ಸಸ್ಯಸಂತೆಯಲ್ಲಿ ವಿವಿಧ ತೋಟಗಾರಿಕೆ ಹಾಗೂ ಹೂಗಿಡಗಳು ಲಭ್ಯ

ಉಡುಪಿ: ತೋಟಗಾರಿಕೆ ಇಲಾಖೆಯ ವತಿಯಿಂದ ಉಡುಪಿಯ ದೊಡ್ಡಣಗುಡ್ಡೆ ಶಿವಳ್ಳಿ ಮಾದರಿ ತೋಟಗಾರಿಕೆ ಕ್ಷೇತ್ರದ ಪುಷ್ಪ ಹರಾಜು ಕೇಂದ್ರ (ರೈತ ಸೇವಾ ಕೇಂದ್ರ)ದ ಆವರಣದಲ್ಲಿ ಸಾರ್ವಜನಿಕರು ಹಾಗೂ ರೈತರಿಗಾಗಿ ಆಯೋಜಿಸಲಾಗಿರುವ ಮೂರು ದಿನಗಳ (ಆ.14-16) “ಸಸ್ಯಸಂತೆ-2026” ಕಾರ್ಯಕ್ರಮದ ಉದ್ಘಾಟನೆಯನ್ನು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಇಂದು ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಳೆಗಾಲದಲ್ಲಿ ತೊಟಗಾರಿಕೆ ಇಲಾಖೆ ವತಿಯಿಂದ ಆಯೋಜಿಸಿರುವ ಸಸ್ಯಸಂತೆ ರೈತರು ಹಾಗೂ ಜನಸಾಮಾನ್ಯರು ತೋಟಗಾರಿಕೆ ಗಿಡಗಳು, ಹೂವು, ಹಣ್ಣಿನ ಗಿಡಗಳನ್ನು ಕೊಂಡು ಹೋಗಿ ಬೆಳೆಸಲು ಸಹಕಾರಿಯಾಗುತ್ತದೆ.

ಈ ಸಮಯದಲ್ಲಿ ಗಿಡಗಳು ಸಮೃದ್ಧಿಯಾಗಿ ಬೆಳೆಯಲು ಬಿಸಿಲಿನ ವಾತಾವರಣ ಇಲ್ಲದೇ ಮಳೆ ಬರುತ್ತಿರುವುದು ಅನುಕೂಲವಾಗಲಿದೆ ಎಂದರು.

ಸಸ್ಯಗಳು ನಮ್ಮೆಲ್ಲರ ಜೀವನಾಡಿಯಾಗುವುದರ ಜೊತೆಗೆ ನಮ್ಮ ಸುತ್ತಮುತ್ತಲಿನ ಉತ್ತಮ ಪರಿಸರವನ್ನು ಸೃಷ್ಠಿಸಿ, ಜನಸಾಮಾನ್ಯರು ಉತ್ತಮ ಆರೋಗ್ಯ ಹೊಂದಲು ಸಹಕಾರಿಯಾಗುವುದರ ಜೊತೆಗೆ ಹಣ್ಣು- ಹಂಪಲುಗಳನ್ನು ಸಹ ನೀಡುತ್ತವೆ. ಇವು ಮಾನವನಲ್ಲದೇ ಪ್ರಾಣಿ, ಪಕ್ಷಿಗಳಿಗೂ ಸಹ ಆಹಾರ ಒದಗಿಸುತ್ತದೆ. ಎಂದರು.

ರೈತರು ಹಾಗೂ ಜನಸಾಮಾನ್ಯರು ಗಿಡಗಳ ಪೋಷಣೆಗೆ ರಾಸಾಯನಿಕ ಗೊಬ್ಬರಗಳನ್ನು ಬಳಸದೇ ಸಾವಯವ ಗೊಬ್ಬರವನ್ನು ನೀಡಿ, ಬೆಳೆಸಿದಾಗ ಉತ್ತಮ ಗುಣಮಟ್ಟದ ಹಂಪಲುಗಳನ್ನು ಪಡೆಯಲು ಸಾಧ್ಯ. ನೈಸರ್ಗಿಕ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.

ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ ಮಾತನಾಡಿ, ಸಸ್ಯಸಂತೆಯಲ್ಲಿ ಲಭ್ಯವಿರುವ ಗಿಡಗಳಿಂದ ನಗರ ಪ್ರದೇಶಗಳಲ್ಲಿ ಮನೆಯ ಸುತ್ತಮುತ್ತಲೂ ಕೈತೋಟಗಳನ್ನು ಬೆಳೆಸಲು ಸಹಕಾರಿಯಾಗುತ್ತದೆ. ರೈತರಿಗೂ ಸಹ ತೋಟಗಾರಿಕೆ ಕೃಷಿಯನ್ನು ಕೈಗೊಳ್ಳಲು ಸಸಿಗಳು, ಗೊಬ್ಬರ ಸಾಮಾಗ್ರಿಗಳು, ತೋಟಗಾರಿಕೆ ಸಲಕರಣೆಗಳು ಲಭ್ಯವಿವೆ. ಇದರ ಲಾಭ ಪಡೆದುಕೊಳ್ಳಬಹುದಾಗಿದೆ ಎಂದರು.

ಸಸ್ಯಸಂತೆಯಲ್ಲಿ ಸಂಕಲ ಫುಡ್ ಪ್ರೋಡಕ್ಟ್÷್ಸ, ಚಿಯಾ ಸೀಡ್ಸ್, ರಾಗಿ ಖಾದ್ಯ, ಮಿಲೇಟ್ಸ್ ಪೌರ‍್ಸ್, ಮಡಿಕೇರಿ ಬಟರ್ ಪ್ರೂಟ್ಸ್, ಹಲಸಿನ ಹಾಗೂ ಮಾವು ಹಣ್ಣಿನ ವಿವಿಧ ತಳಿಗಳ ಮಳಿಗೆಗಳನ್ನು ತೆರೆಯಲಾಗಿದ್ದು, ಹಣ್ಣಿನ ಹಾಗೂ ತರಕಾರಿ ಗಿಡಗಳು, ಹೂವಿನ ಗಿಡಗಳು, ಔಷಧೀಯ ಗಿಡಗಳು, ಅಲಂಕಾರಿಕ ಗಿಡಗಳು, ತೋಟಗಾರಿಕೆ ಸಲಕರಣೆಗಳು, ಗೊಬ್ಬರ ಇತ್ಯಾದಿ ಸಾಮಾಗ್ರಿಗಳು ಒಂದೇ ಸೂರಿನಡಿ ಲಭ್ಯವಿದೆ.

ಈ ಸಂದರ್ಭದಲ್ಲಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಹೇಮಂತ್ ಕುಮಾರ್ ಎಲ್, ವಾರ್ತಾಧಿಕಾರಿ ಮಂಜುನಾಥ್ ಬಿ, ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಸುನಿಲ್ ಕುಮಾರ್ ವೈ.ಹೆಚ್, ವರುಣ ಕೆ.ಜೆ, ನಿಧೀಶ ಕೆ.ಜೆ, ರೈತರು, ಸಾರ್ವಜನಿಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.