ಮಂಗಳೂರು: ಇಲ್ಲಿನ ಮೂಡಬಿದ್ರೆ-ನಂತೂರು-ಮಂಗಳೂರು ಮಾರ್ಗದಲ್ಲಿ ನೀರುಮಾರ್ಗ ಎನ್ನುವ ಸ್ಥಳವಿದ್ದು, ಇಲ್ಲಿಂದ ಎರಡೂವರೆ ಕಿ.ಮೀ ದೂರದಲ್ಲಿರುವ ಅನಂತ ಪದ್ಮನಾಭ-ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನವಿಲೊಂದು ಗರಿ ಬಿಚ್ಚಿ ಕುಣಿಯುವ ವೀಡಿಯೋ ಒಂದು ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೂರಾರು ಜನರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
ಅರ್ಚಕರ ಕೈಯ ಹಾವ ಭಾವಕ್ಕೆ ತಕ್ಕ ಹಾಗೆ ನವಿಲೊಂದು ಕುಣಿಯುತ್ತಿರುವ ದೃಶ್ಯದ ವೀಡಿಯೋ ತುಣುಕುಗಳು ವೈರಲ್ ಆಗಿದ್ದು, ಈ ನವಿಲಿನ ಬಗ್ಗೆ ಜನರಲ್ಲಿ ಕುತೂಹಲ ಮೂಡಿದೆ. ಈ ನವಿಲಿನ ಹೆಸರು ‘ಮಯೂರ’ ಎಂದಾಗಿದ್ದು, ಸ್ಥಳೀಯ ನಿವಾಸಿಯೊಬ್ಬರಿಗೆ ಸಿಕ್ಕಿದ ನವಿಲಿನ ಮೊಟ್ಟೆಯಿಂದೊಡೆದ ಮರಿಯು, ದೇವಸ್ಥಾನದ ಪರಿಸರದಲ್ಲೆ ಬೆಳೆದು ದೊಡ್ಡದಾಗಿದೆ. ಕಳೆದ ಆರೇಳು ವರ್ಷಗಳಿಂದಲೂ ಈ ನವಿಲು ದೇವಸ್ಥಾನ ಮತ್ತು ಅದರ ಸುತ್ತಲಿನ ಪರಿಸರದಲ್ಲೇ ನೆಲೆಯೂರಿದೆ.
ದೇವಸ್ಥಾನದ ಅರ್ಚಕ ರಾಜೇಶ್ ಭಟ್ ಮತ್ತು ಅವರ ಮನೆಯವರು ಇದನ್ನು ತಮ್ಮ ಮನೆಯ ಸದಸ್ಯರಂತೆಯೆ ಬೆಳೆಸಿದ್ದು, ಮಯೂರ ಕೂಡಾ ಯಾವುದೇ ಭಯವಿಲ್ಲದೆ ದೇವಸ್ಥಾನದ ಪರಿಸರದಲ್ಲಿ ಗರಿ ಬಿಚ್ಚಿ ಕುಣಿಯುತ್ತಿರುತ್ತಾನೆ. ದೇವರ ದರ್ಶನಕ್ಕೆಂದು ಬರುವ ಭಕ್ತಾದಿಗಳೆದುರು ಗರಿ ಬಿಚ್ಚಿ ಕುಣಿದು ತನ್ನ ಮಯೂರ ನರ್ತನದ ಭಾಗ್ಯವನ್ನೂ ಕರುಣಿಸಿದ್ದಾನೆ. ಅರ್ಚಕರು ಕೊಡುವ ಅಕ್ಕಿ, ಮನೆಯ ತೋಟದಲ್ಲಿ ಬೆಳೆದ ತೊಂಡೆಕಾಯಿ ಮತ್ತು ಹುಳು ಹುಪ್ಪಟೆಗಳು ಈತನ ಆಹಾರವಾಗಿದೆ.
ದೇವಸ್ಥಾನದಲ್ಲಿ ಪ್ರತಿದಿನ ಬೆಳಗ್ಗೆ ಹಾಗೂ ಮಧ್ಯಾಹ್ನ ದೇವರ ಪೂಜೆ ವೇಳೆ ಈ ನವಿಲು ನಮಸ್ಕಾರ ಮಂಟಪದ ಎದುರು ತಯಾರಾಗಿರುತ್ತದೆ. ದೇವಸ್ಥಾನದ ಪ್ರಾಂಗಣದಲ್ಲಿ ರಾತ್ರಿ ಕಳೆಯುವ ಈತ, ಬೆಳಗ್ಗೆ 6 ಗಂಟೆಗೆ ದೇವಸ್ಥಾನದ ಬಾಗಿಲು ತೆರೆಯುತ್ತಿದ್ದಂತೆ ಪ್ರವೇಶಿಸಿ ಮಧ್ಯಾಹ್ನಾದವರೆಗೂ ದೇವಸ್ಥಾನದಲ್ಲಿದ್ದು, ಆ ಬಳಿಕ ತೋಟದಲ್ಲಿ ಅಡ್ಡಾಡುತ್ತಿರುತ್ತದೆ ಎಂದು ರಾಜೇಶ್ ಭಟ್ ಮಾಹಿತಿ ನೀಡುತ್ತಾರೆ.
video credits: Raghavendra Agnihotri/ Youtube












