ಔರಂಗಾಬಾದ್ (ಮಹಾರಾಷ್ಟ್ರ): ನೆರೆ ರಾಜ್ಯ ಮಹಾರಾಷ್ಟ್ರದ ಒಸ್ಮಾನಾಬಾದ್ ಜಿಲ್ಲೆಯ ಪ್ರಸಿದ್ಧ ತುಳಜಾ ಭವಾನಿ ದೇವಸ್ಥಾನಕ್ಕೆ ಸೇರಿದ 1,150 ಎಕರೆ ಭೂಮಿಯಲ್ಲಿ ಸೌರಶಕ್ತಿ (ಸೋಲಾರ್) ಯೋಜನೆ ಸ್ಥಾಪಿಸಲು ನಿರ್ಧರಿಸಲಾಗಿದೆ.ಮಹಾರಾಷ್ಟ್ರದ ಪ್ರಸಿದ್ಧ ತುಳಜಾ ಭವಾನಿ ದೇವಸ್ಥಾನಕ್ಕೆ ಸೇರಿದ 1,150 ಎಕರೆ ಪ್ರದೇಶದಲ್ಲಿ ರಾಜ್ಯ ವಿದ್ಯುತ್ ಉತ್ಪಾದನಾ ಕಂಪನಿ ಸೌರಶಕ್ತಿ ಘಟಕ ಸ್ಥಾಪಿಸಲು ಮುಂದಾಗಿದೆ.
ಮಹಾರಾಷ್ಟ್ರ ರಾಜ್ಯ ವಿದ್ಯುತ್ ಉತ್ಪಾದನಾ ಕಂಪೆನಿ (MAHAGENCO)ಯು 250 ಮೆಗಾವ್ಯಾಟ್ ಸಾಮರ್ಥ್ಯದ ಯೋಜನೆಯ ಪ್ರಸ್ತಾಪನೆ ಸಲ್ಲಿಸಿದ್ದು, ಇದಕ್ಕೆ ದೇವಾಲಯದ ಟ್ರಸ್ಟ್ ಸಮಿತಿ ಎಂದು ಅನುಮೋದಿಸಿದೆ ಎಂದು ದೇವಸ್ಥಾನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ತಿಂಗಳು ನಡೆದ ಸಮಿತಿಯ ಸಭೆಯ ನಡಾವಳಿಗಳ ಪ್ರಕಾರ, ದೇವಸ್ಥಾನದ ಟ್ರಸ್ಟ್ಗೆ ಸೇರಿದ ಮಾಲುಂಬ್ರ ಗ್ರಾಮದಲ್ಲಿ 617 ಎಕರೆ ಮತ್ತು ಮಾಸ್ಲಾ ಗ್ರಾಮದಲ್ಲಿ 532 ಎಕರೆ ಭೂಮಿಯಲ್ಲಿ ಬೃಹತ್ ಸೋಲಾರ್ ಯೋಜನೆಯನ್ನು ಆರಂಭಿಸಲಾಗುತ್ತಿದೆ. ವಿದ್ಯುತ್ ಉತ್ಪಾದನೆಯಲ್ಲಿ ಪ್ರತಿ ಯೂನಿಟ್ಗೆ 2 ರೂ.ಗಳನ್ನು ದೇವಸ್ಥಾನಕ್ಕೆ ನೀಡಲಾಗುವುದು ಎಂದು ವಿದ್ಯುತ್ ಉತ್ಪಾದನಾ ಕಂಪೆನಿ ಪ್ರಸ್ತಾವನೆ ಸಲ್ಲಿಸಿದೆ.
