ರಾಜ್ಯದಲ್ಲಿ ಒಟ್ಟು 177 ತಾಲೂಕುಗಳು ಬರಪೀಡಿತ: ಮೂರನೇ ಹಂತದಲ್ಲಿ 53 ತಾಲೂಕು, ಉಡುಪಿಯ ಬ್ರಹ್ಮಾವರ ಕೂಡ ಬರಪೀಡಿತ!

ಬೆಂಗಳೂರು: ಮುಂಗಾರು ಮಳೆ ಕೊರತೆಯಿಂದ ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ಮೂರನೇ ಹಂತದಲ್ಲಿ ಮತ್ತಷ್ಟು 53 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಇದರೊಂದಿಗೆ ರಾಜ್ಯದಲ್ಲಿ ಅಧಿಕೃತವಾಗಿ ಬರಪೀಡಿತ ಎಂದು ಘೋಷಿಸಲಾದ ತಾಲೂಕುಗಳ ಸಂಖ್ಯೆ 177ಕ್ಕೆ ಏರಿಕೆಯಾಗಿದೆ.

ಮೊದಲ ಹಂತದಲ್ಲಿ 101 ಹಾಗೂ ಎರಡನೇ ಹಂತದಲ್ಲಿ 23 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ಇದೀಗ ಮೂರನೇ ಹಂತದಲ್ಲಿ 53 ತಾಲೂಕುಗಳನ್ನು ಸೇರ್ಪಡೆ ಮಾಡಲಾಗಿದೆ. ಹೊಸದಾಗಿ ಸೇರ್ಪಡೆಯಾದ 53 ತಾಲೂಕುಗಳ ಪೈಕಿ 51 ತಾಲೂಕುಗಳು ತೀವ್ರ ಬರಪೀಡಿತ ಹಾಗೂ 2 ತಾಲೂಕುಗಳು ಸಾಧಾರಣ ಬರಪೀಡಿತ ಎಂದು ಸರ್ಕಾರ ತಿಳಿಸಿದೆ.

ಮಳೆ ಪ್ರಮಾಣ, ಮಣ್ಣಿನ ತೇವಾಂಶ, ಬೆಳೆ ಪರಿಸ್ಥಿತಿ ಸೇರಿದಂತೆ ವಿವಿಧ ವೈಜ್ಞಾನಿಕ ಮಾನದಂಡಗಳನ್ನು ಆಧರಿಸಿ ಬರ ಪರಿಸ್ಥಿತಿಯನ್ನು ಹಂತ ಹಂತವಾಗಿ ಮೌಲ್ಯಮಾಪನ ಮಾಡಲಾಗುತ್ತಿದೆ. ರಾಜ್ಯ ಸರ್ಕಾರವು 2020ರ ಕೇಂದ್ರ ಬರ ನಿರ್ವಹಣಾ ಮಾರ್ಗಸೂಚಿಗಳ ಆಧಾರದಲ್ಲಿ ಬರ ಘೋಷಣೆ ಮಾಡುತ್ತಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ.

ಇನ್ನೂ 7 ಜಿಲ್ಲೆಗಳ 11 ತಾಲೂಕುಗಳು ಮುಂದಿನ ಹಂತದ ಅಧ್ಯಯನಕ್ಕೆ ಅರ್ಹತೆ ಪಡೆದಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ಬರಪೀಡಿತ ತಾಲೂಕುಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಸರ್ಕಾರ ತಿಳಿಸಿದೆ.

ಮೂರನೇ ಹಂತದಲ್ಲಿ ಸೇರ್ಪಡೆಯಾದ 53 ತಾಲೂಕುಗಳು

ಜಿಲ್ಲೆಬರಪೀಡಿತ ತಾಲೂಕುಗಳುಸಂಖ್ಯೆ
ಬಾಗಲಕೋಟೆಬಾದಾಮಿ, ಹುನಗುಂದ, ಮುಧೋಳ, ರಬಕವಿ ಬನಹಟ್ಟಿ, ತೆರದಾಳ5
ಬಳ್ಳಾರಿಸಿರುಗುಪ್ಪ1
ಬೆಳಗಾವಿಅಥಣಿ, ಬೈಲಹೊಂಗಲ, ಬೆಳಗಾವಿ, ಚಿಕ್ಕೋಡಿ, ಕಿತ್ತೂರು, ಮೂಡಲಗಿ, ನಿಪ್ಪಾಣಿ, ರಾಯಭಾಗ, ಯರಗಟ್ಟಿ9
ಬೆಂಗಳೂರು ಗ್ರಾಮಾಂತರದೊಡ್ಡಬಳ್ಳಾಪುರ1
ಬೆಂಗಳೂರು ನಗರಬೆಂಗಳೂರು ದಕ್ಷಿಣ1
ಬೀದರ್ಹುಲಸೂರು, ಕಮಲನಗರ2
ಚಿತ್ರದುರ್ಗಚಿತ್ರದುರ್ಗ, ಹೊಳಲ್ಕೆರೆ, ಮೊಳಕಾಲ್ಮುರು3
ದಾವಣಗೆರೆಹರಿಹರ1
ಗದಗಲಕ್ಷ್ಮೇಶ್ವರ, ನರಗುಂದ, ಶಿರಹಟ್ಟಿ3
ಹಾಸನಆಲೂರು, ಬೇಲೂರು2
ಹಾವೇರಿಬ್ಯಾಡಗಿ, ಹಾನಗಲ್, ಹಾವೇರಿ, ರಾಣೆಬೆನ್ನೂರು, ಸವಣೂರು, ಶಿಗ್ಗಾಂವ್6
ಕಲಬುರಗಿಚಿಂಚೋಳಿ, ಜೇವರ್ಗಿ, ಕಾಳಗಿ, ಕಮಲಾಪುರ, ಸೇಡಂ5
ಕೊಪ್ಪಳಕೊಪ್ಪಳ, ಯಲಬುರ್ಗಾ2
ವಿಜಯನಗರಕೊಟ್ಟೂರು, ಕೂಡ್ಲಿಗಿ2
ವಿಜಯಪುರಆಲಮೇಲ, ದೇವರ ಹಿಪ್ಪರಗಿ, ಮುದ್ದೇಬಿಹಾಳ, ಸಿಂದಗಿ4
ಯಾದಗಿರಿಗುರುಮಿಟ್ಕಲ್, ಹುಣಸಗಿ, ಸುರಪುರ, ವಡಗೇರಾ, ಯಾದಗಿರಿ5
ಉಡುಪಿಬ್ರಹ್ಮಾವರ1
ಒಟ್ಟು17 ಜಿಲ್ಲೆಗಳು53 ತಾಲೂಕುಗಳು

ಬರ ಪರಿಸ್ಥಿತಿಯ ಮೇಲ್ವಿಚಾರಣೆ ಮುಂದುವರಿಯಲಿದ್ದು, ಬೆಳೆ ಹಾನಿ ಹಾಗೂ ನೆಲಮಟ್ಟದ ಪರಿಸ್ಥಿತಿಯ ಆಧಾರದ ಮೇಲೆ ಮುಂದಿನ ಹಂತದಲ್ಲಿಯೂ ಹೆಚ್ಚುವರಿ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸುವ ಸಾಧ್ಯತೆ ಇದೆ.