ಮಂಡ್ಯ: ಮಹಡಿಯಿಂದ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೂರು ವರ್ಷದ ಮಗುವೊಂದು ಮೃತಪಟ್ಟ ದಾರುಣ ಘಟನೆ ಮಂಡ್ಯ ನಗರದ ರಾಜಕುಮಾರ್ ಬಡಾವಣೆಯಲ್ಲಿ ಇಂದು ಸಂಭವಿಸಿದೆ.
ತಾಯಿ ಮಗುವಿಗೆ ಊಟ ಮಾಡಿಸಿ ಕೈ ತೊಳೆಯಲು ಹೋದ ವೇಳೆ ಮಗು ಮಹಡಿಯ ಮೇಲಿಂದ ಬಿದ್ದು ಸಾವನ್ನಾಪ್ಪಿದೆ ಎನ್ನಲಾಗಿದೆ.
ಮಂಡ್ಯ ನಗರದ ರಾಜಕುಮಾರ್ ಬಡಾವಣೆಯ ನಿವಾಸಿ ಸತೀಶ್ ಹಾಗೂ ಶೃತಿ ದಂಪತಿಯ ಮಗಳು ಧನುಶ್ರೀ (3) ಮೃತ ದುರ್ದೈವಿ. ಶೃತಿ ತಮ್ಮ ಮಗಳು ಧನುಶ್ರೀಯನ್ನು ಆಟವಾಡಿಸಿಕೊಂಡು ಮನೆಯ ಮುಂಭಾಗ ಊಟ ಮಾಡಿಸುತ್ತಿದ್ದರು. ನಂತರ ಮಗುವನ್ನು ಬಿಟ್ಟು ಒಳಗೆ ಕೈ ತೊಳೆಯಲು ಹೋಗಿದ್ದಾರೆ. ಈ ವೇಳೆ ಮಹಡಿಯ ಮೇಲಿನ ಸಂದಿಯಲ್ಲಿ ಮಗು ಇಣುಕಿ ನೋಡಲು ಹೋಗಿದೆ. ಆಗ ಮಗು ಮುಗ್ಗರಿಸಿ ಕೆಳಗೆ ಬಿದ್ದಿದೆ ಎನ್ನಲಾಗಿದೆ.
ಮಹಡಿಯ ಮೇಲಿಂದ ಬಿದ್ದ ರಭಸಕ್ಕೆ ಮಗುವಿನ ತಲೆಯ ಭಾಗಕ್ಕೆ ಗಂಭೀರವಾಗಿ ಪೆಟ್ಟು ಬಿದ್ದಿದ್ದು, ತಕ್ಷಣ ಪೋಷಕರು ಮಗುವನ್ನು ಕರೆದುಕೊಂಡು ಖಾಸಗಿ ಆಸ್ಪತ್ರೆ ತೆರಳಿದ್ದಾರೆ.ಆದರೆ ಸೂಕ್ತ ಚಿಕಿತ್ಸೆ ಸಿಗದ ಕಾರಣ ಮಗು ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.