ಹಿರಿಯಡಕದಲ್ಲಿ ಮೂರು ದಿನಗಳ ಕೃಷಿ ಮೇಳ ಮತ್ತು ಸಾಂಸ್ಕೃತಿಕ ವೈಭವಕ್ಕೆ ಚಾಲನೆ 

ಹೆರ್ಗ ವ್ಯವಸಾಯ ಸೇವಾ ಸಹಕಾರಿ ಸಂಘ ಪರ್ಕಳ, ವೆನಿಲ್ಲಾ ಅಭಿವೃದ್ಧಿ ಟ್ರಸ್ಟ್ ಹಿರಿಯಡ್ಕ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಹಾಗೂ ಜಿಲ್ಲಾ ಕೃಷಿಕ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಹಿರಿಯಡ್ಕ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾದ ಮೂರು ದಿನಗಳ ಕೃಷಿ ಮೇಳ ಮತ್ತು ಸಾಂಸ್ಕೃತಿಕ ವೈಭವಕ್ಕೆ ಇಂದು ಚಾಲನೆ ನೀಡಲಾಯಿತು.

ಕೃಷಿ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಮಂಗಳೂರು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅವರು, ರೈತರು ಪ್ರಯೋಗಶೀಲರಾಗಬೇಕು. ಮುಂದಿನ ದಿನಗಳಲ್ಲಿ ಯುವ ಸಮುದಾಯ ಕೃಷಿಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಉನ್ನತ ಶಿಕ್ಷಣ ಪಡೆದರೂ ಇಂದು ಯಾವುದೇ ಉದ್ಯೋಗ ಸಿಗುತ್ತಿಲ್ಲ. ಆದುದರಿಂದ ಯುವ ಜನತೆ ಸ್ವಾವಲಂಬಿಯಾಗಿ ಬದುಕಲು ಹೈನುಗಾರಿಕೆ, ಮತ್ಸೋದ್ಯಮ ಸೇರಿದಂತೆ ಕೃಷಿ ಪೂರಕವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ವಸ್ತು ಪ್ರದರ್ಶನವನ್ನು ಹೆರ್ಗ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ದಿನಕರ ಶೆಟ್ಟಿ ಹೆರ್ಗ ಉದ್ಘಾಟಿಸಿದರು. ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ಬಿ.ಹೇಮ್ಲಾ ನಾಯಕ್ ದಿಕ್ಸೂಚಿ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಸಾಧಕ ಕೃಷಿಕರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷತೆಯನ್ನು ಬೊಮ್ಮರಬೆಟ್ಟು ಗ್ರಾಪಂ ಅಧ್ಯಕ್ಷ ಸುರೇಶ್ ನಾಯಕ್ ವಹಿಸಿದ್ದರು. ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯ ಶ್ಯಾಮಲಾ ಕುಂದರ್, ಕರ್ನಾಟಕ ರಾಜ್ಯ ಬಸ್ ಮಾಲಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಉಪಸ್ಥಿತರಿದ್ದರು.