ಉಡುಪಿ: ಇಲ್ಲಿನ ಹರಿಖಂಡಿಗೆಯ ಬೈರಂಪಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಏರ್ಪಡಿಸಿದ ವೈವಾಹಿಕ ಔತಣ ಕೂಟವು ಇತರರಿಗೆ ಮಾದರಿಯೆನಿಸುವಂತ್ತಿತ್ತು. ಗ್ರಾಮದಲ್ಲಿ ವಿನೂತನ ಅಪರೂಪದ ಅವಿಸ್ಮರಣೀಯ ನೂತನ ವಿವಾಹಿತರ ಔತಣ ಕೂಟ ಸಮಾರಂಭ. ಈಗಿನ ಅಬ್ಬರ ಆಡಂಬರ ತಮ್ಮ ಶ್ರೀಮಂತಿಕೆಯ ಪ್ರದರ್ಶನದ ಲವಲೇಷವೂ ಇರದ ಕಾರ್ಯಕ್ರಮ.
ಮೂಲತಃ ಕೃಷಿಕ ಬೈರಂಪಳ್ಳಿ ಗ್ರಾಮದ ನಾಯಕ್ ಕುಟುಂಬದ ವರನ ವಿವಾಹವು, ಕಾರ್ಕಳದಲ್ಲಿ ಉದ್ಯಮಿಯಾಗಿರುವ ಮುರೂರು ಪ್ರಭು ಕುಟುಂಬದ ವಧುವಿನೊಂದಿಗೆ ನಡೆದ ಸಂತೋಷದ ಔತಣಕೂಟವು ಗ್ರಾಮೀಣ ಸೊಗಡಿನಲ್ಲಿ ನೆರವೇರಿಸಿದ್ದು ಇಂದಿನ ದಿನಗಳಲ್ಲಿ ವಿಶೇಷವಾಗಿದ್ದು ಅಪಾರ ಜನಮನ್ನಣೆಗೆ ಪಾತ್ರವಾಯಿತು. ಈ ಸಂದರ್ಭ ಏರ್ಪಡಿಸಿದ ಹಳೆ ಕಾಲದ ಕೃಷಿ ಪರಿಕರಗಳ ಪ್ರದರ್ಶನವು ಆಗಮಿಸಿದ ಅತಿಥಿಗಳ ಸೆಲ್ಫಿ ಪಾಯಿಂಟ್ ಗಳಾಗಿ ಪರಿವರ್ತಿತವಾದದ್ದು ಯುವ ಜನರ ರಕ್ತಗತವಾಗಿರುವ ಗ್ರಾಮೀಣ ಜೀವನಕ್ಕೆ ಹಾತೊರೆಯುವಿಕೆಗೆ ಸಾಕ್ಷೀಭೂತವಾಯಿತು.
ಹೋಳಿಹುಣ್ಣಿಮೆಯ ಮುಸ್ಸಂಜೆಯಲ್ಲಿ ನಡೆದ ಕಾರ್ಯಕ್ರಮದ ಸ್ಟಿಂಗ್ಸ್ ಬ್ಯಾಂಡ್ ನ ವಾದ್ಯಸಂಗೀತಕ್ಕೆ ಪೂರ್ಣ ಚಂದಿರನ ಚಂದ್ರಿಕೆಯ ಲಾಸ್ಯವು ಪೂರಕವಾಗಿತ್ತು. ಕಾರ್ಯಕ್ರಮದಲ್ಲಿ ದೇಶದ ಭೂಸೇನೆಯಲ್ಲಿ ಸೇವೆಗೈಯುತ್ತಿರುವ ವೈದ್ಯ ಸೇನಾನಿಗೆ ಗೌರವಾರ್ಪಣೆ ಮಾಡಿದ್ದು ನೆರೆದಿರುವವರೆಲ್ಲರನ್ನು ಆದ್ರ ಮನಸ್ಕರನ್ನಾಗಿಸಿ ದೇಶ ಭಕ್ತಿಯನ್ನು ಉದ್ದೀಪನಗೊಳಿಸಿದ್ದು ಸರ್ವಾನುಕರಣೀಯ.
