ನ್ಯಾಯಾಂಗ ವ್ಯವಸ್ಥೆಯ ಕೆಲ ಲೋಪ ದೋಷಗಳಿಗೆ ಪರಿಹಾರ ಕಂಡುಕೊಂಡಲ್ಲಿ ಪ್ರಕರಣಗಳ ಶೀಘ್ರ ಇತ್ಯರ್ಥ ಸಾಧ್ಯ; ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಅಭಿಮತ

ಉಡುಪಿ: ನ್ಯಾಯಾಂಗ ವ್ಯವಸ್ಥೆಯಲ್ಲಿ‌ ಇರುವ ಕೆಲವೊಂದು ಮೂಲಭೂತ ಲೋಪದೋಷಗಳಿಗೆ ಪರಿಹಾರ ಕಂಡುಕೊಂಡಲ್ಲಿ ಪ್ರಕರಣಗಳ ಶೀಘ್ರ ಇತ್ಯರ್ಥ ಸಾಧ್ಯ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಹೇಳಿದ್ದಾರೆ.

ಉಡುಪಿ ನ್ಯಾಯಾಲಯದ ಸಂಕೀರ್ಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ನ್ಯಾಯಾಲಯದ ಕಟ್ಟಡದ ಮೂರನೇ ಮಹಡಿ, ನೂತನ ಎರಡನೆ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ, ಇ-ಸೇವಾ ಕೇಂದ್ರ, ಹೆಲ್ಪ್ ಡೆಸ್ಕ್ ಮತ್ತು ವಿ.ಸಿ. ಕ್ಯಾಬಿನ್ ನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾದರೂ ಕೋರ್ಟ್ ಗಳಲ್ಲಿರುವ ಕೇಸ್ ಗಳ‌ ಸಂಖ್ಯೆ ಕಡಿಮೆ ಆಗುತ್ತಿಲ್ಲ. ಪ್ರತಿಯೊಂದಕ್ಕೂ ಮೇಲ್ಮನವಿ ಹಾಕಿದರೆ ಕೇಸ್ ಗಳನ್ನು ಶೀಘ್ರ ತೀರ್ಮಾನ ಮಾಡಲು ಆಗುವುದಿಲ್ಲ. ಹಾಗಾಗಿ ನ್ಯಾಯಾಂಗ ವ್ಯವಸ್ಥೆಯಲ್ಲಿನ ಕೆಲವೊಂದು ತಪ್ಪುಗಳನ್ನು ಸರಿಪಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಕಾನೂನು ತರಬೇಕು ಎಂದರು.

ಕೋರ್ಟ್ ಗಳಲ್ಲಿ ಬಾಕಿ ಪ್ರಕರಣಗಳು ಇತ್ಯರ್ಥ ಆಗುತ್ತಿಲ್ಲ. ದಾವೆಗಳು ಇದ್ದರೆ ಸಮಾಜದಲ್ಲಿ ಶಾಂತಿ ಇರಲು ಸಾಧ್ಯವಿಲ್ಲ. ಇದು ಒಂದು ರೀತಿಯ ಕ್ಯಾನ್ಸರ್. ಈ ಕ್ಯಾನ್ಸರ್ ಇಟ್ಟುಕೊಂಡು ಇಷ್ಟೊಂದು ಸವಲತ್ತು ನೀಡಿದರು ಏನು ಪ್ರಯೋಜನ ಆದ್ದರಿಂದ ಕೆಲವು ಅಗತ್ಯಗಳು ಬೇಕಾಗಿವೆ ಎಂದರು.

ಅಧ್ಯಕ್ಷತೆಯನ್ನು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ವಹಿಸಿದ್ದರು. ಹೈಕೋರ್ಟ್ ನ್ಯಾಯಮೂರ್ತಿ ಹಾಗೂಬ ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ರಂಗಸ್ವಾಮಿ ನಟರಾಜ್, ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಟಿ.ಜಿ.ಶಿವಶಂಕರೇಗೌಡ, ಕಾನೂನು ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ವೆಂಕಟೇಶ ನಾಯ್ಕ, ಲೋಕೋಪಯೋಗಿ ಇಲಾಖೆಯ ಮುಖ್ಯ ಅಭಿಯಂತರ ಕಾಂತರಾಜು ಬಿ.ಟಿ ಉಪಸ್ಥಿತರಿದ್ದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸುಬ್ರಹ್ಮಣ್ಯ ಜೆಎನ್‌. ಸ್ವಾಗತಿಸಿದರು. ವಕೀಲರ ಸಂಘದ ಅಧ್ಯಕ್ಷ ಬಿ.ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ರೆನೋಲ್ಡ್ ಪ್ರವೀಣ್ ಕುಮಾರ್ ವಂದಿಸಿದರು. ನ್ಯಾಯವಾದಿ ಮೇರಿ ಶ್ರೇಷ್ಠ ಕಾರ್ಯಕ್ರಮ ನಿರೂಪಿಸಿದರು.