ಉಡುಪಿ: ಬನ್ನಂಜೆಯಲ್ಲಿ ನೂತನವಾಗಿ ಆರಂಭವಾಗಿರುವ ಹೆಸರಾಂತ ಬಟ್ಟೆ ಮಳಿಗೆ ಸಿಬ್ಬಂದಿಗಳಿಂದ ಆಟೋ ಚಾಲಕರ ಮೇಲೆ ನಿರಂತರ ದಬ್ಬಾಳಿಕೆ, ಹಲ್ಲೆಗಳು ನಡೆಯುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿರುವ ಬೆನ್ನಲ್ಲೇ, ಇದೀಗ ಮತ್ತೊಮ್ಮೆ ಆಟೋ ಚಾಲ್ಕರ ಮತ್ತು ಮಳಿಗೆಯ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ ನಡೆದಿರುವ ಘಟನೆ ವರದಿಯಾಗಿದೆ.
ಮಳಿಗೆಗೆ ಬರುವ ಗ್ರಾಹಕರನ್ನು ಗಮ್ಯ ಸ್ಥಾನಕ್ಕೆ ಕೊಂಡೊಯ್ಯಲು ಆಟೋ ಸವಾರರು ಮಳಿಗೆಯ ಮುಂದೆ ಆಟೋ ನಿಲ್ಲಿಸುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎನ್ನುವ ದೂರು ಒಂದು ಕಡೆಯಾದರೆ, ಆಟೋ ಚಾಲಕರ ಕೀ ತೆಗೆದುಕೊಳ್ಳುವುದು, ಅವರ ಮೇಲೆ ಹಲ್ಲೆ ಮಾಡುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದು ನಿರಂತರವಾಗಿ ನಡೆಯುತ್ತಿದೆ ಎಂದು ಇನ್ನೊಂದು ಪಕ್ಷ ದೂರಿದೆ.
ಈ ಬಾರಿಯೂ ಆಟೋ ಚಾಲಕರೊಬ್ಬರ ಕೀ ಕಸಿದುಕೊಂಡು ಆಟೋವನ್ನು ರಸ್ತೆಬದಿ ನಿಲ್ಲಿಸಿ ಅದರ ಮುಂದೆ ಹಾಗೂ ಹಿಂದೆ ಗಾಡಿ ಇಟ್ಟು ಆಟೋ ತೆಗೆಯದಂತೆ ವಾಹನಗಳನ್ನು ಅಡ್ಡಲಾಗಿ ನಿಲ್ಲಿಸಿದ್ದು, ಆಟೋ ಚಾಲಕ ಮತ್ತು ಮಳಿಗೆ ಸಿಬ್ಬಂದಿಗಳ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ಮಧ್ಯೆ ಇತರ ಆಟೋ ಚಾಲಕರೂ ತಮಗಾದ ಅನುಭವಗಳ ಬಗ್ಗೆ ದನಿಗೂಡಿಸಿದ್ದಾರೆ.
ಪರಿಸ್ಥಿತಿ ಹದಗೆಡುವ ಮೊದಲು ಪೊಲೀಸರ ಹಾಗೂ ಸಂಚಾರ ಪೊಲೀಸರ ಮಧ್ಯ ಪ್ರವೇಶದಿಂದ ಮಧ್ಯಸ್ಥಿಕೆ ನಡೆದಿದೆ. ಆಟೋ ಚಾಲಕರು ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ಗ್ರಾಹರನ್ನು ಕೂಡಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ. ಮಳಿಗೆಯ ಮುಂದೆ ಯಾವುದೇ ವಾಹನಗಳನ್ನು ನಿಲ್ಲಿಸುವಂತಿಲ್ಲ ಎಂದೂ ಹೇಳಲಾಗಿದೆ. ಪೊಲೀಸರ ಮಧ್ಯಸ್ಥಿಕೆಯಿಂದ ಪ್ರಕರಣ ತಿಳಿಯಾಗಿದೆ.
ಬನ್ನಂಜೆಯಲ್ಲಿ ನೂತನವಾಗಿ ಅರಂಭವಾಗಿರುವ ಬಟ್ಟೆ ಮಳಿಗೆಯಿಂದ ತೀವ್ರ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಯಮದಂತೆ ಹೆದ್ದಾರಿ ಅಗಲೀಕರಣಕ್ಕೆ ನೀಡಬೇಕಾದ ಭೂಮಿಯನ್ನು ಬಿಟ್ಟುಕೊಡದೇ ಇರುವುದರಿಂದ ಇಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಈ ಸಮಸ್ಯೆ ತಲೆದೋರಿದೆ ಎಂದು ಸಾರ್ವಜನಿಕರು ಅರೋಪಿಸಿದ್ದಾರೆ.
ನಗರ ಸಭೆ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಅಗ್ರಹಿಸಿದ್ದಾರೆ.