ಮಧ್ಯಾಹ್ನದ 10 ನಿಮಿಷದ ಒಂದು ಸಣ್ಣ ನಿದ್ದೆ ದೇಹಕ್ಕೆ ಕೊಡುತ್ತೆ ನವಚೈತನ್ಯ: ಯಾಕೆ ಬೇಕು ಗೊತ್ತೇ ಈ ಮಧ್ಯಾಹ್ನದ ನಿದ್ದೆ?

ಮೈಕ್ರೋ ನ್ಯಾಪ್ ರಾತ್ರಿಯ ಪೂರ್ಣ ಪ್ರಮಾಣದ ನಿದ್ರೆಗೆ ಪರ್ಯಾಯವಲ್ಲ. ಆದರೆ ಹಗಲಿನಲ್ಲಿ ಆಯಾಸ ಹೆಚ್ಚಾದಾಗ ಸ್ವಲ್ಪ ಸಮಯ ವಿಶ್ರಾಂತಿ ಪಡೆಯಲು ಇದು ಸಹಾಯಕವಾಗಿದೆ. ಕೆಲವೇ ನಿಮಿಷಗಳ ನಿದ್ರೆಯಿಂದ ದೇಹದ ಎಚ್ಚರಿಕೆಯ ಮಟ್ಟ ಹೆಚ್ಚುವುದರ ಜತೆಗೆ ಕೆಲಸದ ಮೇಲೆ ಮತ್ತೆ ಗಮನ ಕೇಂದ್ರೀಕರಿಸಲು ಸಾಧ್ಯವಾಗುತ್ತದೆ.

ಮೈಕ್ರೋ ನ್ಯಾಪ್ ಮೆದುಳಿಗೆ ಹೇಗೆ ಸಹಾಯ ಮಾಡುತ್ತದೆ?

ಮಧ್ಯಾಹ್ನದ ಸಣ್ಣ ನಿದ್ರೆಯ ಸಂದರ್ಭದಲ್ಲಿ ಮೆದುಳು ನಿದ್ರೆಯ ಆರಂಭಿಕ ಹಂತವಾದ ಹಗುರ ನಿದ್ರೆಯ ಸ್ಥಿತಿಯನ್ನು ತಲುಪುತ್ತದೆ. ದಿನವಿಡೀ ಎಚ್ಚರವಾಗಿರುವುದರಿಂದ ಮೆದುಳಿನಲ್ಲಿ ಸಂಗ್ರಹವಾಗುವ ನಿದ್ರೆಯ ಒತ್ತಡ (Sleep Pressure) ತಾತ್ಕಾಲಿಕವಾಗಿ ಕಡಿಮೆಯಾಗುತ್ತದೆ.

ನಿದ್ರೆಯ ಅವಧಿ ಕಡಿಮೆ ಇರುವುದರಿಂದ ಮೆದುಳು ಸಾಮಾನ್ಯವಾಗಿ ಗಾಢ ನಿದ್ರೆಯ ಹಂತವನ್ನು ತಲುಪುವ ಮೊದಲೇ ಎಚ್ಚರಗೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಎದ್ದ ಬಳಿಕ ಉಂಟಾಗುವ ಮಂಪರು ಮತ್ತು ಗೊಂದಲದ ಸಾಧ್ಯತೆ ಕಡಿಮೆಯಾಗುತ್ತದೆ.

ಸಣ್ಣ ನಿದ್ರೆಯು ಸ್ಮರಣಶಕ್ತಿ, ಕಲಿಯುವ ಸಾಮರ್ಥ್ಯ ಹಾಗೂ ಏಕಾಗ್ರತೆಯನ್ನು ಸುಧಾರಿಸಲು ನೆರವಾಗಬಹುದು. ವಿಶ್ರಾಂತಿಯ ಬಳಿಕ ಕೆಲಸಕ್ಕೆ ಮರಳಿದಾಗ ಹೆಚ್ಚು ಉತ್ಸಾಹದಿಂದ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.

ಚಿಕ್ಕ ನಿದ್ರೆಗೆ ಸೂಕ್ತ ಸಮಯ ಯಾವುದು?

ಮೈಕ್ರೋ ನ್ಯಾಪ್‌ನಿಂದ ಗರಿಷ್ಠ ಪ್ರಯೋಜನ ಪಡೆಯಲು ಅದರ ಅವಧಿ ಮತ್ತು ಸಮಯದ ಬಗ್ಗೆ ಗಮನ ನೀಡುವುದು ಮುಖ್ಯ. ಸಾಮಾನ್ಯವಾಗಿ 10ರಿಂದ 20 ನಿಮಿಷಗಳ ಕಾಲ ನಿದ್ರೆ ಮಾಡುವುದು ಸೂಕ್ತ. ಮಧ್ಯಾಹ್ನ 1ರಿಂದ 3 ಗಂಟೆಯ ನಡುವಿನ ಸಮಯ ಚಿಕ್ಕ ನಿದ್ರೆಗೆ ಉತ್ತಮವಾಗಿದೆ. ಈ ಸಮಯದಲ್ಲಿ ವಿಶ್ರಾಂತಿ ಪಡೆಯುವುದರಿಂದ ದೇಹದ ಆಯಾಸ ಕಡಿಮೆಯಾಗಿ ಮತ್ತೆ ಚಟುವಟಿಕೆಯಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ. ನಿದ್ರಿಸುವ ಮೊದಲು ಮೊಬೈಲ್‌ನಲ್ಲಿ ಅಲಾರಾಂ ಹೊಂದಿಸಿಕೊಳ್ಳುವುದು ಉತ್ತಮ. ಇದರಿಂದ ಅಲ್ಪಾವಧಿಯ ವಿಶ್ರಾಂತಿ ದೀರ್ಘ ನಿದ್ರೆಯಾಗಿ ಬದಲಾಗುವುದನ್ನು ತಡೆಯಬಹುದು. ಶಾಂತ ಹಾಗೂ ಆರಾಮದಾಯಕ ಸ್ಥಳದಲ್ಲಿ ನಿದ್ರಿಸುವುದು ಹೆಚ್ಚು ಪ್ರಯೋಜನಕಾರಿ. ಸಂಜೆ ಅಥವಾ ರಾತ್ರಿ ಸಮಯದಲ್ಲಿ ನಿದ್ರಿಸುವುದರಿಂದ ರಾತ್ರಿ ನಿದ್ರೆಯ ಕ್ರಮಕ್ಕೆ ಅಡ್ಡಿಯಾಗುವ ಸಾಧ್ಯತೆಯಿದೆ.

