ಕುಂದಾಪುರ: ಹಲವು ದಿನಗಳ ಬಳಿಕ ಮದ್ಯ ಸಿಕ್ಕ ಖುಷಿಯಲ್ಲಿ ವ್ಯಕ್ತಿಯೋರ್ವರು ಮನೆ ಎದುರಿನ ಜಗುಲಿಯಲ್ಲಿ ಮದ್ಯದ ಬಾಟಲಿಗಳನ್ನಿಟ್ಟು ಪೂಜೆ ಮಾಡಿ ಸಂಭ್ರಮಿಸಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ನಲವತ್ತು ದಿನಗಳ ಬಳಿಕ ಸರ್ಕಾರ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟ ಬೆನ್ನಲ್ಲೇ ಮದ್ಯ ಸಿಕ್ಕ ಖುಷಿಯಲ್ಲಿ ಇಲ್ಲಿನ ನಾಡಾ-ಗುಡ್ಡೆಯಂಗಡಿ ವ್ಯಾಪ್ತಿಯ ಗೋಳಿಹಕ್ಲು ನಿವಾಸಿಯೋರ್ವರು ಮನೆಯ ಜಗುಲಿ ಮೇಲೆ ವಿವಿಧ ಬ್ರ್ಯಾಂಡ್‍ಗಳ ಮದ್ಯದ ಬಾಟಲಿಗಳನ್ನು ಜೋಡಿಸಿಟ್ಟು ಪೂಜೆ ಮಾಡಿದ್ದರು.
ವಿಡಿಯೋ ವೈರಲ್ ಆದ ಬೆನ್ನಲ್ಲೇ ಸಾರ್ವಜನಿಕರು ವ್ಯಕ್ತಿಯ ನಡೆಯ ವಿರುದ್ದ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಹಿಂದೂ ದೇವರು, ಸಂಪ್ರದಾಯಗಳನ್ನು ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿ ಕ್ಷಮೆ ಕೇಳಲೂ ಆಗ್ರಹಿಸಿದ್ದರು. ಮನೆಯ ಮಹಿಳೆಯರು ಹಾಗೂ ಮಕ್ಕಳ ಮುಂದೆ ಈ ರೀತಿಯಾಗಿ ನಡೆದುಕೊಂಡು ವಿಡಿಯೊವನ್ನು ಮಾಡಿ ಅದನ್ನು ಸಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವುದು ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಕೆಲವರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಇದೀಗ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಕ್ಷಮೆಯಾಚಿಸಿರುವ ವ್ಯಕ್ತಿ ವಿಡಿಯೋವನ್ನು ಅಪ್ಲೋಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಕ್ಷಮೆಯಾಚಿಸಿರುವ ವಿಡಿಯೊದಲ್ಲಿ “ದಯವಿಟ್ಟು ನಾನು ಯಾವುದೇ ಧರ್ಮ ಹಾಗೂ ದೇವರನ್ನು ಅವಹೇಳನ ಮಾಡಿಲ್ಲ. ಕೇವಲ ತಮಾಷೆಗಾಗಿ ಮಾತ್ರ ವಿಡಿಯೊ ಮಾಡಿದ್ದೇನೆ. ಬೇರೇನೆ ಉದ್ದೇಶವಿಲ್ಲ. ಸ್ವತಃ ನಾನು ಕುಡಿಯೋದಿಲ್ಲ. ನನ್ನ ವಿಡಿಯೊದಿಂದ ನಿಮಗೆಲ್ಲಾ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ದಯವಿಟ್ಟು ಈ ಹಿಂದೆ ಮಾಡಿರುವ ವಿಡಿಯೊವನ್ನು ವೈರಲ್ ಮಾಡಬೇಡಿ” ಎಂದು ಕೈಮುಗಿದು ಬೇಡಿಕೊಂಡಿದ್ದಾರೆ.