ಗ್ರಾಮೀಣ ವಸ್ತುಗಳಿಂದಲೆೇ ತಯಾರಿಸಿದ ಶುದ್ಧ ಪಾರಂಪರಿಕ ರಂಗ ವೇದಿಕೆ, ಗ್ರಾಮೀಣ ಸೊಗಡಿನ ಕೃಷಿ ಸೊಬಗಿನ ಅಂಗಣದ ಅಂದವನ್ನು, ಏಕೋಪಯೋಗಿ ಪ್ಲಾಸ್ಟಿಕ್ ವರ್ಜ್ಯಮಾಡಿ ಸಂಪೂರ್ಣ ಪರಿಸರ ಸ್ನೇಹಿಯಾಗಿ ಹೆಚ್ಚಿಸಿದುದು ನಾಯಕ್ ರವರ ಪರಿಸರ ಕಾಳಜಿಗೆ ಸಾಕ್ಷಿ.
ಅತಿಥಿ ಅಭ್ಯಾಗತರ ಪ್ರೀತಿಪೂರ್ವಕ ಕುಶಲೋಪಚರಿ ಮೂರು ತಲೆಮಾರು ಹಿಂದಿನ ದಿನಗಳ ನೆನಪುಗಳನ್ನು ಮರುಕಳಿಸಿದವು. ತಂತ್ರಜ್ಞರಾದ ನೂತನ ವಧೂವರರು ಈ ಸಮಾರಂಭದಲ್ಲಿ ಗೋ ಶಾಲೆಗೆ ದೇಣಿಗೆ ನೀಡಿದ್ದು ಯುವ ಪೀಳಿಗೆಗೆ ಆದರ್ಶಪ್ರಾಯ. ಪ್ರತಿನಿತ್ಯ ಕೃಷಿಕೆಲಸದಲ್ಲಿ ತೊಡಗಿಸಿಕೊಂಡ ಕೆಲಸಗಾರರನ್ನು ಪುರಸ್ಕರಿಸಿ ಕೃಷಿಕನ ಸೂಕ್ಷ್ಮ ಮನಸ್ಸನ್ನು ಮುದಗೊಳಿಸುವಲ್ಲಿ ಔತಣಕೂಟದ ಆಶಯ ಸಾಕಾರವಾಯಿತು. ಆತ್ಮೀಯತೆಯಿಂದ ಕೂಡಿದ ಅತಿಥಿ ಸತ್ಕಾರದಲ್ಲಿ ಮೊದಲಿಗೆ ಬೆಲ್ಲ ನೀರಿನ ಸ್ವಾಗತ, ಮಣ್ಣಿನ ಲೋಟದಲ್ಲಿ ರಾಗಿ ನೀರು, ಶುದ್ಧ ಸಾಂಪ್ರದಾಯಿಕ ಊಟೋಪಚಾರದ ವ್ಯವಸ್ಥೆ ವೃತ್ತಿಪರರನ್ನು ಮೀರಿಸಿತ್ತು. ಒಟ್ಟಂದದಲ್ಲಿ ಔತಣಕೂಟವು ವಿನೂತನವಾಗಿ ಆಯೋಜಿಸಲ್ಪಟ್ಟರೂ, ಸಾಂಪ್ರದಾಯಿಕ ಮೌಲ್ಯಗಳನ್ನು ಎತ್ತಿ ಹಿಡಿದು ಭಾರತೀಯ ಮೌಲ್ಯಗಳ ಸಾರಿ ಗ್ರಾಮೀಣ ಭಾರತದ ಸೊಗಡನ್ನು ಪಸರಿಸಿ ಹೃನ್ಮನಗಳನ್ನು ಗೆಲ್ಲುವಲ್ಲಿ ಸಫಲವಾಯಿತು ಮಾತ್ರವಲ್ಲದೆ ಔತಣ ಕೂಟಗಳಿಗೆ ಒಂದು ಮಾದರಿ ಎನಿಸಿತು.
ದೇಶದ ಪ್ರದಾನ ಮಂತ್ರಿಯವರ ಕಾಳಜಿಗಳಾದ ಸ್ವಚ್ಚ ಭಾರತ, ಪರಿಸರ ಪ್ರೇಮ, ಪ್ಲಾಸ್ಟಿಕ್ ಮುಕ್ತ ಸಮಾಜ ಮತ್ತು ನಮ್ಮ ಸೈನಿಕ ಪಡೆಗಳಿಗೆ ಸಂದ ಗೌರವ ಇವೆಲ್ಲವೂ ಮೋದಿಜಿಯವರ ಪರಿಕಲ್ಪನೆಯೊಂದಿಗೆ ಕೈಜೋಡಿಸುವಂತಿತ್ತು.