ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಎಂದರೆ ನೆಮ್ಮದಿಯ ತಾಣ ಎಂದು ಹೇಳಲಾಗುತ್ತದೆ. ಆದರೆ ಇದೀಗ ಅದೇ ನಗರದಲ್ಲಿ ಸೈಬರ್ ಖದೀಮರು ಡಿಜಿಟಲ್ ದರೋಡೆಗೆ ಇಳಿದಿರುವ ಘಟನೆಗಳು ಹೆಚ್ಚಾಗುತ್ತಿವೆ. ನಿವೃತ್ತ ಅಧಿಕಾರಿಯನ್ನು ಬೀದಿಗೆ ತಳ್ಳಿ ಬಿಟ್ಟಿತು ಸೈಬರ್ ಕಳ್ಳರ ಆ ಒಂದು ಮೆಸೆಜ್, ಹೌದು ಕಷ್ಟಪಟ್ಟು ದುಡಿದು ನಿವೃತ್ತಿ ಜೀವನವನ್ನು ಸುಖವಾಗಿ ಕಳೆಯಬೇಕೆಂದಿದ್ದ ಅಧಿಕಾರಿಯೊಬ್ಬರು ಇದೀಗ ಕೋಟಿ ರೂಪಾಯಿ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇವಲ ಒಂದು ವಾಟ್ಸಾಪ್ ಮೆಸೇಜ್ ಇಡೀ ಬದುಕನ್ನೇ ಉಲ್ಟಾಪಲ್ಟಾ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಇಂತಹ ಘಟನೆಗಳು ಮೈಸೂರು ಮಾತ್ರವಲ್ಲ ಇಡೀ ದೇಶದಲ್ಲಿ ಆಗಾಗ ನಡೆಯುತ್ತಲೇ ಇದೆ.
ಮೈಸೂರಿನ ವಿದ್ಯಾರಣ್ಯಪುರದ 61 ವರ್ಷದ ನಿವೃತ್ತ ಅಧಿಕಾರಿಗೆ “ಸ್ಟಾಕ್ ಮಾರ್ಕೆಟ್ ಥಿಂಕ್ ಟ್ಯಾಂಕ್” ಎಂಬ ಹೆಸರಿನ ವಾಟ್ಸಾಪ್ ಗ್ರೂಪ್‌ನಿಂದ ಆಹ್ವಾನ ಬಂದಿತ್ತು. ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಕಡಿಮೆ ಅವಧಿಯಲ್ಲಿ ಭಾರೀ ಲಾಭ ಗಳಿಸಬಹುದು ಎಂದು ನಂಬಿಸಿದ್ದ ವಂಚಕರು, ಹಂತ ಹಂತವಾಗಿ ಹಣ ಹೂಡಿಕೆ ಮಾಡಲು ಪ್ರೇರೇಪಿಸಿದ್ದರು. ಇದನ್ನು ನಂಬಿದ ಅಧಿಕಾರಿ, ವಂಚಕರು ಸೂಚಿಸಿದ ಖಾತೆಗಳಿಗೆ ಒಟ್ಟು 1,10,04,600 ರೂ. ವರ್ಗಾಯಿಸಿದ್ದಾರೆ ಎನ್ನಲಾಗಿದೆ.
ತಮ್ಮ ಹೂಡಿಕೆ ಕೋಟಿ ದಾಟಿದೆ ಎಂದು ಭಾವಿಸಿದ್ದ ಅಧಿಕಾರಿಗೆ ಹಣ ವಾಪಸ್ ಪಡೆಯಲು ಹೋದಾಗ ಅಸಲಿ ಸತ್ಯ ಗೊತ್ತಾಗಿದೆ. ಹಣ ನೀಡುವ ಬದಲು “ಬ್ರೋಕರೇಜ್ ಫೀಸ್” ಹಾಗೂ ಇತರ ಶುಲ್ಕಗಳ ಹೆಸರಿನಲ್ಲಿ ಮತ್ತೆ ಹಣ ಕೇಳತೊಡಗಿದಾಗ ತಾನು ಮೋಸದ ಜಾಲಕ್ಕೆ ಸಿಲುಕಿರುವುದು ಅವರಿಗೆ ಅರಿವಾಗಿದೆ.
ದುರಂತವೆಂದರೆ, ಇದೇ ಮೈಸೂರಿನಲ್ಲಿ ನಾಲ್ಕು ತಿಂಗಳ ಹಿಂದೆಯಷ್ಟೇ ಮತ್ತೊಬ್ಬ ನಿವೃತ್ತ ಅಧಿಕಾರಿ ಸುಮಾರು 1.40 ಕೋಟಿ ರೂ. ಕಳೆದುಕೊಂಡ ಪ್ರಕರಣವೂ ದಾಖಲಾಗಿತ್ತು.
ಜಾಗರೂಕರಾಗಿರಿ:
ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚಕರು ಅನಕ್ಷರಸ್ಥರಿಗಿಂತ ವೈದ್ಯರು, ಇಂಜಿನಿಯರ್‌ಗಳು, ಉದ್ಯಮಿಗಳು ಹಾಗೂ ನಿವೃತ್ತ ಅಧಿಕಾರಿಗಳನ್ನೇ ಗುರಿಯಾಗಿಸುತ್ತಿದ್ದಾರೆ. ಹೆಚ್ಚಿನ ಲಾಭದ ಆಸೆ ತೋರಿಸಿ, ನಕಲಿ ಹೂಡಿಕೆ ಆ್ಯಪ್‌ಗಳು, ಲಿಂಕ್‌ಗಳು ಮತ್ತು ವಾಟ್ಸಾಪ್ ಗ್ರೂಪ್‌ಗಳ ಮೂಲಕ ಬ್ಯಾಂಕ್ ಖಾತೆಗಳನ್ನು ಖಾಲಿ ಮಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಸೈಬರ್ ತಜ್ಞರ ಪ್ರಕಾರ, ಅಪರಿಚಿತ ವಾಟ್ಸಾಪ್ ಗ್ರೂಪ್‌ಗಳು, ಹೂಡಿಕೆ ಸಲಹೆಗಳು ಹಾಗೂ “ಖಚಿತ ಲಾಭ” ಎಂಬ ಭರವಸೆಗಳನ್ನು ಜನರು ನಂಬಬಾರದು. ಯಾವುದೇ ಹೂಡಿಕೆ ಮಾಡುವ ಮೊದಲು ಅಧಿಕೃತ ಮೂಲಗಳಿಂದ ಮಾಹಿತಿ ಪರಿಶೀಲನೆ ಮಾಡುವುದು ಅತ್ಯಗತ್ಯ ಎಂದು ಎಚ್ಚರಿಕೆ ನೀಡಿದ್ದಾರೆ.

