ಸಂಜೆ ಅಥವಾ ರಾತ್ರಿ ಸಮಯದಲ್ಲಿ ಹೆಚ್ಚು ಹೊತ್ತು ನಿದ್ರಿಸುವುದರಿಂದ ರಾತ್ರಿ ನಿದ್ರೆಯ ವೇಳಾಪಟ್ಟಿಗೆ ಅಡ್ಡಿಯಾಗಬಹುದು. ಆದ್ದರಿಂದ ಮಧ್ಯಾಹ್ನದ ಆರಂಭಿಕ ಅವಧಿಯಲ್ಲೇ ಸಣ್ಣ ನಿದ್ರೆ ಪಡೆಯುವುದು ಸೂಕ್ತ.

ಅತಿಯಾದ ನಿದ್ರೆ ಆರೋಗ್ಯಕ್ಕೆ ಸಮಸ್ಯೆಯಾಗಬಹುದೇ?

ಹಗಲಿನಲ್ಲಿ 30 ನಿಮಿಷಕ್ಕಿಂತ ಹೆಚ್ಚು ಕಾಲ ನಿದ್ರಿಸುವುದರಿಂದ ಕೆಲವರಿಗೆ ಪ್ರಯೋಜನಕ್ಕಿಂತ ಸಮಸ್ಯೆಗಳೇ ಹೆಚ್ಚಾಗಬಹುದು. ದೀರ್ಘಕಾಲ ನಿದ್ರಿಸಿದಾಗ ಮೆದುಳು ಗಾಢ ನಿದ್ರೆಯ ಹಂತ ಪ್ರವೇಶಿಸುವ ಸಾಧ್ಯತೆಯಿರುತ್ತದೆ. ಈ ಹಂತದಿಂದ ಇದ್ದಕ್ಕಿದ್ದಂತೆ ಎಚ್ಚರಗೊಂಡಾಗ ತಲೆ ಭಾರವಾಗುವುದು, ಮಂಪರು, ಗೊಂದಲ ಹಾಗೂ ನಿಷ್ಕ್ರಿಯತೆಯ ಅನುಭವ ಉಂಟಾಗಬಹುದು.

ಈ ಸ್ಥಿತಿಯನ್ನು ವೈದ್ಯಕೀಯ ಭಾಷೆಯಲ್ಲಿ ‘ಸ್ಲೀಪ್ ಇನರ್ಷಿಯಾ’ (Sleep Inertia) ಎಂದು ಕರೆಯಲಾಗುತ್ತದೆ. ಇದರಿಂದ ಎದ್ದ ತಕ್ಷಣ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಕಷ್ಟವಾಗಬಹುದು. ಕೆಲವೊಮ್ಮೆ ಸಣ್ಣ ನಿದ್ರೆಯಿಂದ ಸಿಗಬೇಕಾದ ತಾಜಾತನದ ಬದಲಿಗೆ ಮತ್ತಷ್ಟು ಆಯಾಸ ಉಂಟಾಗಬಹುದು.

ಎದ್ದ ಬಳಿಕ ಈ ಎಚ್ಚರಿಕೆ ಇರಲಿ

ಮೈಕ್ರೋ ನ್ಯಾಪ್‌ನಿಂದ ಎದ್ದ ತಕ್ಷಣ ವಾಹನ ಚಾಲನೆ ಅಥವಾ ಹೆಚ್ಚು ಏಕಾಗ್ರತೆ ಅಗತ್ಯವಿರುವ ಕೆಲಸಗಳಲ್ಲಿ ತೊಡಗಿಸಿಕೊಳ್ಳಬಾರದು. ದೇಹ ಮತ್ತು ಮನಸ್ಸು ಸಹಜ ಸ್ಥಿತಿಗೆ ಮರಳಲು ಒಂದೆರಡು ನಿಮಿಷಗಳ ಕಾಲಾವಕಾಶ ನೀಡಬೇಕು.

ಒಟ್ಟಿನಲ್ಲಿ, ಮಧ್ಯಾಹ್ನದ ಆಯಾಸವನ್ನು ದೂರಮಾಡಿ ಮತ್ತೆ ಚಟುವಟಿಕೆಯಿಂದ ಕೆಲಸ ಮಾಡಲು 10ರಿಂದ 20 ನಿಮಿಷಗಳ ಮೈಕ್ರೋ ನ್ಯಾಪ್ ಉತ್ತಮ ಅಭ್ಯಾಸವಾಗಬಹುದು. ಆದರೆ ರಾತ್ರಿ ಸಾಕಷ್ಟು ನಿದ್ರೆ ಪಡೆಯುವುದು ಆರೋಗ್ಯಕರ ಜೀವನಶೈಲಿಗೆ ಅತ್ಯಂತ ಮುಖ್ಯವಾಗಿದೆ.