ವಾರಸುದಾರರಿಲ್ಲದ ಅಪರಿಚಿತ ಶವಕ್ಕೆ ಗೌರವಯುತ ಅಂತ್ಯಸಂಸ್ಕಾರ

ಉಡುಪಿ: ಬೈಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ಕಂಬದಕೋಣೆ ಸಮೀಪದ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದ್ದ ಅಪರಿಚಿತ ವ್ಯಕ್ತಿಯ ಶವಕ್ಕೆ ವಾರಸುದಾರರು ಪತ್ತೆಯಾಗದ ಹಿನ್ನೆಲೆಯಲ್ಲಿ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಸಂರಕ್ಷಸಿಟ್ಟಿದ್ದ ಶವದ ಗೌರವಯುತ ಅಂತ್ಯಸಂಸ್ಕಾರವನ್ನು ನಗರದ ಬಿಡಿನಗುಡ್ಡೆ ದಹನ ಭೂಮಿಯಲ್ಲಿ ಶುಕ್ರವಾರ ನೆರವೇರಿಸಲಾಯಿತು.

ಶವದ ವಾರಸುದಾರರನ್ನು ಪತ್ತೆಹಚ್ಚಲು ಪೊಲೀಸರು ಪ್ರಯತ್ನ ನಡೆಸಿದರೂ ಯಾವುದೇ ಮಾಹಿತಿ ದೊರೆಯದ ಕಾರಣ, ಕಾನೂನು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ನೇತೃತ್ವದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.

ಬೈಂದೂರು ಪೊಲೀಸ್‌ ಠಾಣೆಯ ಎಎಸ್‌ಐ ಸೀತಾರಾಮ್ ಶೆಟ್ಟಿಗಾ‌ರ್, ಮುಖ್ಯ ಆರಕ್ಷಕ ನವೀನ್ ಅವರು ಅಗತ್ಯ ಪ್ರಕ್ರಿಯೆಗಳನ್ನು ನೆರವೇರಿಸಿದರು. ಆಪದ್ಭಾಂದವ ಆಂಬುಲೆನ್ಸ್‌ನ ಇಬ್ರಾಹಿಂ ಗಂಗೊಳ್ಳಿ, ವಿಕಾಸ್‌ ಮೊಗವೀರ ನಾಯಕವಾಡಿ, ಸತೀಶ್ ಕುಮಾರ್ ಹಾಗೂ ವಿಕಾಸ್ ಶೆಟ್ಟಿ ಅಂತ್ಯಸಂಸ್ಕಾರ ಕಾರ್ಯದಲ್ಲಿ ಭಾಗವಹಿಸಿದರು. ಪ್ಲವರ್ ವಿಷ್ಣು, ನಗರಸಭೆ ಸಿಬ್ಬಂದಿ ಹಾಗೂ ಜಿಲ್ಲಾಸ್ಪತ್ರೆಯ ಸಿಬ್ಬಂದಿ ಸಹಕಾರ ನೀಡಿದರು.