ಅದರಂತೆ, ಪ್ರತಿ ವರ್ಷಕ್ಕೆ 91 ಲಕ್ಷ ರೂ. ಆದಾಯ ಬರುತ್ತದೆ. ದೇವಸ್ಥಾನದ ಆಡಳಿತ ಮಂಡಳಿಯೂ ತನ್ನ ಹೂಡಿಕೆ ಮಾಡಿದರೆ ಯೋಜನಾ ವೆಚ್ಚದಲ್ಲಿ ಶೇ.1.62 ರಷ್ಟು ಪಾಲು ಪಡೆಯಬಹುದು ಎಂದು ಸಮಿತಿಯ ವರದಿ ತಿಳಿಸಿದೆ. ಈ ಯೋಜನೆಗೆ ತಾಂತ್ರಿಕ ಸಲಹೆಗಾರರನ್ನು ನೇಮಿಸುವ ಮೂಲಕ ದೇವಸ್ಥಾನವು ತನ್ನ ಆಯ್ಕೆಗಳನ್ನು ಅಂತಿಮಗೊಳಿಸಲು ಉದ್ದೇಶಿಸಿದೆ. ಇದಕ್ಕಾಗಿ ಎರಡು ಕೋಟಿ ರೂ.ಗಳ ಅನುದಾನವನ್ನೂ ದೇವಾಲಯದ ಟ್ರಸ್ಟ್ನ ಸಮಿತಿ ಮಂಜೂರು ಮಾಡಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ಭಕ್ತರು ಧರಿಸುವ ಉಡುಪಿನ ವಿಷಯವಾಗಿ ದೇವಸ್ಥಾನವು ಸುದ್ದಿಯಾಗಿತ್ತು. ಅಶ್ಲೀಲ ಬಟ್ಟೆ ಧರಿಸಿ ದೇವಸ್ಥಾನದ ಪ್ರವೇಶಕ್ಕೆ ದೇವಸ್ಥಾನದ ಆಡಳಿತ ಮಂಡಳಿಯು ನಿರ್ಬಂಧ ವಿಧಿಸಿತ್ತು. ಶಾರ್ಟ್ಸ್, ಹಾಫ್ ಪ್ಯಾಂಟ್, ಪ್ರಚೋದನಕಾರಿ ಬಟ್ಟೆ ಮತ್ತು ಬಹಿರಂಗ ಬಟ್ಟೆಗಳನ್ನು ಧರಿಸಿರುವ ಭಕ್ತರನ್ನು ದೇವಾಲಯದೊಳಗೆ ಅನುಮತಿಸಲಾಗುವುದಿಲ್ಲ. ಮಹಿಳೆಯರು ಒನ್ ಪೀಸ್, ಶಾರ್ಟ್ ಸ್ಕರ್ಟ್, ಶಾರ್ಟ್ ಪ್ಯಾಂಟ್ ಧರಿಸಿ ದೇವಸ್ಥಾನ ಪ್ರವೇಶಿಸುವಂತಿಲ್ಲ. ಪುರುಷರು ಕೂಡ ಚಿಕ್ಕ ಪ್ಯಾಂಟ್ ಧರಿಸುವಂತಿಲ್ಲ ಎಂದು ಸೂಚಿಸಿತ್ತು. ಆದರೆ, ಇದಾದ ಕೆಲವೇ ಗಂಟೆಗಳ ನಂತರ ತನ್ನ ಆದೇಶವನ್ನು ಹಿಂಪಡೆದಿತ್ತು. ದರ್ಶನ ಅಥವಾ ಪೂಜೆಗಾಗಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದು ಸುತ್ತೋಲೆ ಪ್ರಕಟಿಸಿತ್ತು.
ಶತಮಾನಗಳಷ್ಟು ಹಳೆಯ ದೇಗುಲ: ಮಹಾರಾಷ್ಟ್ರದ ತುಳಜಾ ಭವಾನಿ ದೇವಾಲಯವು ರಾಜ್ಯದ ಶಕ್ತಿಪೀಠ ಎಂದೇ ಹೆಸರು ಮಾಡಿದೆ. ಶತಮಾನಗಳಷ್ಟು ಹಳೆಯದಾದ ದೇಗುಲವು ರಾಷ್ಟ್ರಕೂಟ ಕಾಲದ್ದು ಎಂದು ಹೇಳಲಾಗುತ್ತದೆ. ಪ್ರತಿವರ್ಷ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಕರ್ನಾಟಕದಿಂದಲೂ ಸಾಕಷ್ಟು ಸಂಖ್ಯೆಯ ಭಕ್ತರು ತುಳಜಾಪುರಕ್ಕೆ ಭೇಟಿ ಕೊಡುತ್ತಾರೆ.