಸನ್ನಿಧಿಯಲ್ಲಿ ಸುಪ್ರಭಾತ, ಭಜನಾ ಕಾರ್ಯಕ್ರಮ, ದೀಪಾರಾಧನೆ, ಕಾಕಡ ಆರತಿ ಹಾಗೂ ಪ್ರಸಾದ ವಿತರಣೆ ನಡೆಯಿತು.

ಶ್ರೀ ದೇವರ ಸನ್ನಿಧಿಯಲ್ಲಿ ವಿವಿಧ ಬಗೆಯ ಹೂವುಗಳು ಹಾಗೂ ಬಣ್ಣಬಣ್ಣದ ರಂಗೋಲಿಗಳ ಮೂಲಕ ಮೂಡಿಬಂದ ದೇವತಾ ಚಿತ್ತಾರಗಳು ಭಕ್ತರ ಗಮನ ಸೆಳೆದವು.

ರಾಮಾಯಣ, ಜಯದುರ್ಗಾ ಪರಮೇಶ್ವರಿ, ವೆಂಕಟರಮಣ, ಶಂಖ, ಚಕ್ರ, ಶ್ರೀಲಕ್ಷ್ಮೀ, ಇಡುಗುಂಜಿ ಮಹಾಗಣಪತಿ, ಶ್ರೀರಾಮ, ಹರಿ ವಿಠಲ, ಶ್ರೀನಿವಾಸ ದೇವರು, ಗೀತೋಪದೇಶ ಹಾಗೂ ಶ್ರೀವಿಷ್ಣುವಿನ ವಿವಿಧ ಅವತಾರಗಳ ಕಲಾತ್ಮಕ ಚಿತ್ರಣಗಳು ವಿಶೇಷ ಆಕರ್ಷಣೆಯಾಗಿದ್ದವು.