ಕೊಲೆ ಪ್ರಕರಣಗಳ ತನಿಖೆಯಲ್ಲಿ ಸಾಮಾನ್ಯವಾಗಿ ಸಾಕ್ಷಿಗಳು, ಸಿಸಿಟಿವಿ ದೃಶ್ಯಗಳು ಅಥವಾ ಫೊರೆನ್ಸಿಕ್ ಪುರಾವೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಅಮೆರಿಕದ ಮಿಚಿಗನ್‌ನಲ್ಲಿ ನಡೆದ ಒಂದು ವಿಚಿತ್ರ ಪ್ರಕರಣದಲ್ಲಿ, ಮನೆಯಲ್ಲಿದ್ದ ಸಾಕು ಗಿಳಿಯೇ ತನಿಖೆಗೆ ಪ್ರಮುಖ ಸುಳಿವು ನೀಡಿದ ಘಟನ್ ನಡೆದಿದೆ.
ಹೀಗಿದೆ ಘಟನೆ
2015ರಲ್ಲಿ ಅಮೆರಿಕದ ಮಿಚಿಗನ್ ರಾಜ್ಯದ ಸ್ಯಾಂಡ್ ಲೇಕ್‌ನಲ್ಲಿ 45 ವರ್ಷದ ಮಾರ್ಟಿನ್ ಡುರಾಮ್ ತಮ್ಮ ಮನೆಯಲ್ಲಿ ಗುಂಡೇಟಿನಿಂದ ಮೃತರಾಗಿದ್ದರು. ಘಟನೆಯ ವೇಳೆ ಅವರ ಪತ್ನಿ ಗ್ಲೆನ್ನಾ ಡುರಾಮ್ ಕೂಡ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮೊದಲ ಹಂತದಲ್ಲಿ ಪೊಲೀಸರು ಈ ಪ್ರಕರಣವನ್ನು ಹೊರಗಿನವರ ದಾಳಿ ಎಂದು ಶಂಕಿಸಿದ್ದರು. ಆದರೆ ತನಿಖೆಗೆ ಅನಿರೀಕ್ಷಿತ ತಿರುವು ನೀಡಿದ್ದು ಮನೆಯಲ್ಲಿದ್ದ ಸಾಕು ಗಿಳಿ.
ಗಿಳಿಯ ವಿಚಿತ್ರ ವರ್ತನೆ
ಘಟನೆಯ ನಂತರ ಗಿಳಿ ಮನೆಯಲ್ಲಿ ಅಸಹಜವಾಗಿ ವರ್ತಿಸುತ್ತಿತ್ತು. ಅದು ಗಂಡ-ಹೆಂಡತಿಯ ಜಗಳದ ಧ್ವನಿಯನ್ನು ಅನುಕರಿಸುತ್ತಿತ್ತು. “ಗುಂಡು ಹಾರಿಸಬೇಡ” ಎಂಬ ವಾಕ್ಯವನ್ನು ಪದೇ ಪದೇ ಹೇಳುತ್ತಿತ್ತು. ಈ ಮಾತುಗಳು ಕೊಲೆಗೆ ಮುನ್ನ ಮಾರ್ಟಿನ್ ಹೇಳಿದ ಕೊನೆಯ ಮಾತುಗಳಾಗಿರಬಹುದು ಎಂದು ಶಂಕಿಸಲಾಯಿತು.
ಗಿಳಿಯ ಈ ವರ್ತನೆ ಸಂಬಂಧಿಕರಲ್ಲಿ ಅನುಮಾನ ಹುಟ್ಟಿಸಿತು. ಅವರು ಪೊಲೀಸರಿಗೆ ಮಾಹಿತಿ ನೀಡಿದ ನಂತರ ತನಿಖೆಯನ್ನು ಮತ್ತಷ್ಟು ಗಂಭೀರವಾಗಿ ಮುಂದುವರಿಸಲಾಯಿತು. ಗಿಳಿಯ ಹೇಳಿಕೆ ನ್ಯಾಯಾಲಯದಲ್ಲಿ ನೇರ ಸಾಕ್ಷಿಯಾಗದಿದ್ದರೂ, ಪೊಲೀಸರು ಇದನ್ನು ಪ್ರಮುಖ ಸುಳಿವಾಗಿ ಪರಿಗಣಿಸಿದರು.ಬಳಿಕ ಫೊರೆನ್ಸಿಕ್ ಪುರಾವೆಗಳು, ಸಾಕ್ಷಿಗಳ ಹೇಳಿಕೆಗಳನ್ನು ಸಂಗ್ರಹಿಸಲಾಯಿತು
ಸತ್ಯ ಬಯಲಾದದ್ದು ಹೀಗೆ
ತನಿಖೆಯಲ್ಲಿ ಪತ್ನಿ ಗ್ಲೆನ್ನಾ ಡುರಾಮ್ ಅವರೇ ಪತಿಯನ್ನು ಗುಂಡಿಕ್ಕಿ ಕೊಲೆ ಮಾಡಿದ್ದರು ಹಾಗೂ ನಂತರ ತಾವೇ ಆತ್ಮಹತ್ಯೆ ಯತ್ನದಂತೆ ತೋರಿಸಲು ಗುಂಡು ಹಾರಿಸಿಕೊಂಡಿದ್ದರು. ಹಣಕಾಸು ಸಂಬಂಧಿತ ಕಲಹವೇ ಈ ಕೊಲೆಗೆ ಕಾರಣವಾಗಿತ್ತು. ಈ ಎಲ್ಲಾ ವಿಚಾರಣೆಗಳ ನಂತರ 2017ರಲ್ಲಿ ನ್ಯಾಯಾಲಯವು ಪುರಾವೆಗಳ ಆಧಾರದ ಮೇಲೆ ಗ್ಲೆನ್ನಾ ಡುರಾಮ್ ಅವರನ್ನು ಅಪರಾಧಿ ಎಂದು ಘೋಷಿಸಿತು.
ಈ ವಿಚಿತ್ರ ಪ್ರಕರಣ ಈಗ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಆಗಿದ್ದು, “ಗಿಳಿಯೇ ಕೊಲೆ ರಹಸ್ಯ ಬಿಚ್ಚಿಟ್ಟಿತು!” ಎಂಬ ಶೀರ್ಷಿಕೆಯೊಂದಿಗೆ ಜನರಲ್ಲಿ ಆಶ್ಚರ್ಯ ಮೂಡಿಸಿದೆ.

















